3ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಗೆ ಸಜ್ಜಾದ ರಾಜನಹಳ್ಳಿ ಮಠ

ಈ ವರ್ಷದ ಜಾತ್ರೆಗೆ ರಾಷ್ಟ್ರಮಟ್ಟದ ಸಾಂಸ್ಕೃತಿಕ ಉತ್ಸವದ ಮೆರಗು

ಇಂದು, ನಾಳೆ ನಡೆಯಲಿರುವ ಜಾತ್ರೆಯಲ್ಲಿ ವಿವಿಧ ಮಠಾಧೀಶರು, ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ಚಿತ್ರನಟರು, ಹೋರಾಟಗಾರರು, ಸಾಧಕರು ಭಾಗವಹಿಸಲಿದ್ದಾರೆ

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಮತ್ತು ನಾಳೆ 3ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರಾ ಮಹೋತ್ಸವ ಜರುಗಲಿದ್ದು, ಅದಕ್ಕಾಗಿ ಗುರುಪೀಠ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಭಕ್ತರನ್ನು, ಅತಿಥಿಗಳು ಸ್ವಾಗತಿಸುವ ಫ್ಲೆಕ್ಸ್ ಕಟೌಟ್‌ಗಳನ್ನು ಎಲ್ಲೆಡೆ ರಾಜಾಜಿಸುತ್ತಿದ್ದು, ಹಸಿರು-ತೋರಣಗಳಿಂದ, ಹೂವಿನ ಅಲಂಕಾರದಿಂದ ಮಠ ನವ ವಧುವಿನಂತೆ ಸಿಂಗಾರಗೊಂಡಿದೆ. ರಾತ್ರಿ ವೇಳೆಯಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರ ಮಠದ ವೈಭವವನ್ನು ಹೆಚ್ಚಿಸಿದೆ.

ದಾವಣಗೆರೆಯ ಕೆಟಿಜಿ ನಗರ ಲಕ್ಷ್ಮಣ ಅವರು ಜಾತ್ರೆಯ ಶಾಮಿಯಾನವನ್ನು ವ್ಯವಸ್ಥಿತವಾಗಿ ಹಾಕಿದ್ದು, ವೇದಿಕೆ ಹಾಗೂ ಮಹಾಮಂಟಪ ಎಲ್ಲರನ್ನೂ ಕೈ ಬೀಸಿ ಕರೆಯುವಂತಿದೆ.

ದಾಸೋಹ ಮಂಟಪವೂ ವಿಶಾಲವಾಗಿದ್ದು, 100 ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಕೊಮಾರನಹಳ್ಳಿಯ ವಾಸುದೇವಚಾರ್ ನೇತೃತ್ವದಲ್ಲಿ 500 ಜನ ಅಡುಗೆ ತಯಾರಕರ ತಂಡ ಇಲ್ಲಿ ತಿಂಡಿ, ನಂತರ ಇಡೀ ದಿನ ಗೋಧಿ ಹುಗ್ಗಿ, ಪಲ್ಯ, ರೊಟ್ಟಿ, ಅನ್ನ-ಸಾಂಬಾರ್ ನೀಡಲಿದ್ದಾರೆ.

ಜಾತ್ರೆಗಾಗಿ ಕೈಗೊಂಡಿದ್ದ ಎಲ್ಲಾ ಸಿದ್ಧತೆಗಳಿಗೆ ಭಾನುವಾರ ಸಂಜೆ ಅಂತಿಮ ರೂಪ ಕೊಡಲಾಯಿತು. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಖುದ್ದು ಹಾಜರಿದ್ದು, ಜಾತ್ರೆಯ ಸಿದ್ಧತೆಗಳನ್ನು ಪೂರ್ಣಗೊಳಿಸಿದರು.

