ಮುಷ್ಕರಕ್ಕಿಳಿದ ಸಾರಿಗೆ ನೌಕರರು

ದಾವಣಗೆರೆ, ಏ.7- ಆರನೇ ವೇತನ ಆಯೋಗದ ವರದಿಯಂತೆ ವೇತನ ನೀಡ ಬೇಕೆಂದು ಆಗ್ರಹಿಸಿ ಸಾರಿಗೆ ಬಸ್ ಗಳ ನೌಕರರು ಸೇವೆಗೆ ಹಾಜರಾಗದ ಕಾರಣ ನಗರದಲ್ಲಿಂದು ಸಾರಿಗೆ ಬಸ್ ಗಳು ರಸ್ತೆಗಿಳಿಯದೇ ಸೇವೆ ಸ್ಥಗಿತಗೊಂಡಿತ್ತು. ಇದರಿಂದ ಸರ್ಕಾರಿ ಬಸ್ ಗಳ ಮೇಲೆಯೇ ಅವಲಂಬಿತರಾದ ಪ್ರಯಾಣಿಕರಿಗೆ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ತಟ್ಟಿದ ಪರಿಣಾಮ ನಿತ್ಯದ ಮಾರ್ಗಗಳಿಗೆ ಬಸ್ ಇಲ್ಲದೇ ಪ್ರಯಾಣಿಕರು ಪರದಾಡಿದರು.

ವೇತನ ಏರಿಕೆಗೊಳಿಸುವುದು, ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾರಿಗೆ ಇಲಾಖೆಯ ಚಾಲಕರು, ನಿರ್ವಾಹಕರು ನಡೆಸುತ್ತಿರುವ ಮುಷ್ಕರದಿಂದ ಕೆಎಸ್‍ಆರ್‍ಟಿಸಿ ಬಸ್‍ಗಳು ರಸ್ತೆಗಿಳಿಯದೇ ಡಿಪೋದಲ್ಲಿ ನಿಂತಿದ್ದವು. ಸಾರಿಗೆ ನೌಕರರ ಮುಷ್ಕರದಿಂದಾಗಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೇ ಬಣಗುಡುತ್ತಿತ್ತು. ಇಡೀ ಬಸ್ ನಿಲ್ದಾಣ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿತ್ತು.

ಜಿಲ್ಲೆಯ ದಾವಣಗೆರೆಯ ಎರಡು ಡಿಪೋ ಹಾಗೂ ಹರಿಹರದ ಒಂದು ಡಿಪೋ ಸೇರಿ ಮೂರು ಡಿಪೋಗಳಲ್ಲಿ 1132 ಜನ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ, ಕೆಎಸ್‍ಆರ್‍ಟಿಸಿಯ 350 ಬಸ್ಸುಗಳ ಪೈಕಿ ಒಂದೂ ಬಸ್ ರಸ್ತೆಗೆ ಇಳಿಯಲಿಲ್ಲ. ಚಾಲಕರು ಮತ್ತು ನಿರ್ವಾಹಕರು ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿದಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸದೇ, ತಮ್ಮ ತಮ್ಮ ಮನೆಯಲ್ಲಿದ್ದು ಸೇವೆಯಿಂದ ದೂರ ಉಳಿದಿದ್ದರು. ಈ ಕಾರಣದಿಂದ ಸಾರಿಗೆ ವ್ಯತ್ಯಯದಲ್ಲಿ ಏರು-ಪೇರಾಗಿತ್ತು. ಗ್ರಾಮೀಣ ಭಾಗದ ಜನರು ಸೇರಿದಂತೆ ಕೆಲ ಪ್ರಯಾಣಿಕರು ತಾವು ತೆರಳಬೇಕಿದ್ದ ಊರುಗಳಿಗೆ ಹೋಗಲು ಸಾಧ್ಯವಾಗದೇ ತೊಂದರೆ ಅನುಭವಿಸಿದರು.

ಇನ್ನೂ ಹುಬ್ಬಳ್ಳಿಗೆ ಹೋಗಲು ಬಂದಿದ್ದ ಪದ್ಮಾ ಅವರು, ಸಾರಿಗೆ ನೌಕರರ ಮುಷ್ಕರ ಇರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಕೆಎಸ್‍ಆರ್‍ಟಿಸಿ ಮೂಲಕ ಪ್ರಯಾಣ ಬೆಳೆಸಲು ಇಲ್ಲಿಗೆ ಬಂದಿದ್ದೆ. ಆದರೆ, ಈಗ ಬಸ್ ಸೇವೆ ಇಲ್ಲದಿರುವುದರಿಂದ ಖಾಸಗಿ ಬಸ್ ಅಥವಾ ರೈಲಿನಲ್ಲಿ ಹೋಗುತ್ತೇನೆ ಎಂದು ಹೇಳಿದರು.

262 ಸಾಮಾನ್ಯ ಸಾರಿಗೆ, 102 ತಡೆರಹಿತ, 40 ನಗರ ಸಾರಿಗೆ ಬಸ್ ಗಳ ಸಂಚಾರ ಸ್ಥಗಿತಗೊಂಡಿತ್ತು. ಬಸ್ ಸಂಚಾರ ಸ್ಥಗಿತದ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದತ್ತ ಪ್ರಯಾಣಿಕರು ಮುಖ ಮಾಡಲಿಲ್ಲ. ಮುಷ್ಕರ ನಿರತರ ಪ್ರತಿಭಟನೆ ಯಾವ ಕ್ಷಣದಲ್ಲಾದರೂ ತಾರಕಕ್ಕೆ ಏರಬಹುದೆಂಬ ಅಂದಾಜಿನಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು.

