ಬಸ್ಸುಗಳಿಲ್ಲದ ದಾವಣಗೆರೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಸಿಬ್ಬಂದಿ ಕುಳಿತು ವಿಶ್ರಾಂತಿ ಪಡೆಯುತ್ತಿರುವುದು.
ದಾವಣಗೆರೆ, ಏ.8- ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಎಸ್‍ಆರ್‍ಟಿಸಿ ನೌಕರರು ನಡೆಸಿರುವ ಮುಷ್ಕರ ಇಂದಿಗೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸಾರಿಗೆ ಬಸ್ ಗಳ ಸಂಚಾರ ಕಾಣದೇ ಪ್ರಯಾಣಿಕರ ಪರದಾಟ ಮಾತ್ರ ಸದ್ಯಕ್ಕೆ ತಪ್ಪಿಲ್ಲ. ಆದರೆ ದಾವಣಗೆರೆ-ಹರಿಹರ ಮಾರ್ಗದಲ್ಲಿ ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿದ್ದು, ಈ ಭಾಗದ ಪ್ರಯಾಣಿಕರು ನಿರಾಳರಾಗಿದ್ದಾರೆ.
ಚಾಲಕರು, ನಿರ್ವಾಹಕರು, ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ದಾವಣಗೆರೆ ಡಿಪೋ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್ಟಿಸಿ ಅಧಿಕಾರಿಗಳ ಹಾಗೂ ಪೊಲೀಸರ ರಕ್ಷಣೆಯಲ್ಲಿ ದಾವಣಗೆರೆ-ಹರಿಹರ ನಡುವೆ ಕೆಎಸ್‍ಆರ್‍ಟಿಸಿ ಬಸ್‌ಗಳ ಸಂಚಾರ ಬೆಳಿಗ್ಗೆಯಿಂದಲೇ ಆರಂಭವಾಗಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಬಸ್ ಗಳಿಲ್ಲದಿದ್ದರೂ ಬಂದ ಜನರಿಗೆ ಮಾಹಿತಿ ನೀಡಲೆಂದು ಸಂಸ್ಥೆಯ 3-4 ಸಿಬ್ಬಂದಿ, ಬಸ್ ನಿಲ್ದಾಣದ ಬಂದೋಬಸ್ತ್‍ಗೆ ನಿಯೋಜಿಸಲ್ಪಟ್ಟ ಪೊಲೀಸ್ ಅಧಿಕಾರಿ, ಸಿಬ್ಬಂದಿ ಮಾತ್ರ ಇಡೀ ನಿಲ್ದಾಣದಲ್ಲಿ ಕಂಡು ಬಂದರು.
26 ಜನ ಹಾಜರ್: 13 ಬಸ್ ಗಳ ಸಂಚಾರ
ದಾವಣಗೆರೆ-ಹರಿಹರ, ದಾವಣಗೆರೆ-ರಾಣೇಬೆನ್ನೂರು, ದಾವಣಗೆರೆ-ಚಿತ್ರದುರ್ಗ ಮಾರ್ಗಗಳಿಗೆ ಇಂದು ಒಟ್ಟು 13 ಬಸ್ ಗಳು ಸಂಚರಿಸಿದ್ದು, 26 ಮಂದಿ ಸಾರಿಗೆ ನೌಕರರು ಸ್ವ-ಇಚ್ಚೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ 2 ವರ್ಷಗಳಲ್ಲಿ ನಿವೃತ್ತಿ ಹೊಂದಿದ ಅಂದರೆ 62 ವರ್ಷ ವಯೋಮಾನದೊಳಗಿನ ನಿವೃತ್ತ ನೌಕರರನ್ನು ದಿನವೊಂದಕ್ಕೆ 700 ರೂ. ವೇತನ ನೀಡಿ, ವೈದ್ಯರ ಮತ್ತು ಫಿಟ್ ನೆಸ್ ಪ್ರಮಾಣ ಪತ್ರ ಹಾಗೂ ಪರವಾನಗಿ ಪತ್ರ ಪರಿಶೀಲಿಸಿ ಕರ್ತವ್ಯಕ್ಕೆ ಪಡೆಯುವಂತೆ ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ 62 ವರ್ಷ ವಯೋಮಾನದೊಳಗಿನ 26 ಜನ ಕಳೆದ 2 ವರ್ಷಗಳಲ್ಲಿ ನಿವೃತ್ತಿ ಪಡೆದ ನೌಕರರಿದ್ದು, ಇವರುಗಳಲ್ಲಿ 7 ರಿಂದ 8 ಜನ ಕರ್ತವ್ಯಕ್ಕೆ ಹಾಜರಾಗಲು ಇಚ್ಚಿಸಿದ್ದಾರೆ. ಇವರುಗಳಿಗೆ ಶುಕ್ರವಾರದಿಂದಲೇ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
– ಸಿದ್ದೇಶ್ವರ್ ಹೆಬ್ಬಾಳ್, ಕೆಎಸ್ಆರ್ಟಿಸಿ ಡಿಪೋ ನಿಯಂತ್ರಣಾಧಿಕಾರಿ.
