ಕೊರೊನಾ ಕಾಲದಲ್ಲಿ ಕುಸಿದ ಖಾಸಗಿ ಶಾಲೆಗಳ ಸೆಳೆತ

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ

ದಾವಣಗೆರೆ, ಜು. 1 – ಕೊರೊನಾದಿಂದ ಕೈಯಲ್ಲಿ ಉಳಿಯದ ಕಾಸು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಖಾಸಗಿ ಶಾಲೆಗಳ ಕುರಿತ ಒಲವು ಪೋಷಕರಲ್ಲಿ ಕಡಿಮೆಯಾಗುತ್ತಿದ್ದರೆ, ಸರ್ಕಾರಿ ಶಾಲೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಕಳೆದ ವರ್ಷ ಕೊರೊನಾದ ಮೊದಲ ಅಲೆ ಬಂದ ಸಂದರ್ಭದಲ್ಲೇ ಜಿಲ್ಲೆಯಲ್ಲಿ ಸುಮಾರು 4 ಸಾವಿರದಷ್ಟು ಖಾಸಗಿ ಶಾಲೆಯ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಾಗಿದ್ದರು. ಮೂರ್ನಾಲ್ಕು ಖಾಸಗಿ ಶಾಲೆಗಳು ಬಂದ್ ಆಗಿದ್ದವು. ಈ ಬಾರಿ ಏಳೆಂಟು ಖಾಸಗಿ ಶಾಲೆಗಳು ತೂಗುಯ್ಯಾಲೆಯಲ್ಲಿದ್ದರೆ, ಏಳೆಂಟು ಸಾವಿರ ಮಕ್ಕಳು ಹೊಸದಾಗಿ ಸರ್ಕಾರಿ ಶಾಲೆಗೆ ಸೇರುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸುತ್ತಿವೆ.

ಪ್ರಸಕ್ತ ಶೇ.20ರಷ್ಟು ಮಕ್ಕಳ ನೋಂದಣಿ ಪೂರ್ಣವಾಗಿದೆ. ಉಳಿದ ಮಕ್ಕಳು ತ್ವರಿತವಾಗಿ ನೋಂದಣಿ ಯಾಗುವ ನಿರೀಕ್ಷೆ ಶಿಕ್ಷಣ ಇಲಾಖೆಗಿದೆೆ. ಇದುವರೆಗೂ ಕಂಡು ಬರುತ್ತಿರುವ ಸೂಚನೆಗಳಂತೆ, ಖಾಸಗಿ ಶಾಲೆಗಳ ಶಿಕ್ಷಣ ಪೋಷಕರಿಗೆ ಹೊರೆಯಾಗುತ್ತಿದೆ.

ಕೊರೊನಾದಿಂದಾಗಿ ಕಳೆದ ವರ್ಷ ಶಿಕ್ಷಣ ಸಂಪೂರ್ಣ ಅತಂತ್ರವಾಗಿತ್ತು. ಆನ್‌ಲೈನ್‌ – ಆಫ್‌ಲೈನ್ ಎನ್ನುತ್ತಾ ಅರ್ಧದಷ್ಟೂ ಪಠ್ಯ ಸರಿಯಾಗಿ ಕಲಿಸಲು ಆಗಲಿಲ್ಲ. ವಿದ್ಯಾಗಮವೂ ಅರೆಬರೆಯಾಯಿತು. ಇದೆಲ್ಲವೂ ಒಂದು ವರ್ಷದ ಕಥೆ ಎಂದುಕೊಂಡವರಿಗೆ ಎರಡನೇ ಅಲೆ ಆಘಾತ ನೀಡಿತ್ತು. ಈಗ ಮೂರನೇ ಅಲೆ ಕನವರಿಕೆಯಿಂದಾಗಿ ಪೋಷಕರು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ.