ಭಾರತೀಯ ಪರಂಪರೆಯಲ್ಲಿ ಹಲವು ಸಮುದಾಯಗಳು ಧಾರ್ಮಿಕ ಮಠ-ಪೀಠಗಳಿಂದ ಸಾಮಾಜಿಕ ಜಾಗೃತಿಯೊಂದಿಗೆ ಶೈಕ್ಷಣಿಕ ಕೊಡುಗೆ ನೀಡುತ್ತಾ ಬಂದಿವೆ. ಈ ನಿಟ್ಟಿನಲ್ಲಿ ವಾಲ್ಮೀಕಿ ನಾಯಕ ಜನಾಂಗವು ಶ್ರೀ ಮಹರ್ಷಿ ವಾಲ್ಮೀಕಿ ಅವರ ಹೆಸರಿನಲ್ಲಿ ಸಮಾಜದ ಹಿರಿಯರೆಲ್ಲರೂ ಸೇರಿ ಫೆಬ್ರವರಿ 9, 1998 ರಲ್ಲಿ ರಾಜನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಗುರುಪೀಠ ಸ್ಥಾಪನೆಯೊಂದಿಗೆ, ಮಠದ ಪ್ರಥಮ ಜಗದ್ಗುರುಗಳಾಗಿ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು.

ಶ್ರೀಗಳು ವಾಲ್ಮೀಕಿ ರಾಮಾಯಣದ ಸಂದೇಶವನ್ನು ಸಮಾಜದ ಜನರಿಗೆ ತಿಳಿಸುತ್ತಾ, ಸಮಾಜವನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳೆಸಲು ಹಗಲಿರುಳು ಶ್ರಮಿಸಿದರು.

ಸಮಾಜದ ಜಾಗೃತಿಗಾಗಿ ಮತ್ತು ಅಭಿವೃದ್ಧಿಗಾಗಿ ಅವರು ನಡೆಸಿದ ಹೋರಾಟ ಇಂದಿಗೂ ಜನಮಾ ನಸದಲ್ಲಿ ಅಚ್ಚಳಿಯದೇ ಉಳಿದಿದೆ. ಪುಣ್ಯಾನಂದಪುರಿ ಶ್ರೀಗಳು ರೈಲ್ವೆ ಅಪಘಾತದಲ್ಲಿ ಅಕಾಲಿಕವಾಗಿ ಲಿಂಗೈಕ್ಯರಾದ ನಂತರ ಗುರುಪೀಠದ 2ನೇ ಪೀಠಾಧಿಪತಿಯಾಗಿ ಬಂದಂತಹ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಕಳೆದ 12 ವರ್ಷಗಳಿಂದ ನಾಡಿನ ಉದ್ದಗಲಕ್ಕೂ ನಿರಂತರವಾಗಿ ಸಂಚರಿಸಿ, ವಾಲ್ಮೀಕಿ ನಾಯಕ ಜನಾಂಗವು ಹಿಂದುಳಿಯಲು ಕಾರಣಗಳೇನೆಂಬುದನ್ನು ಅರಿತು, ಇತರೆ ಸಮಾಜ ಗಳಂತೆ ಮುಖ್ಯ ವಾಹಿನಿಗೆ ಬರಲು ಅಗತ್ಯವಾದ ರಚನಾತ್ಮಕ ಕಾರ್ಯಕ್ರಮ ಹಾಗೂ ಹೋರಾಟ ಗಳನ್ನು ಹಮ್ಮಿಕೊಂಡು ಸಮಾಜವನ್ನು ಸಂಘಟಿ ಸುತ್ತಾ ಬಂದಿದ್ದಾರೆ. ಜನ ಜಾಗೃತಿಗಾಗಿ `ಜಾತ್ರೆ’ ಎಂಬ ಪರಿಕಲ್ಪನೆಯೊಂದಿಗೆ ಕಳೆದೆರಡು ವರ್ಷ ಗಳಿಂದ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆಯನ್ನು ನಡೆಸುತ್ತಾ ಸಮಾಜದ ಜನರಲ್ಲಿ ವೈಚಾರಿಕತೆ, ಸಾಂಸ್ಕೃತಿಕ ಪರಂಪರೆಯನ್ನು ಹಾಗೂ  ಭಾವನಾತ್ಮಕ ಸಂಬಂಧವನ್ನು ಬೆಸೆಯುವ ಕೆಲಸ ಮಾಡುತ್ತಿದ್ದಾರೆ.

3ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಗೆ ಸಜ್ಜಾದ ರಾಜನಹಳ್ಳಿ ಮಠ - Janathavani 3ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಗೆ ಸಜ್ಜಾದ ರಾಜನಹಳ್ಳಿ ಮಠ - Janathavani

ಸಮಾಜಕ್ಕೆ ಜನಸಂಖ್ಯೆಗನುಗುಣವಾಗಿ ಸಂವಿಧಾನಿಕವಾಗಿ ಸಿಗಬೇಕಾದ ಮೀಸಲಾತಿ ಪ್ರಮಾಣವನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕೆಂಬ ಬಲವಾದ ಒತ್ತಾಯ ಹಾಗೂ ಹೋರಾಟವನ್ನು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ  ಮಾಡುತ್ತಿದ್ದು, ಅದಕ್ಕಾಗಿ ರಾಜನಹಳ್ಳಿ ಯಿಂದ ರಾಜಧಾನಿಯವರೆಗೂ ಪಾದಯಾತ್ರೆ ಯನ್ನೂ ಮಾಡಿ, ಸರ್ಕಾರದ ಗಮನ ಸೆಳೆದಿದ್ದಾರೆ.

ಇದುವರೆಗೂ ಸಮಾಜಕ್ಕೆ ಆಗಿರುವ ಅನ್ಯಾಯ ವನ್ನು ಸರಿಪಡಿಸಲು ಸಮಾಜ ಜಾಗೃತಿಯಾಗಿ ಸಾಂಘಿಕ ಹೋರಾಟದ ಶಕ್ತಿ ಪ್ರದರ್ಶನ ಈ ಜಾತ್ರೆ ಮೂಲಕ ಆಗಬೇಕೆಂಬುದೂ ಶ್ರೀಗಳ ಆಶಯವಾಗಿದೆ.

ಈ ಜಾತ್ರೆ ಬುಡಕಟ್ಟು ಜನರಲ್ಲಿ ಹೊಸ ಬದಲಾವಣೆ ಹಾಗೂ ಸಮಾಜಕ್ಕೆ ಹೊಸ ದಿಕ್ಸೂಚಿ ಆಗಬೇಕೆಂಬ ನಿರೀಕ್ಷೆ ಹೊಂದಿರುವ ಶ್ರೀಗಳು 3ನೇ ವರ್ಷದ ಜಾತ್ರೆ ಯಶಸ್ಸಿಗಾಗಿ ರಾಜ್ಯದ 150 ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ, ಅವರ ಕುಂದು-ಕೊರತೆಗಳನ್ನು ಆಲಿಸಿ, ಸಂಘಟನೆ-ಹೋರಾಟದ ಬಗ್ಗೆ ತಿಳಿಸಿ, ಜಾತ್ರೆಗೆ ಆಹ್ವಾನ ನೀಡಿ ಬಂದಿದ್ದಾರೆ. ಸಮಾಜದ ಪ್ರಮುಖ ಜಾತ್ರೆಯಾಗಿ ಹೊರಹೊಮ್ಮಿರುವ ವಾಲ್ಮೀಕಿ ಜಾತ್ರೆಯನ್ನು ಈ ವರ್ಷ ಕೋವಿಡ್ ಇರುವ ಕಾರಣ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ, ಆಚರಿಸಲು ಕೆಲವು ಅಗತ್ಯ ಸಿದ್ದತೆಗಳನ್ನು ಜಿಲ್ಲಾಡಳಿತದ ಸಹಯೋಗದಲ್ಲಿ ಶ್ರೀಗಳು ಕೈಗೊಂಡಿದ್ದಾರೆ.