6ನೇ ವೇತನ ಶಿಫಾರಸ್ಸು ಮಾಡೋವರೆಗೆ ಮುಷ್ಕರ ನಿಲ್ಲಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದಲ್ಲದೇ ಡಿಸೆಂಬರ್ ತಿಂಗಳ ವಾಗ್ದಾನದಂತೆ ಸರ್ಕಾರ ನಡೆದುಕೊಳ್ಳಬೇಕು. ವೇತನ ಪರಿಷ್ಕರಣೆ ಬೇಡ. 6ನೇ ವೇತನ ಆಯೋಗದ ನಿಯಮಾವಳಿ ಕೆಎಸ್‍ಆರ್‍ಟಿಸಿ ನೌಕರರಿಗೆ ಅನುಕೂಲವಾಗಲಿದೆ. ಬೇಡಿಕೆ ಈಡೇರಿಸುವವರೆಗೆ ಮುಷ್ಕರ ಬಿಡಲ್ಲ. ಅನಿರ್ದಿಷ್ಟಾವಧಿ ಮುಷ್ಕರ ಖಚಿತ ಎಂದು ಕೆಎಸ್‍ಆರ್‍ಟಿಸಿ ನೌಕರರು ಎಚ್ಚರಿಸಿದ್ದಾರೆ.

ನೌಕರರು ಮುಷ್ಕರ ನಡೆಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಪೊಲೀಸ್ ಕಾಯ್ದೆ, ಎಸ್ಮಾ ಸೇರಿದಂತೆ ಯಾವುದಾದರೂ ಕಾಯ್ದೆಯಡಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಸರಕಾರ ಎಚ್ಚರಿಕೆ ನೀಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೂ ನೌಕರರು ಈ ಬೆದರಿಕೆಗೆ ಬೆದರದೆ ಮುಷ್ಕರ ಕೈಗೊಳ್ಳಲು ಮುಂದಾಗುತ್ತಿದ್ದಾರೆ.

ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಸಾರ್ವಜನಿಕರ ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ಕ್ಯಾಬ್‍ಗಳು ಮತ್ತು  ಶಾಲಾ ಬಸ್‍ಗಳಿಗೆ ಪ್ರಯಾಣ ದರ ನಿಗಡಿಪಡಿಸಿ ಓಡಾಡಲು ಅನುಮತಿ ನೀಡುತ್ತೇವೆ. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲು ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಾರಿಗೆ ಆಯುಕ್ತರು ಹೇಳಿರುವುದೂ ಸಹ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಮುಷ್ಕರಕ್ಕೆ ರೈತ ಸಂಘ, ಕನ್ನಡಪರ ಸಂಘಟನೆ, ಖಾಸಗಿ ಬಸ್‍ಗಳ ಮಾಲೀಕರು ಬೆಂಬಲಕ್ಕೆ ನಿಂತಿದ್ದಾರೆ. ನಾವ್ಯಾರೂ ಕೆಲಸಕ್ಕೆ ಹೋಗೋದಿಲ್ಲ, ಮನೆಯಲ್ಲೇ ಇರುತ್ತೇವೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕೆಎಸ್‍ಆರ್‍ಟಿಸಿ ನೌಕರರು.

ಖಾಸಗಿ ಬಸ್ ಗಳ ಪ್ರವೇಶ: ಸರ್ಕಾರಿ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಖಾಸಗಿ ಬಸ್‍ಗಳ ಸೇವೆ ನಿರಾತಂಕವಾಗಿ ಮುಂದುವರೆಯಿತು. ಕೆಎಸ್‍ಆರ್‍ಟಿಸಿ ಬಸ್‍ಗಳು ಇಲ್ಲದ ಕಾರಣ ನಿಲ್ದಾಣಕ್ಕೆ ಖಾಸಗಿ ಬಸ್‍ಗಳು ಪ್ರವೇಶಿಸಿದವು. ಅನಿವಾರ್ಯವಾಗಿ ಪ್ರಯಾಣಿಕರು ಖಾಸಗಿ ಬಸ್‍ಗಳ ಮೊರೆ ಹೋದರು.

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ನಿತ್ಯವೂ ಇರುವಂತೆ ಪ್ರಯಾಣಿಕರ ಸಂಖ್ಯೆ ಕಂಡು ಬರಲಿಲ್ಲ. ಕೆಲವೇ ಮಂದಿ ಪ್ರಯಾಣಿಕರು ಕಂಡು ಬಂದರು. ಕೆಲಸದ ನಿಮಿತ್ತ, ಅನ್ಯ ಕಾರಣಗಳಿಗಾಗಿ ಇತರೆ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಸರ್ಕಾರಿ ಬಸ್‍ಗಳಿಲ್ಲದೇ ಪರದಾಡಿ, ಕೊನೆಗೆ ಖಾಸಗಿ ಬಸ್‍ಗಳತ್ತ ಮುಖ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಖಾಸಗಿ ಬಸ್ಸುಗಳ ಸಿಬ್ಬಂದಿ ಸೈಯ್ಯದ್, ಮಂಜುನಾಥ್ ಮಾತನಾಡಿ, ಬಸ್ ಬಂದ್ ಇದೆ ಎಂಬ ಸುದ್ದಿ ಹರಡಲಾಗಿದೆ. ಆದರೆ, ಖಾಸಗಿ ಬಸ್ ಸೇವೆ ಇದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಹೀಗಾಗಿ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ನಿತ್ಯ ಬರುವ ಪ್ರಯಾಣಿಕರನ್ನು ಹೋಲಿಸಿದರೆ, ಶೇ.10ರಿಂದ 15 ರಷ್ಟು ಪ್ರಯಾಣಿಕರು ಮಾತ್ರ ಖಾಸಗಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ ಎಂದರು.

error: Content is protected !!