ದಾವಣಗೆರೆ, ಏ.9- ಸಮಾಜದ ಸಂಘಟನೆ, ಜಾಗೃತಿಗಾಗಿ ಕಳೆದ ಮೂರು ವರ್ಷಗಳಿಂದ ವಾಲ್ಮೀಕಿ ಜಾತ್ರೆಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ವಾಲ್ಮೀಕಿ ಜಾತ್ರೆ ಸಮಾಜಕ್ಕೆ ಹೊಸ ದಿಕ್ಸೂಚಿ ಮೂಡಿಸುತ್ತಿದೆ ಎಂದು ರಾನಜಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ನಗರದ ಜಿಲ್ಲಾ ನಾಯಕ ವಿದ್ಯಾರ್ಥಿ ನಿಲಯದ ಸಮುದಾಯ ಭವನದಲ್ಲಿ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಯಶಸ್ಸಿಗೆ ಶ್ರಮಿಸಿದ ವಾಲ್ಮೀಕಿ ಸೇವಾ ಸಮಿತಿಯ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರವಾಗಿ ನಿರ್ಲಕ್ಷ್ಯ ಮನೋಭಾವನೆ ಹೊಂದಿರುವ ಈ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸಮುದಾಯದವರು ರಾಜಕೀಯವಾಗಿ ಪ್ರಜ್ಞಾವಂತರಾಗಿ ಸಮಾಜಕ್ಕೆ ಸಂವಿಧಾನಿಕ ಹಕ್ಕು ಕಲ್ಪಿಸದಿದ್ದರೆ ನಿಮಗೆ ಬುದ್ಧಿ ಕಲಿಸುತ್ತೇವೆ ಎಂದು, ನೀವು ಮತ ಹಾಕಿ ಗೆಲ್ಲಿಸಿದವರು ನಿಮ್ಮೂರಿಗೆ ಬಂದಾಗ ಕೇಳಿ ಎಂದು ಹೇಳಿದ ಸ್ವಾಮೀಜಿ, ಸಮಾಜದ ಬಂಧುಗಳು ರಾಜಕೀಯ ನಾಯಕರ ಅನುಯಾಯಿಗಳಾಗದೆ, ವಾಲ್ಮೀಕಿ ಅವರ ಅನುಯಾಯಿಗಳಾಗಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ. ವೀರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ವಿಶ್ರಾಂತ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, 3ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್, ವಾಲ್ಮೀಕಿ ಸಂಪದ ಸ್ಮರಣ ಸಂಪುಟದ ಸಂಪಾದಕ ಡಾ. ಎ.ಬಿ. ರಾಮಚಂದ್ರಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಹಾನಗರ ಪಾಲಿಕೆ ಸದಸ್ಯ ಪೈಲ್ವಾನ್ ವಿನಾಯಕ, ಎನ್.ಎಂ. ಆಂಜನೇಯ ಗೂರೂಜಿ, ದಾಗಿನಕಟ್ಟೆ ಮಹೇಶ್ವರಪ್ಪ, ಜಿಲ್ಲಾ ಎಸ್ಟಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ, ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ್, ಜಿಗಳಿಯ ಹೆಚ್.ಟಿ. ರಂಗನಾಥ್, ಶಿಕ್ಷಕ ಜಿ.ಆರ್. ನಾಗರಾಜ್, ಗುಮ್ಮನೂರು ಶಂಭಣ್ಣ, ಪತ್ರಕರ್ತ ಜಿಗಳಿ ಪ್ರಕಾಶ್, ಶ್ಯಾಗಲೆ ಮಂಜಣ್ಣ, ಐಗೂರು ಹನುಮಂತಪ್ಪ, ಮಲ್ಲಾಪುರ ದೇವರಾಜ್, ಶಾಮನೂರು ಪ್ರವೀಣ್, ಫಣಿಯಾಪುರ ಲಿಂಗರಾಜ್, ಬಿಳಿಚೋಡು ಮಹೇಶ್, ಬಿದರಕೆರೆ ರವಿಕುಮಾರ್, ಲಕ್ಷ್ಮಣ, ಮಲೇಬೆನ್ನೂರಿನ ಪಾಳೇಗಾರ್ ನಾಗರಾಜ್, ಬಸವರಾಜ್, ಜಿಲ್ಲಾ ವಾಲ್ಮೀಕಿ ಮಹಿಳಾ ಸಮಾಜದ ವಿಜಯಶ್ರೀ ಮಹೇಂದ್ರಕುಮಾರ್, ಗೌರಮ್ಮ ಮಂಜುನಾಥ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಸಭೆಯಲ್ಲಿ ರಾಘು ದೊಡ್ಮನಿ ಸ್ವಾಗತಿಸಿದರು.