ಮಠದ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಗಿದ್ದು, ಸ್ವಚ್ಛತೆಗೆ ಒತ್ತು ನೀಡಿ, ಅಲ್ಲಲ್ಲಿ ಜ್ವರ ತಪಾಸಣೆ ಹಾಗೂ ಸ್ಯಾನಿಟೈಜ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಇಲಾಖೆಗಳಲ್ಲಿ ಜನರಿಗೆ ಸಿಗುವ ಸೌಲಭ್ಯಗಳನ್ನು ತಿಳಿಸುವುದಕ್ಕಾಗಿ ಜಾತ್ರೆ ಯಲ್ಲಿ 20ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಹಾಕಲಾಗಿದೆ. 

ಮುಖ್ಯಮಂತ್ರಿ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸತೀಶ್ ಜಾರಕಿಹೊಳಿ, ಹೆಚ್.ಡಿ.ರೇವಣ್ಣ, ನಟ ಕಿಚ್ಚ ಸುದೀಪ್ ಅವರು ಹೆಲಿಕಾಪ್ಟರ್‌ನಲ್ಲಿ ಆಗಮಿಸುವ ಸಾಧ್ಯತೆ ಇದ್ದು, ಅದಕ್ಕಾಗಿ 4 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ.

ಮಠದ ಹಿಂಭಾಗ ವಿಶಾಲವಾದ ಜಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಎಲ್ಲಾ ಕಡೆ ಜನರಿಗೆ ಮಾರ್ಗ ಸೂಚಿಗಳ ನಾಮಫಲಕ ಹಾಕಲಾಗಿದೆ.

ಬಿಗಿ ಭದ್ರತೆ : ಈ ಜಾತ್ರೆಗೆ 800 ಕ್ಕೂ ಹೆಚ್ಚು ಪೊಲೀಸರ ಭದ್ರತೆ ನೀಡಲಾಗಿದೆ. ಐಜಿಪಿ, ಎಸ್ಪಿ ಅವರ ಮಾರ್ಗದರ್ಶನದಲ್ಲಿ 5 ಡಿವೈಎಸ್ಪಿ, 16 ಸಿಪಿಐ, 39 ಪಿಎಸ್ಐ, 70 ಎಎಸ್ಐ ಮತ್ತು 550 ಪೊಲೀಸ್ ಸಿಬ್ಬಂದಿ, 2 ಕೆಎಸ್‌ಆರ್‌ಪಿ ತುಕಡಿ, 4 ಡಿಎಆರ್‌ಗಳನ್ನು ಭದ್ರತೆಗೆ ನೇಮಿಸಲಾಗಿದೆ ಎಂದು ಸಿಪಿಐ ಸತೀಶ್, ಪಿಎಸ್ಐ ರವಿಕುಮಾರ್ ಮಾಹಿತಿ ನೀಡಿದರು.

ಡಿಸಿ, ಎಸ್ಪಿ ಭೇಟಿ : ಭಾನುವಾರ ಸಂಜೆ ಮಠಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಅವರು ಜಾತ್ರೆಯ ಸಿದ್ದತೆ ಹಾಗೂ ಭದ್ರತೆಗಳನ್ನು ಶ್ರೀಗಳ ಸಮ್ಮುಖದಲ್ಲಿ ಪರಿಶೀಲಿಸಿದರು.