ಕಳೆದ ವರ್ಷ ಸರ್ಕಾರದ ಆದೇಶದ ಅನ್ವಯ ಶೇ.70ರಷ್ಟು ಶುಲ್ಕ ಪಡೆಯಲು ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, ಈ ವರ್ಷ ಪೂರ್ಣ ಶುಲ್ಕ ಬೇಕೆಂದು ಖಾಸಗಿ ಶಾಲೆಗಳು ಪಟ್ಟು ಹಿಡಿದಿವೆ. ಕೆಲವು ಪೋಷಕರು ಕಳೆದ ವರ್ಷ ಪೂರ್ಣ ಶುಲ್ಕ ಪಾವತಿಸಿಲ್ಲ. ಈ ವರ್ಷ ಶುಲ್ಕ ಪಾವತಿಸುವ ಸ್ಥಿತಿಯಲ್ಲಿ ಇರದೇ, ಸರ್ಕಾರಿ ಶಾಲೆ ಕಡೆ ಮುಖ ಮಾಡಿದ್ದಾರೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳು, ಟಿ.ಸಿ. ಬೇಕಾದರೆ ಹಳೆ ಬಾಕಿ ಪಾವತಿ ಮಾಡಿ ಎಂದು ಪಟ್ಟು ಹಿಡಿದಿವೆ. ಆನ್‌ಲೈನ್‌ ಮೂಲಕ ಬೇರೆ ಶಾಲೆಗೆ ದಾಖಲಾತಿ ಮಾಡಿಕೊಳ್ಳಬಹುದು. ಆದರೆ, ಸರ್ಕಾರದ ನಿಯಮಗಳ ಪ್ರಕಾರ, ಹಳೆಯ ಶಾಲೆಯಿಂದ ಟಿ.ಸಿ. ಭೌತಿಕವಾಗಿ ಪಡೆಯಬೇಕಿದೆ. ಈ ಸಂದರ್ಭದಲ್ಲೇ ಖಾಸಗಿ ಶಾಲೆಗಳು ಶುಲ್ಕ ಕೇಳುತ್ತಿವೆ.

ಹಲವಾರು ಖಾಸಗಿ ಶಾಲೆಗಳು ಕಟ್ಟಡ, ಡಿಜಿಟಲ್ ಬೋರ್ಡ್ ಸೇರಿದಂತೆ ಹಲವು ಶೈಕ್ಷಣಿಕ ಸೌಲಭ್ಯಗಳಿಗೆ ಸಾಕಷ್ಟು ಹೂಡಿಕೆ ಮಾಡಿವೆ. ಈಗ ಆನ್‌ಲೈನ್‌ ಶಿಕ್ಷಣಕ್ಕೂ ಹೂಡಿಕೆ ಮಾಡಬೇಕಿದೆ. ಆನ್‌ಲೈನ್‌ ಶಿಕ್ಷಣವಾದರೂ ಶಿಕ್ಷಕರಿಗೆ ವೇತನ ಕಡಿಮೆಯಾಗದು. ಇದೆಲ್ಲದರ ನಡುವೆ, ಅನಿಶ್ಚಿತತೆಯಿಂದ ಶುಲ್ಕ ಪಾವತಿಸಲು ಪೋಷಕರು ಹಿಂಜರಿಯುತ್ತಿರುವುದು ಖಾಸಗಿ ಶಾಲೆಗಳಿಗೆ ಸವಾಲು ತಂದಿದೆ.

ಪ್ರತಿಷ್ಠಿತ ಶಾಲೆಗಳು ಈ ಸಂದರ್ಭವನ್ನು ನಿಭಾಯಿಸುವುದು ಸಾಧ್ಯವಾಗಬಹುದಾದರೂ, ಮಧ್ಯಮ ಹಂತದಲ್ಲಿರುವ ಖಾಸಗಿ ಶಾಲೆಗಳಿಗೆ ಕಷ್ಟವಾಗಲಿದೆ. ಜೇಬಿನಲ್ಲಿ ಹಣ ಖಾಲಿ ಮಾಡಿಕೊಂಡಿರುವ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಪೋಷಕರು, ಖಾಸಗಿ ಶಾಲೆಯಲ್ಲಿ ಇಲ್ಲಿರಲಾರೆ – ಸರ್ಕಾರಿ ಶಾಲೆಗೆ ಹೋಗಲಾರೆ ಎಂಬ ತೂಗುಯ್ಯಾಲೆಗೆ ಸಿಲುಕಿದ್ದಾರೆ.

error: Content is protected !!