‘ಅಧಿಷ್ಠಾನ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ. ನಾ. ಕೊಟ್ರೇಶ್ ಉತ್ತಂಗಿ
ದಾವಣಗೆರೆ, ಫೆ.7- ಸಂಶೋಧನೆ ನಿಂತ ನೀರಾಗದೇ ನಿರಂತರವಾಗಿ ಹರಿಯುವ ನದಿಯಾಗಬೇಕು ಎಂದು ಸಾಹಿತಿ ಡಾ. ನಾ. ಕೊಟ್ರೇಶ್ ಉತ್ತಂಗಿ ಆಶಯ ವ್ಯಕ್ತಪಡಿಸಿದರು.
ಅವರು, ಇಂದು ನಗರದ ರೋಟರಿ ಬಾಲಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲ್ಲೂಕು ಘಟಕ, ಕನ್ನಡ ಜಾಗೃತಿ ಕೇಂದ್ರ, ಸ್ಪೂರ್ತಿ ಪ್ರಕಾಶನ ತೆಲಗಿ, ಭಾವಸಿರಿ ಪ್ರಕಾಶನ ಅಣಬೇರು ಇವುಗಳ ಸಂಯುಕ್ತಾಶ್ರ ಯದಲ್ಲಿ ನಡೆದ ಸಾಹಿತಿ ಎಸ್. ಮಲ್ಲಿಕಾರ್ಜುನ ಪ್ಪ ಅವರ ‘ಅಧಿಷ್ಠಾನ’ ಕೃತಿ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಧಿಷ್ಠಾನ ಸಂಶೋಧನಾ ಕೃತಿಯಾಗಿದ್ದು, ಮಹಾಲಿಂಗ ರಂಗರ ಹಲವು ಮಗ್ಗಲುಗಳನ್ನು ಹುಡುಕಿ ಸಂಶೋಧನೆ ಕೈಗೊಂಡು, ಕವಿ ಮಹಾ ಲಿಂಗ ರಂಗರು ಅವಧೂತರಲ್ಲ ಬದಲಿಗೆ ಶಿಷ್ಯಂ ದಿರು ಅವಧೂತರು ಎಂಬುದನ್ನು ತಿಳಿಸಿ, ಮಹಾ ಲಿಂಗ ರಂಗರ ಬಗ್ಗೆ ಇರುವ ಗೊಂದಲ ನಿವಾರಿಸಿದ್ದಾರೆ. ತಮ್ಮ ಬಗ್ಗೆ ನೈಜ ಕಾಳಜಿ ಇರದಿದ್ದ ಅವಧೂತರು ಸಮಾಜದ ಸ್ವಾಸ್ಥ್ಯಕ್ಕಾಗಿ ಹೆಚ್ಚು ಮನ್ನಣೆ ನೀಡಿದ್ದರು. ಇಂತಹ ಅವಧೂತರನ್ನು ತಯಾರಿಸಿದ ಕೀರ್ತಿ ಮಹಾಲಿಂಗ ರಂಗ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕೃತಿ ಲೋಕಾರ್ಪಣೆಗೊಳಿಸಿದ ಸಾಹಿತಿ
ಹೆಚ್. ಮಲ್ಲಿಕಾರ್ಜುನ ಮಾತನಾಡಿ, ಪ್ರಸ್ತುತ ಸಾಹಿತ್ಯ ಕೃಷಿ ಮಾಡುವ ಬಗ್ಗೆ ಒಲವು ಕುಸಿದಿದ್ದು, ಪುಸ್ತಕ ಬರೆದರೂ ಆರ್ಥಿಕ ಸಮಸ್ಯೆ ಕಾರಣಕ್ಕೆ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.
ಸಾಲ ಮಾಡಿ ಪ್ರಕಟಿಸಿದರೂ ಪುಸ್ತಕ ಖರೀದಿಸಿ ಓದುವವರ ಸಂಖ್ಯೆ ವಿರಳವಾಗಿದೆ. ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಧಿಕಾರದಂತಹ ಸಂಘ-ಸಂಸ್ಥೆಗಳು ಪುಸ್ತಕ ಪ್ರಕಟಿಸುವ ಜವಾಬ್ದಾರಿ ಹೊಂದಬೇಕೆಂದರು.
ಕೃತಿಯ ಕರ್ತೃ ಎಸ್. ಮಲ್ಲಿಕಾರ್ಜುನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಹೆಚ್. ರಾಜಶೇಖರ ಗುಂಡಗಟ್ಟಿ, ನಿವೃತ್ತ ಉಪನ್ಯಾಸಕ ಕೆ. ಸಿದ್ದಪ್ಪ, ನಿವೃತ್ತ ಶಿಕ್ಷಕ ಜಿ.ಎಸ್. ಶರಣಯ್ಯ, ನೀಲಗುಂದ ಜಯಮ್ಮ, ತೆಲಗಿ ವೀರಭದ್ರಪ್ಪ, ಸ್ಪೂರ್ತಿ ಪ್ರಕಾಶನ ತೆಲಗಿ ಅಧ್ಯಕ್ಷ ಎಂ. ಬಸವ ರಾಜ್, ಅಣಬೇರು ತಾರೇಶ್, ಮಹಾಂತೇಶ್ ನಿಟ್ಟೂರು, ಸುನೀತಾ ಪ್ರಕಾಶ್ ಸೇರಿದಂತೆ ಇತರರು ಇದ್ದರು. ಎಸ್. ಉಮಾದೇವಿ ಪ್ರಾರ್ಥಿಸಿದರು. ಕೆ.ಆರ್. ಉಮೇಶ್ ಸ್ವಾಗತಿಸಿದರು. ಬಿ.ಎಲ್. ಗಂಗಾಧರ ನಿಟ್ಟೂರು ನಿರೂಪಿಸಿದರು. ಶೋಭಾ ಮಂಜುನಾಥ್ ವಂದಿಸಿದರು.