ಸಾಂಸ್ಕೃತಿಕ ಉತ್ಸವದ ಮೆರಗು : ಈ ವರ್ಷದ ಜಾತ್ರೆಗೆ ಜಿ.ಪಂ. ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಅವರ ಉಸ್ತುವಾರಿಯಲ್ಲಿ ರಾಷ್ಟ್ರಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಂದು ಸಂಜೆ 6 ರಿಂದ ರಾತ್ರಿ 10 ರವರೆಗೆ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ, ಅಸ್ಸಾಂ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಒರಿಸ್ಸಾ, ಕೇರಳ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಅಂತರರಾಷ್ಟ್ರೀಯ ಕಲಾವಿದರಿಂದ ವಿಭಿನ್ನ ರೀತಿಯ ಸಾಂಸ್ಕೃತಿಕ ಶೈಲಿಯ ಸಾಂಪ್ರದಾಯಿಕ ನೃತ್ಯಗಳು ಪ್ರದರ್ಶನಗೊಳ್ಳಲಿವೆ. ರಾತ್ರಿ 11 ಗಂಟೆಯಿಂದ ಹಾಸನ ಜಿಲ್ಲಾ ವಾಲ್ಮೀಕಿ ನಾಯಕ ಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಸಾಮೂಹಿಕ ವಿವಾಹ : ಇಂದು ಬೆಳಿಗ್ಗೆ 8 ಗಂಟೆಗೆ ರಾಜನಹಳ್ಳಿಯಿಂದ ಶ್ರೀಮಠದವರೆಗೆ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ, ನಂತರ 9 ಗಂಟೆಗೆ ದೊಡ್ಡೇರಿಯ ಶ್ರೀ ಗುರು ದತ್ತಾವಧೂತ ಆಶ್ರಮದ ಶ್ರೀ ಸತ್‌ಉಪಾಸಿ ಮಲ್ಲಪ್ಪ ಸ್ವಾಮೀಜಿ   ವಾಲ್ಮೀಕಿ ಧ್ವಜಾರೋಹಣದ ಮೂಲಕ ಜಾತ್ರೆಗೆ ಚಾಲನೆ ನೀಡುವರು.

10 ಗಂಟೆಗೆ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕೆ.ಬಿ.ಕೋಳಿವಾಡ, ಎಸ್.ರಾಮಪ್ಪ, ಹೆಚ್.ಪಿ.ರಾಜೇಶ್, ಬಿ.ಪಿ.ಹರೀಶ್, ಹೆಚ್.ಎಸ್.ಶಿವಶಂಕರ್, ಡಿ.ಜಿ.ಶಾಂತನ ಗೌಡ, ಮಾಹಿಮಾ ಪಟೇಲ್, ಅಬ್ದುಲ್ ಜಬ್ಬಾರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ರಾಜ್ಯಮಟ್ಟದ ಮಹಿಳಾ ಜಾಗೃತಿ ಸಮಾವೇಶವನ್ನು ಡಾ.ಮಲ್ಲಿಕಾ ಎಸ್.ಘಂಟಿ ಉದ್ಘಾಟಿಸುವರು. ಚಿತ್ರನಟಿ ಶೃತಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ರಾಜ್ಯ ಎಸ್ಟಿ ನೌಕರರ ಸಮಾವೇಶವನ್ನು ಎಸ್ಪಿ ರವಿ ಡಿ.ಚೆನ್ನಣ್ಣನವರ್ ಉದ್ಘಾಟಿಸಲಿದ್ದು, ಕೆಪಿಎಸ್‌ಸಿ ಸದಸ್ಯ ಡಾ. ರಂಗರಾಜ್ ವನದುರ್ಗ ಅಧ್ಯಕ್ಷತೆ ವಹಿಸುವರು.

ಸಂಜೆ 5 ಗಂಟೆಗೆ ಬುಡಕಟ್ಟು ಸಮುದಾಯಗಳ ಸಂಘಟನೆ ಹಾಗೂ ಸವಾಲುಗಳು ಕಾರ್ಯಕ್ರಮದಲ್ಲಿ ಮಾರಸಂದ್ರ ಮುನಿಯಪ್ಪ, ಹೆಚ್.ಕೆ.ರಾಮಚಂದ್ರಪ್ಪ, ಜಿ.ಟಿ.ಚಂದ್ರಶೇಖರ್, ಚಳುವಳಿ ರಾಜಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.


3ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಗೆ ಸಜ್ಜಾದ ರಾಜನಹಳ್ಳಿ ಮಠ - Janathavaniಜಿಗಳಿ ಪ್ರಕಾಶ್,
[email protected]

error: Content is protected !!