ಡೋರ್ ನಂಬರ್: ಸಮಿತಿ ರಚನೆಗೆ ನಾಗರಾಜ್ ಆಗ್ರಹ

ದಾವಣಗೆರೆ, ಏ.7-  ಮಹಾನಗರ ಪಾಲಿಕೆಯಿಂದ ಡೋರ್ ನಂಬರ್ ನೀಡುವ ವಿಚಾರದ ಬಗ್ಗೆ ಸಾಮಾನ್ಯ ಸಭೆಯಲ್ಲಿಂದು ವಿಸ್ತೃತ ಚರ್ಚೆ ನಡೆಯಿತು.

ಮೇಯರ್ ಎಸ್.ಟಿ. ವೀರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಹಾಗೂ ಹಿರಿಯ ಸದಸ್ಯ ಚಮನ್ ಸಾಬ್  ಡೋರ್ ನಂಬರ್ ನೀಡುವ ಪ್ರಕ್ರಿಯೆ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದರು.

ಒಂದು ಖಾತೆ ಮಾಡಲು 40 ದಿನ ಬೇಕಾಗುತ್ತದೆ. ಆದರೆ, ಡೋರ್ ನಂಬರ್ ಮಾತ್ರ ಒಂದೆರಡು ದಿನಗಳಲ್ಲಿಯೇ ನೀಡಲಾಗುತ್ತದೆ. ಮೂಲ ಸೌಲಭ್ಯ ಕಲ್ಪಿಸದ ಬಡಾವಣೆಗಳಲ್ಲೂ ಡೋರ್ ನಂಬರ್ ನೀಡಲಾಗುತ್ತದೆ. ಡೋರ್ ನಂಬರ್ ನೀಡುವಾಗ ಆ ವಾರ್ಡ್‌ನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೇ ಹೊರತು, ಮಧ್ಯವರ್ತಿಗಳನ್ನಲ್ಲ ಎಂದು ಚಮನ್ ಸಾಬ್ ಕುಟುಕಿದರು. ಡೋರ್ ನಂಬರ್ ನೀಡಲು ಆಡಳಿತ ಹಾಗೂ ವಿಪಕ್ಷ  ಸದಸ್ಯರುಗಳನ್ನೊಳಗೊಂಡ ಕಮಿಟಿ ರಚಿಸಿ, ಸ್ಥಳ ಪರಿಶೀಲಿಸಿ ಡೋರ್ ನಂಬರ್ ನೀಡಬೇಕು ಎಂದು ಎ.ನಾಗರಾಜ್ ಸಲಹೆ ನೀಡಿದರು.

ಮೇಯರ್ ಎಸ್.ಟಿ. ವೀರೇಶ್, ನಗರ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ. ಡೋರ್ ನಂಬರ್ ನೀಡಲೇಬೇಕಾದ ಅನಿವಾರ್ಯತೆ ಇದೆ. ಡೋರ್ ನಂಬರ್ ನೀಡುವ ವಿಚಾರದಲ್ಲಿ ದೂಡಾ ಅಧಿಕಾರಿಗಳು ಪರಿಶೀಲಿಸುತ್ತಾರೆ. ನಂತರ ಪಾಲಿಕೆ ಎಂಜಿನಿಯರ್‌ಗಳು ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತಾರೆ. ಎಲ್ಲವೂ ನಿಯಮಾವಳಿಗಳ ಪ್ರಕಾರವೇ ನಡೆಯುತ್ತದೆ. ಸಮಿತಿ ರಚಿಸಿದರೆ ಎಲ್ಲಾ ಕಡೆ ತೆರಳಿ ಸ್ಥಳ ಪರಿಶೀಲಿಸುವುದು ಕಷ್ಟವಾಗುತ್ತದೆ. ಡೋರ್ ನಂಬರ್ ನೀಡುವಲ್ಲಿ ತಪ್ಪಾಗಿರುವ ನಿರ್ದಿಷ್ಟ ಪ್ರಕರಣ ತಿಳಿಸಿದರೆ, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ನೌಕರರ ಸಮುದಾಯ ಭವನ  ಎದುರು ಅತಿ ಕಡಿಮೆ ಜಾಗದಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಾಣ ಸೂಕ್ತವಲ್ಲ. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಿ, ಗ್ಲಾಸ್ ಹೌಸ್ ಬಳಿ ಇರುವ 4 ಎಕರೆ ಜಾಗದಲ್ಲಿ ಸುಸಜ್ಜಿತ ಹಾಗೂ ಸುಂದರವಾದ ಅಮರ್ ಜವಾನ್ ಸ್ಮಾರಕ ನಿರ್ಮಾಣ ಮಾಡಬಹುದು ಎಂದು ನಾಗರಾಜ್ ಸಲಹೆ ನೀಡಿದರು.

ಮೇಯರ್ ವೀರೇಶ್, ಈಗಾಗಲೇ ಅಲ್ಲಿ ಸ್ಮಾರಕಕ್ಕೆ ನಿರ್ಧರಿಸಲಾಗಿದೆ. ಗ್ಲಾಸ್ ಹೌಸ್ ಬಳಿಯ ಜಾಗದಲ್ಲಿ ಸೈನಿಕ ಪಾರ್ಕ್ ನಿರ್ಮಿಸಲಾಗುವುದು ಎಂದರು.

15ನೇ ಹಣಕಾಸು ಯೋಜನೆಯಡಿಯ 140 ಕಾಮಗಾರಿಗಳಿಗೆ ವರ್ಕ್ ಆರ್ಡರ್ ಕೊಟ್ಟಿಲ್ಲ. ಸಮಸ್ಯೆ ಏನು ಎಂದು ನಾಗರಾಜ್ ಸಭೆಯಲ್ಲಿ ಪ್ರಶ್ನಿಸಿದರು. ಈ ಯೋಜನೆಯಡಿ 247 ಕಾಮಗಾರಿಗಳ ಪೈಕಿ 18 ಕಾಮಗಾರಿಗಳು ಪೂರ್ಣಗೊಂಡಿವೆ. 215 ಕಾಮಗಾರಿ ಪ್ರಗತಿ ಯಲ್ಲಿವೆ ಎಂದು ಅಧಿಕಾರಿಗಳು ಉತ್ತರಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ್, ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಆಯುಕ್ತ ವಿಶ್ವ ನಾಥ ಮುದಜ್ಜಿ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!