ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಎಸ್‍ಯುಸಿಐ ಪ್ರತಿಭಟನೆ

ದಾವಣಗೆರೆ, ಫೆ.5- ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರದಲ್ಲಿಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಗಾಂಧಿ ವೃತ್ತದಲ್ಲಿ ಜಮಾಯಿಸಿದ್ದ ಎಸ್‍ಯುಸಿಐ ಪದಾಧಿಕಾರಿಗಳು, ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ ಬಿ.ಆರ್. ಅಪರ್ಣ ಮಾತನಾಡಿ, ಕೊರೊನಾ ವೈರಸ್‍ನಿಂದ ಸಂಕಷ್ಟವನ್ನು ಎದುರಿಸಿದ ಜನರಿಗೆ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಶ್ರೀಮಂ ತರ ಪರವಾದ ಬಜೆಟ್ ಮಂಡಿಸಿದೆ. ಕೇಂದ್ರ ಬಜೆಟ್‍ನಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ, ಕೈಗಾರಿಕೆಗಳ ಮುಚ್ಚುವಿಕೆ, ಘಾಸಿಗೊಳಿಸುವ ಬೆಲೆ ಏರಿಕೆ, ರೈತರಿಗೆ ಬೆಂಬಲ ಬೆಲೆ ಇಂತಹ ಸಮಸ್ಯೆಗಳನ್ನು ನೋಡಿಲ್ಲ. ಜಿಗುಪ್ಸೆ ಹುಟ್ಟಿಸುವ, ಆರ್ಥಿಕ ಪುನಶ್ಚೇತನ ಹುಸಿ ಪ್ರತಿಪಾದನೆಯನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ ಎಂದು ಟೀಕಿಸಿದರು.

ಆತ್ಮ ನಿರ್ಭರ ಭಾರತ ನಿರ್ಮಿಸುವ ಹೆಸರಿನಲ್ಲಿ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ವಿಮೆ ಮುಂತಾದ ಸಮಾಜ ಕಲ್ಯಾಣ ಮತ್ತು ಸೇವಾ ಕ್ಷೇತ್ರಗಳು ಒಳಗೊಂಡಂತೆ ಎಲ್ಲ ರಂಗಗಳ ವೇಗವಾದ, ಸಂಪೂರ್ಣ ಖಾಸಗೀಕರಣದ ನೀಲಿ ನಕ್ಷೆಯನ್ನು ಬಿಚ್ಚಿಡಲಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಮಾತನಾಡಿ, ಮೂರು ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲೂ ಕಾರ್ಪೊರೇಟ್ ಬಂಡವಾಳಶಾಹಿಗಳು ತಮ್ಮ ಸಂಪತ್ತನ್ನು ಹಲವು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಆತ್ಮ ನಿರ್ಭರ್ ಭಾರತ ಎಂಬುದು ವಾಸ್ತವದಲ್ಲಿ ಕಾರ್ಪೊರೇಟ್ ಅವಲಂಬಿತ ಭಾರತ ಎಂಬ ಪದಕ್ಕೆ ಪರ್ಯಾಯವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ತಿಪ್ಪೇಸ್ವಾಮಿ, ಕೆ. ಭಾರತಿ, ಪುಷ್ಪ, ಕಾವ್ಯ, ಸ್ಮಿತಾ, ಜ್ಯೋತಿ, ಸೌಮ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

error: Content is protected !!