ಯಡಿಯೂರಪ್ಪನವರ ಮಗ ಹಾಗೂ ಅಳಿಯ ಬ್ಯಾಂಕ್ ಮುಖಾಂತರ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ: ಸಿದ್ದರಾಮಯ್ಯ
ದಾವಣಗೆರೆ, ಜು.2- ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 20 ರಿಂದ 25 ಪರ್ಸೆಂಟೇಜ್ ಸರ್ಕಾರವಾಗಿದ್ದು, ಲಂಚ ಇಲ್ಲದೇ ಯಾವುದೇ ಕೆಲಸ ನಡೆಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲೆಂದು ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ನಗರದ ಬಾಪೂಜಿ ಎಂಬಿಎ ಕಾಲೇಜಿನ ಹೆಲಿಪ್ಯಾಡ್ಗೆ ಇಂದು ಮಧ್ಯಾಹ್ನ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪುತ್ರ ವಿಜಯೇಂದ್ರೇನೇ ಡಿ ಪ್ಯಾಕ್ಟರ್ ಮುಖ್ಯಮಂತ್ರಿಯಾಗಿದ್ದು, ಯಡಿಯೂರಪ್ಪ ಡಿ ಜೀರೋ ಸಿಎಂ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪನವರ ಮಗ ಹಾಗೂ ಅಳಿಯ ಬ್ಯಾಂಕ್ ಮುಖಾಂ ತರ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಚೆಕ್ ಮೂಲಕ ಲಂಚ ಪಡೆಯುವ ವಿಚಾರ ಬಿಜೆಪಿಗೆ ಹೊಸದಲ್ಲ. ಬಿಜೆಪಿ ಪಾರ್ಟಿಗೆ ಆರ್ಟಿಜಿಎಸ್ ಮೂಲಕ ಹಣ ಪಡೆಯಲಾಗುತ್ತಿದೆ ಎಂದು ಆಪಾದಿಸಿದರು.
ಕಾಂಗ್ರೆಸ್ನಲ್ಲಿ ಯಾವುದೇ ಒಳ ಜಗಳವಿಲ್ಲ. ಗುಂಪುಗಾರಿಕೆಯೂ ಇಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ. ಕಾಂಗ್ರೆಸ್ ನಲ್ಲಿ ನನ್ನ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು, ಮುಂದಿನ ಮುಖ್ಯಮಂತ್ರಿ ನಾನಾಗ ಬೇಕು ಎಂದು ಯಾರು ಹೇಳಿದ್ದಾರೆ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಆಯ್ಕೆ ಬಗ್ಗೆ ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾ ವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಹೊಸದಾಗಿ ಆಯ್ಕೆ ಯಾದ ಶಾಸಕರು ಮತ್ತು ಶಾಸ ಕಾಂಗದ ಪಕ್ಷ ನಾಯಕರ ಅಭಿಪ್ರಾಯ ಪಡೆದು ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಭ್ಯರ್ಥಿಯನ್ನು ಅಂತಿಮಗೊ ಳಿಸಲಿದೆ ಎಂದು ಸ್ಪಷ್ಟಪಡಿಸಿದರು.
ಕೊರೊನಾದಿಂದ ನಿಧನ ಹೊಂದಿದವರಿಗೆ ವಿಪತ್ತು ನಿರ್ವಹಣೆ ಯೋಜನೆಯಡಿ ಪ್ರತಿಯೊಬ್ಬರಿಗೂ 5 ಲಕ್ಷ ಸಹಾಯ ಧನ ನೀಡಲು ಅವಕಾಶವಿದೆ. ಈ ಬಗ್ಗೆ ನಾವು ಕೂಡ ಆಗ್ರಹಿಸಿದ್ದೆವು. ಇದೀಗ ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ ಎಂದು ಅವರು ಹೇಳಿದರು.
ಕೊರೊನಾದಿಂದ ಸಾವನ್ನಪ್ಪಿದ ವರಿಗೆ 5 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು. ಪ್ರವಾಹ ಸೇರಿದಂತೆ ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ ಐದು ಲಕ್ಷ ರೂ. ನೀಡಲಾಗುತ್ತೆ. ಅಂತೆಯೇ ಈಗ ಕೊರೊನಾ ಮಹಾಮಾರಿಯಿಂದ ಮರಣವನ್ನಪ್ಪಿದವರಿಗೆ ಹೆಚ್ಚಿನ ಪರಿಹಾರ ಕೊಡಬೇಕು ಎಂಬುದು ನಮ್ಮ ಒತ್ತಾಯ ಎಂದರು.
ನಾನು ಸರ್ಕಾರಕ್ಕೆ ಎರಡರಿಂದ ಮೂರು ಬಾರಿ ಪತ್ರ ಬರೆದಿದ್ದೇನೆ. ನಾವು ಒತ್ತಾಯಿಸಿದ ಅಂಶಗಳನ್ನೇ ಸುಪ್ರೀಂ ಕೋರ್ಟ್ ಸಹ ಪ್ರಸ್ತಾಪಿಸಿದೆಯಲ್ಲದೇ, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸರ್ಕಾರ ಮಾತ್ರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಇಷ್ಟೊಂದು ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಸರ್ಕಾರ ಹೇಳುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯನಾ. ಅವ್ರೇನೂ ನಮ್ಮ ಪಕ್ಷದವ್ರಾ. ಅವ್ರಿಗೂ ನಮಗೂ ಏನ್ ಸಂಬಂಧ. ಬೇಕು ಅಂತಾನೇ ಸುಳ್ಳು ಹೇಳ್ತಾರೆ. ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ನಾವೆಲ್ಲಿ ಹೊಡೆದಾಡುತ್ತಿದ್ದೇವೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರುಗಳಾದ ಶಾಮನೂರು ಮಲ್ಲಿಕಾರ್ಜುನ್, ಹೆಚ್. ಆಂಜನೇಯ, ಪಿ.ಟಿ. ಪರಮೇಶ್ವರ ನಾಯ್ಕ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.