ದಾವಣಗೆರೆಯಿಂದ ಬೆಂಗಳೂರಿಗೆ ಹೊರಟ ಪ್ರಯಾಣಿಕರಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು 4 ಖಾಸಗಿ ಬಸ್‍ಗಳನ್ನು ಸರ್ಕಾರಿ ಬಸ್ ನಿಲ್ದಾಣಕ್ಕೆ ಕಳಿಸಿದ್ದರು. ಆದರೆ, ಮಧ್ಯಾಹ್ನವಾದರೂ ಪ್ರಯಾಣಿಕರು ಬಸ್ಸಿನತ್ತ ಮುಖ ಮಾಡಲೇ ಇಲ್ಲ. ಇನ್ನು ನಗರ ಸಾರಿಗೆ, ಗ್ರಾಮೀಣ ಸಾರಿಗೆ ಸೇವೆಯಲ್ಲಿ ಸರ್ಕಾರಿ ಬಸ್ಸುಗಳ ಸೇವೆ ಇಲ್ಲ ಎಂಬುದನ್ನು ಹೊರತುಪಡಿಸಿದರೆ ಆ ನ್ಯೂನತೆಯನ್ನು ಖಾಸಗಿ ಬಸ್ ಭರ್ತಿ ಮಾಡಿವೆ.
ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಕೆಎಸ್‍ಆರ್‍ಟಿಸಿ ತರಬೇತಿ ನೌಕರರಿಗೆ ಮುಷ್ಕರದಲ್ಲಿ ಪಾಲ್ಗೊಂಡರೆ ಕ್ರಮ ಕೈಗೊಳ್ಳುವುದಾಗಿ ಸಂಸ್ಥೆಯ ಜಿಲ್ಲಾ ನಿಯಂತ್ರಣಾಧಿಕಾರಿ ಎಚ್ಚರಿಕೆ ಪತ್ರವನ್ನು ರವಾನಿಸಿದ್ದಾರೆ.
ನಗರ, ಜಿಲ್ಲಾದ್ಯಂತ ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ತರಬೇತಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಬಾರದು. ತರಬೇತಿ ನೌಕರರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಬೇಕು. ತರಬೇತಿ ಚಾಲಕರನ್ನು ಬಸ್ ಸಂಚಾರಕ್ಕೆ ಬಳಸಲು ಸಂಸ್ಥೆ ಚಿಂತನೆ ನಡೆಸಿದೆ. ಒಂದು ವೇಳೆ ಸೂಚನೆಯನ್ನು ಮೀರಿ ಯಾರಾದರೂ ತರಬೇತಿ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾದರೆ, ಅಂತಹವರನ್ನು ಆಯ್ಕೆ ಪಟ್ಟಿಯಿಂದಲೇ ತೆಗೆದು ಹಾಕುವುದಾಗಿ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ.