ಪಂಚಮಸಾಲಿ 2ಎ ಮೀಸಲಾತಿ : ವರದಿಗೆ ಸಿಎಂ ಸೂಚನೆ

ಯಡಿಯೂರಪ್ಪಗೆ ವಯೋಸಹಜ ಕಾಯಿಲೆ, ಬುದ್ಧಿಭ್ರಮಣೆ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತರಾಟೆಗೆ ತೆಗೆದುಕೊಂಡ ನಂತರ ನಿಲುವು ಬದಲಿಸಿದ ಮುಖ್ಯಮಂತ್ರಿ

ಬೆಂಗಳೂರು, ಫೆ. 5 – ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸುವುದಕ್ಕೆ  ಸಂಬಂಧಿಸಿದಂತೆ ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.

ತಮ್ಮ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಹಿಂದುಳಿದಿದೆ ಮತ್ತು ಸಮಾಜದ ಕಡು ಬಡವರಿಗೆ ತೊಂದರೆ ಯಾಗಿದೆ. ತಮ್ಮ ಸಮಾಜವನ್ನು ಹಿಂದುಳಿದ ವರ್ಗ 2ಎ ಮೀಸಲಾತಿಗೆ ಒಳಪಡಿಸಲು ಮನವಿ ಮಾಡಿದ್ದಾರೆ. ಈ ಕಾರಣ ಸಮಗ್ರ ಅಧ್ಯಯನ ಮಾಡುವಂತೆ ಆಯೋಗಕ್ಕೆ ಯಡಿಯೂರಪ್ಪ ಪತ್ರ ಬರೆದಿದ್ದಾರೆ.

ಶುಕ್ರವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದ ಯಡಿಯೂರಪ್ಪ, ನಮ್ಮದು ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷವಲ್ಲ. ಇಲ್ಲಿ ನಾನೇ ಕುಳಿತು ಸ್ವಯಂ ಆಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿ ಮತ್ತಿತರ ಬಳಿ ಚರ್ಚಿಸಿ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಹೀಗಿರುವಾಗ ಈ ವಿಷಯದಲ್ಲಿ ನಾನು ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದಿದ್ದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆಯ ಕುರಿತು ಹೇಳಿಕೆ ನೀಡುವಂತೆ ಕೇಳಿದಾಗ ಯಡಿಯೂರಪ್ಪ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿದ್ದರು.

ನಂತರ ನಿಲುವು ಬದಲಿಸಿರುವ ಯಡಿಯೂರಪ್ಪ, ಆಯೋಗದಿಂದ ವರದಿ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಸದನದಲ್ಲಿ ಯಡಿಯೂರಪ್ಪ ನೀಡಿದ ಹೇಳಿಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿ ನಿನ್ನೆಯಷ್ಟೇ ಸಮುದಾಯದ ಶಾಸಕರು ಹಾಗೂ ಸಚಿವರನ್ನು ತಮ್ಮ ಬಳಿ ಕಳಿಸಿ ಮೀಸಲಾತಿಯ ಭರವಸೆ ಕೊಡಿಸಿದ್ದರು. ನಂತರ ಸದನದಲ್ಲಿ ಬೇರೆ ಹೇಳಿಕೆ ನೀಡಿದ್ದಾರೆ. ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ವಯೋಸಹಜ ಕಾಯಿಲೆಯಿಂದ ಹಾಗೂ ಬುದ್ಧಿಭ್ರಮಣೆಯಿಂದ ಬಳಲುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದೂ ಸ್ವಾಮೀಜಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೀಸಲಾತಿಗಾಗಿ ಪಾದಯಾತ್ರೆ ಕೈಗೊಂಡಿರುವ ಸ್ವಾಮೀಜಿ, ಈಗ ಚಿತ್ರದುರ್ಗದಲ್ಲಿದ್ದಾರೆ.

ನಮ್ಮ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದು ಇನ್ನು ಸಾಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಯಡಿಯೂರಪ್ಪನವರನ್ನು ಗೌರವಯುತವಾಗಿ ಪದಚ್ಯುತಗೊಳಿಸಲಿ. ಮತ್ತೊಬ್ಬ ಸಮರ್ಥ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡುವ ಪ್ರಯತ್ನ ಮಾಡಲಿ ಎಂದಿದ್ದರು.

ನರೇಂದ್ರ ಮೋದಿ ಅವರಾಗಲೀ, ನಡ್ಡಾ ಆಗಲೀ ಈ ರಾಜ್ಯದ ಮುಖ್ಯಮಂತ್ರಿಗಳಲ್ಲ. ಪಂಚಮಸಾಲಿಗಳಿಗೆ ಮೀಸಲಾತಿ ಕೊಡುವ ಪರಮಾಧಿಕಾರ ರಾಜ್ಯದ ಮುಖ್ಯಮಂತ್ರಿ ಬಳಿ ಇದೆ. ವಿನಾ ಕಾರಣ ಕೇಂದ್ರದ ಕಡೆ ಬೊಟ್ಟು ಮಾಡಿ, ಕೇಂದ್ರದ ವಿರುದ್ಧ ಈ ಸಮುದಾಯ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರದ ವರಿಷ್ಠರು ಯಡಿಯೂರಪ್ಪ ಪದಚ್ಯುತಿ ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭ ಬಂದರೆ, ಲಿಂಗಾಯತರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಯಡಿಯೂರಪ್ಪನವರು ಕೇಂದ್ರದ ಕಡೆ ತೋರಿಸುತ್ತಾ 25 ಜನ ಸಂಸದರನ್ನು ಕರೆದುಕೊಂಡು ವರಿಷ್ಠರ ಬಳಿ ಹೋಗಿ ಎನ್ನುತ್ತಿದ್ದಾರೆ ಎಂದರೆ ಅವರು ಸಂವಿಧಾನ ಓದಿದ್ದಾರಾ ಎಂಬ ಅನುಮಾನವಾಗುತ್ತಿದೆ. ಮೂರು ಬಾರಿ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪನವರಿಗೆ, ಮೀಸಲಾತಿ ಕೊಡುವ ಅಧಿಕಾರ ಕೇಂದ್ರಕ್ಕಿದೆಯೋ, ರಾಜ್ಯ ಸರ್ಕಾರಕ್ಕಿದೆಯೋ ಎಂಬುದು ಗೊತ್ತಿಲ್ಲವೇ? ಎಂದು ಸ್ವಾಮೀಜಿ ಕೇಳಿದ್ದಾರೆ. 

ಸ್ವಾಮೀಜಿ ಆಕ್ರೋಶದ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿರುವ ಯಡಿಯೂರಪ್ಪ, ಅಧಿವೇಶನದಲ್ಲಿ ನನ್ನ ಹೇಳಿಕೆಯನ್ನು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಅಪಾರ್ಥ ಮಾಡಿಕೊಂಡಿದ್ದಾರೆ. 2ಎ ಮೀಸಲಾತಿಗೆ ಸೇರಿಸಲು ಸಮಾಜದ ಮುರುಗೇಶ ನಿರಾಣಿ ಹಾಗೂ ಸಿ.ಸಿ. ಪಾಟೀಲ ಒಳಗೊಂಡು ಹಲವಾರು ಶಾಸಕರ ಜೊತೆ ಚರ್ಚೆ ಮಾಡಿದ್ದೇನೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ವಿಷಯದ ಅಧ್ಯಯನ ಮಾಡಿ ವರದಿ ಸಲ್ಲಿಸಲು ಕೇಳಿದ್ದೇನೆ ಎಂದಿದ್ದಾರೆ.

ನಮ್ಮ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸಿದ್ದನ್ನು ಇದೇ ವೇಳೆ ನೆನಪಿಸಿರುವ ಯಡಿಯೂರಪ್ಪ, ಸರ್ಕಾರ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳದೇ ತಜ್ಞರೊಂದಿಗೆ ಸಮಗ್ರವಾಗಿ ಚರ್ಚಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯಬೇಕಾಗುತ್ತದೆ ಎಂದಿದ್ದಾರೆ.

error: Content is protected !!