ವಾರ್ಡ್‌ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

 ‘ಗುಡ್ ಮಾರ್ನಿಂಗ್ ದಾವಣಗೆರೆ’ ಗೆ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಚಾಲನೆ

ದಾವಣಗೆರೆ, ಏ.9- ನಗರದ ವಾರ್ಡ್‌ಗಳಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವ ಸಲುವಾಗಿ `ಗುಡ್ ಮಾರ್ನಿಂಗ್ ದಾವಣಗೆರೆ’ ವಿನೂತನ ಕಾರ್ಯಕ್ರಮಕ್ಕೆ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಚಾಲನೆ ನೀಡಿದರು.

ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆ ವರೆಗೆ ನಗರದ  32 ಹಾಗೂ 33ನೇ ವಾರ್ಡ್‌ ಗಳಲ್ಲಿ ಪಾಲಿಕೆ ಸದಸ್ಯರು, ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಂಚರಿಸಿ ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು. 

ಪಾರ್ಕ್ ಜಾಗ ಹದ್ದುಬಸ್ತು: 32ನೇ ವಾರ್ಡ್‌ನಲ್ಲಿ ಮಹಾನಗರ ಪಾಲಿಕೆಗೆ ಸೇರಿದ ಉದ್ಯಾನವನದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಜಲ್ಲಿ ಕಲ್ಲು, ಮಣ್ಣು  ಹಾಕಿರುವುದನ್ನು ಗಮನಿಸಿದ ಮೇಯರ್ ವೀರೇಶ್, ಪಾರ್ಕ್ ಜಾಗ ಹದ್ದುಬಸ್ತು ಮಾಡುವ ಕುರಿತು ಸ್ಥಳದಲ್ಲಿಯೇ ಚರ್ಚಿಸಿದರು. ನಂತರ ನಗರದಲ್ಲಿ ಬರುವ ಇಂತಹ ಪಾರ್ಕ್‌ ಜಾಗ ಗುರುತಿಸಿ ಹದ್ದುಬಸ್ತು ಮಾಡಲು ಟೆಂಡರ್ ಕರೆಯಲು ತೀರ್ಮಾನಿಸಲಾಯಿತು.

ಪಾಲಿಕೆ ಬೋರ್‌ ನೀರು ಮನೆ ಕಟ್ಟಲು ಬಳಕೆ: ಪಾಲಿಕೆ ವ್ಯಾಪ್ತಿಯ ಬೋರ್‌ ನೀರನ್ನು ಮನೆ ಕಟ್ಟಲು ಬಳಕೆ ಮಾಡಿಕೊಳ್ಳುತ್ತಿದ್ದುದು ಹಾಗೂ ಅನಗತ್ಯವಾಗಿ ಪೋಲು ಮಾಡುತ್ತಿರುವುದು ಕಂಡು ಬಂತು. ಈ ವೇಳೆ ನಾಗರಿಕರಿಗೆ ತಿಳಿಹೇಳಿದ ತಂಡ. ನೀರು ಪೋಲು ಮಾಡದಂತೆ ಸೂಚಿಸಿತು.

ರಾಜ ಕಾಲುವೆಯಲ್ಲಿ ತ್ಯಾಜ್ಯದ ರಾಶಿ: ಸ್ಮಾರ್ಟ್  ಸಿಟಿ ಯೋಜನೆಯಡಿ ನಿರ್ಮಿಸಿರುವ ರಾಜ ಕಾಲುವೆ ಬಗ್ಗೆ ದೂರುಗಳು ಕೇಳಿ ಬಂದವು. ಕಾಮಗಾರಿ ಕಳಪೆಯಾಗಿದೆ ಎಂದು ಕೆಲವರು ದೂರಿದರೆ, ರಾತ್ರಿ ವೇಳೆ ಚಿಕನ್ ಅಂಗಡಿಯವರು ತ್ಯಾಜ್ಯ ತಂದು ಸುರಿಯುತ್ತಿದ್ದಾರೆ ಎಂದು ಕೆಲ ಸಾರ್ವಜನಿಕರು ದೂರಿತ್ತರು. ರಾಜ ಕಾಲುವೆಯ ಗೋಡೆ ಮತ್ತಷ್ಟು ಎತ್ತರಗೊಳಿಸಿ, ಚೈನ್‌ಲಿಂಕ್ ಮೆಶ್ ಅಳವಡಿಸಲು ಮೇಯರ್ ಸೂಚಿಸಿದರು.

ಜಲಸಿರಿ ಯೋಜನೆಯ ಪೈಪ್ ಲೈನ್‌ ಅಳವಡಿಕೆ ವೇಳೆ ಮಹಾನಗರ ಪಾಲಿಕೆ ಪೈಪ್‌ಲೈನ್‌ಗೆ ಹಾನಿಯಾಗಿದ್ದನ್ನು ಗಮನಿಸಿದ ಮೇಯರ್ ಹಾನಿ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವಂತೆ ಹೇಳಿದರು.

ಕೆಲ ಮನೆಗಳ ಮುಂದೆ ನಲ್ಲಿ ನೀರು  ಪೋಲಾಗುತ್ತಿರುವುದನ್ನು ಗಮನಿಸಿ, ನಲ್ಲಿಗೆ ಟ್ಯಾಪ್ ಅಳವಡಿಸುವಂತೆ ಸೂಚಿಸಲಾಯಿತು.  ರಸ್ತೆಗಿಂತ ಎತ್ತರದಲ್ಲಿದ್ದ ಯುಜಿಡಿ ಮ್ಯಾನ್‌ ಹೋಲ್ ಗಮನಿಸಿದ ಮೇಯರ್ ವೀರೇಶ್, ರಸ್ತೆ ಕಾಮಗಾರಿ ನಡೆಸುವ ಎಂಜಿನಿಯರ್‌ಗೆ ಮ್ಯಾನ್‌ಹೋಲ್ ಮಟ್ಟಕ್ಕೆ ಮಣ್ಣು ಹಾಕಿ ರಸ್ತೆ ಕಾಮಗಾರಿ ನಡೆಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯೆ ಉಮಾ ಪ್ರಕಾಶ್, ಸಮಸ್ಯೆ ಅರಿತು ಪರಿಹಾರ ಕಲ್ಪಿಸಲು `ಗುಡ್ ಮಾರ್ನಿಂಗ್ ದಾವಣಗೆರೆ’ ಉತ್ತಮ ಕಾರ್ಯಕ್ರಮವಾಗಿದೆ. ಇದಕ್ಕೆ ಜನರ  ಸಹಕಾರವೂ ಅಗತ್ಯ. ಅನಗತ್ಯ ನೀರು ಪೋಲಾಗದಂತೆ, ಖಾಲಿ ಸೈಟುಗಳಲ್ಲಿ ಕಸ ಹಾಕದಂತೆ ಜನತೆ ಎಚ್ಚರಿಕೆ ವಹಿಸಬೇಕು ಎಂದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡುತ್ತಾ, ವಾರ್ಡ್‌ಗಳನ್ನು ಸಮಸ್ಯೆ ಅರಿತು, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ 45  ವಾರ್ಡ್‌ಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೆಲ ಮನೆಗಳ ಮಾಲೀಕರು ರಸ್ತೆ ಮೇಲೆ ರಾಂಪ್ ಹಾಕಿಕೊಂಡಿದ್ದು, ವಾಹನ ಸಂಚಾರಕ್ಕೆ ವ್ಯತ್ಯಾಯವಾಗುವಂತಿದ್ದರೆ ತೆಗೆಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಖಾಲಿ ಸೈಟು ಸ್ವಚ್ಛ ಮಾಡಿ ಮಾಲೀಕರಿಂದಲೇ ದಂಡ ವಿಧಿಸುವ ಕಾರ್ಯವನ್ನು ಪ್ರಾಯೋಗಿಕವಾಗಿ ಶಾಮನೂರು ರಸ್ತೆಯಲ್ಲಿ ಮಾಡಲಾಗುತ್ತಿದೆ ಎಂದರು.

ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ನಾಮ ನಿರ್ದೇಶಿತ ಸದಸ್ಯ ಪಿ.ಎಸ್. ಬಸವರಾಜ್,  ಮಂಜುನಾಯ್ಕ, ನರೇಂದ್ರ, ಉಪ ಆಯುಕ್ತ ಎ.ನಾಗರಾಜ್, ಎಂಜಿನಿಯರ್‌ಗಳಾದ ಸಂತೋಷ್, ವಿನಾಯಕ್, ಶೃತಿ ಇತರರು ವಾರ್ಡ್‌ ಭೇಟಿ ಕಾರ್ಯಕ್ರಮದಲ್ಲಿದ್ದರು.

error: Content is protected !!