ಚನ್ನಗಿರಿ, ಜು. 2- ಸರ್ಕಾರಿ ಶಾಲೆಗಳು ಎಂದಾಕ್ಷಣ ಬರೀ ಕೊರತೆ, ಸಮಸ್ಯೆಗಳ ಬಗ್ಗೆಯೇ ಹೆಚ್ಚು ಚರ್ಚೆಗಳಾಗುತ್ತಿದ್ದು, ಆದರೆ ಇಲ್ಲೊಬ್ಬ ಚನ್ನಗಿರಿ ತಾಲ್ಲೂಕಿನ ಮರಬನ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ `ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿ ವಿಜೇತ ಶಿಕ್ಷಕ ಎ.ಎನ್.ಚಂದ್ರಶೇಖರ್ ವಿನೂತನ ಪ್ರಯತ್ನದ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ ಎರಡು ವರ್ಷಗಳಿಂದ ಲಾಕ್‌ಡೌನ್‍ನಿಂದ ಶಾಲೆಗಳು ತೆರೆಯದೇ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶಿಕ್ಷಣ ಇಲಾಖೆ ವಿದ್ಯಾಗಮ ಎಂಬ ಯೋಜನೆ ಮುಖಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅವಕಾಶ ನೀಡಿತ್ತಾದರೂ ಕೊರೊನಾದ ಕರಿ ನೆರಳು ಇದರ ಮೇಲೂ ಚೆಲ್ಲಿ ಈ ಯೋಜನೆಯು ಅರ್ಧಕ್ಕೆ ನಿಲ್ಲುವಂತಾಯಿತು.
ವಿದ್ಯಾರ್ಥಿಗಳ ಹಿತದೃಷ್ಟಿ ಯಿಂದ ಸರ್ಕಾರ ಚಂದನ ವಾಹಿನಿ ಯಲ್ಲಿ ಜುಲೈ ತಿಂಗಳಿಂದ 1ನೇ ತರಗತಿಯಿಂದ 10 ನೇ ತರಗತಿಯ ವರೆಗೆ ಪಾಠಗಳನ್ನು ಪ್ರಸಾರ ಮಾಡಲು ಯೋಜನೆ ಹಮ್ಮಿಕೊಂ ಡಿದೆ. ಈ ಯೋಜನೆಯ ಬಗ್ಗೆ ಸಾಕಷ್ಟು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ಕೊರತೆಯಿರುವ ಹಿನ್ನೆಲೆಯಲ್ಲಿ ಈ ಶಿಕ್ಷಕ ಧ್ವನಿವರ್ಧಕದ ಮೂಲಕ ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠ-ಪ್ರವಚನಗಳ ಕುರಿತು ಗ್ರಾಮದ ಪ್ರತಿಯೊಂದು ಬೀದಿಗಳಲ್ಲಿ ಸಂಚರಿಸಿ, ಮಾಹಿತಿ ಮುಟ್ಟಿಸುವ ಕೆಲಸವನ್ನು ಮಾಡಿ ಶಿಕ್ಷಣ ಇಲಾಖೆಯ ಮತ್ತು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಗ್ರಾಮದಲ್ಲಿ ಸಮೀಕ್ಷೆ ನಡೆಸಿದಾಗ ಬಹಳಷ್ಟು ಪೋಷಕರ ಬಳಿ ಆಂಡ್ರಾಯ್ಡ್ ಮೊಬೈಲ್ ಇಲ್ಲದ ಹಿನ್ನೆಲೆಯಲ್ಲಿ ಆನ್‍ಲೈನ್ ತರಗತಿ ಗಳ ಉಪಯೋಗ ಪಡೆದುಕೊಳ್ಳದೇ ವಿದ್ಯಾಥಿಗಳು ವಂಚಿತರಾಗುತ್ತಿದ್ದದ್ದು ಗಮನಕ್ಕೆ ಬಂದಿತು. ಆದ್ದರಿಂದ ಚಂದನ ವಾಹಿನಿಯಲ್ಲಿ ಪ್ರಸಾರ ವಾಗುವ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳುವ ಸದುದ್ದೇಶದಿಂದ ಧ್ವನಿವರ್ಧಕದ ಮೂಲಕ ಎಲ್ಲಾ ಶಿಕ್ಷಕಿಯರ ಸಹಾಯದಿಂದ ಮಾಹಿತಿ ಮುಟ್ಟಿಸುವ ಕೆಲಸ ಮಾಡುತ್ತಿದ್ದು, ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೂ ಅತ್ಯುತ್ತಮ ಸ್ಪಂದನೆ ನೀಡುತ್ತಿದ್ದಾರೆ ಎನ್ನುತ್ತಾರೆ ಶಿಕ್ಷಕ ಎ.ಎನ್.ಚಂದ್ರಶೇಖರ್.
ಶಾಲೆಯ ಮುಖ್ಯೋಪಾಧ್ಯಾಯಿನಿ ಯಾದ ಎಸ್.ಆರ್.ಪುಷ್ಪಾವತಿ, ಶಿಕ್ಷಕ ಎ.ಎನ್.ಚಂದ್ರಶೇಖರ್ ಮತ್ತು ಶಿಕ್ಷಕಿಯರಾದ ಟಿ.ಆರ್.ರೇಖಾ, ಶಮೀಮ್ ಬಾನು ಇವರು ಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಮನೆಗೂ ಭೇಟಿ ಸಮೀಕ್ಷೆ ನಡೆಸಿ, ಆಂಡ್ರಾಯ್ಡ್ ಮೊಬೈಲ್ ಇರುವ ಪ್ರತಿಯೊಬ್ಬ ವಿದ್ಯಾರ್ಥಿ ಗಳ ತರಗತಿವಾರು ವಾಟ್ಸಾಪ್ ಗ್ರೂಪ್ ರಚಿಸಿ, ಪಾಠಗಳ ಲಿಂಕ್‍ನ್ನು ಮತ್ತು ಓದು – ಬರಹಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಳುಹಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿ ಗೆಯ ಬಗ್ಗೆ ವಿಶೇಷ ಗಮನಹರಿಸಿದ್ದಾರೆ.