ಎಸ್ಸೆಸ್‌ರಿಂದ ಉಚಿತ ಲಸಿಕೆ : ಸಿದ್ದರಾಮಯ್ಯ ಮೆಚ್ಚುಗೆ

ದಾವಣಗೆರೆ, ಜು.2- ಕೊರೊನಾ ಸೋಂಕಿನಿಂದ ಜನರನ್ನು ಪಾರು ಮಾಡಲು ಬಿಜೆಪಿ ಸರ್ಕಾರದ ಬಳಿ ಲಸಿಕೆ ಇಲ್ಲದಿದ್ದರೂ ತಮ್ಮ ಬಳಿ ಸಾಕಷ್ಟು ಲಸಿಕೆ ದಾಸ್ತಾನಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಲಸಿಕೆ ಇಲ್ಲದ ಕಾರಣ ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿಕಾರಿದರು.

ನಗರ ದೇವತೆ ಶ್ರೀ ದುರ್ಗಾಂಬಿಕ ದೇವಾಲಯದ ಭೋಜನಾಲಯದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ವರ್ಗದಿಂದ ನೀಡಲಾಗುತ್ತಿರುವ ಉಚಿತ ಲಸಿಕಾ ಶಿಬಿರಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಕೊರೊನಾ ಸೋಂಕಿನಿಂದ ಪಾರಾಗಲು ವ್ಯಾಕ್ಸಿನ್ ಮದ್ದಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ಅಗತ್ಯವಾಗಿದೆ. ಪ್ರತಿಯೊಬ್ಬರಿಗೂ ಲಸಿಕೆ ಕೊಡಿ ಸುವ ಕೆಲಸ ಸರ್ಕಾರದ್ದು. ಆದರೆ ಸರ್ಕಾರ ಅದನ್ನು ಸರಿಯಾಗಿ ನಿಭಾಯಿಸದ ಕಾರಣ   ಶಾಮನೂರು ಶಿವಶಂಕರಪ್ಪ, ಶಾಮನೂರು ಮಲ್ಲಿಕಾರ್ಜುನ್ ಅವರುಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ಹಾಕುವ ಮೂಲಕ ಸಾಕಷ್ಟು ಜೀವಗಳನ್ನು ಉಳಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಲಸಿಕೆ ನೀಡುವುದು ಸರ್ಕಾರದ ಕೆಲಸ. ಶಾಮನೂರು ಶಿವಶಂಕರಪ್ಪ ಅಥವಾ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕೆಲಸವಲ್ಲ. ಹೀಗಿದ್ದರೂ ಸರ್ಕಾರದ ಬಳಿ ಲಸಿಕೆ ಇಲ್ಲ, ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ ಎಂಬ ಸಂದರ್ಭದಲ್ಲಿ ಶಾಮನೂರು ಕುಟುಂಬ ಜನರಿಗೆ ಲಸಿಕೆ ಕೊಡುವ ಕೆಲಸ ಮಾಡುತ್ತಿದೆ ಎಂದು ಅವರು ಪ್ರಶಂಸಿಸಿದರು. ಯಾವುದೇ ಕಾರಣಕ್ಕೂ ಬೇಡವೆನ್ನದೇ ಲಸಿಕೆ ಹಾಕಿಸಿ ಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದರು.

ಈ ವೇಳೆ ಶಾಮನೂರು ಶಿವಶಂಕರಪ್ಪ, ಶಾಮನೂರು ಮಲ್ಲಿಕಾರ್ಜುನ್, ಜಿ. ಪಂ. ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಮೋರ್ಚಾ ಅಧ್ಯಕ್ಷ ಬಿ.ಹೆಚ್. ವೀರಭದ್ರಪ್ಪ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಾಲಯದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಅನಿತಾ ಬಾಯಿ ಮಾಲತೇಶ್ ಜಾಧವ್, ಮುಖಂಡ ರಾದ ಮುದೇಗೌಡ್ರು ಗಿರೀಶ್, ಅಯೂಬ್ ಪೈಲ್ವಾನ್ ಸೇರಿದಂತೆ ಇತರರು ಇದ್ದರು. 

error: Content is protected !!