ಮಕ್ಕಳಿಗೆ ಕೊರೊನಾ ಎದುರಿಸುವ ಶಕ್ತಿ ಇದೆ
– ಡಾ. ಆರ್.ಜಿ. ಆನಂದ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ
ಲಸಿಕೆ, ಮಾಸ್ಕ್, ಸಾಮಾಜಿಕ ಅಂತರವೆಂಬ ಮಂತ್ರ ಪಾಲಿಸಿ
ದಾವಣಗೆರೆ, ಜು. 1 – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿರುವಂತೆ ಲಸಿಕೆ, ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳನ್ನು ಪಾಲಿಸಿದರೆ ಮೂರನೇ ಅಲೆ ಬರುವುದಿಲ್ಲ ಎಂಬ ಶೇ.100ರಷ್ಟು ವಿಶ್ವಾಸ ತಮಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಆರ್.ಜಿ. ಆನಂದ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಪರಿಶೀಲನೆಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕರ್ನಾಟಕದಂತಹ ರಾಜ್ಯಗಳಲ್ಲಿ ಲಸಿಕಾ ಅಭಿಯಾನ ಉತ್ತಮವಾಗಿ ಜಾರಿಗೆ ಬರುತ್ತಿದೆ. ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸುವ ಜೊತೆಗೆ ಮಾಸ್ಕ್ ಧರಿಸಬೇಕಿದೆ ಎಂದು ಹೇಳಿದರು.
ಪ್ರತಿ ರಾಜ್ಯ ಹಾಗೂ ಪ್ರತಿ ಜಿಲ್ಲೆ ಮೂರನೇ ಅಲೆ ತಡೆಗೆ ಸಿದ್ಧತೆ ನಡೆಸಿದೆ. ಆದರೆ, ಮೂರನೇ ಅಲೆ ತಡೆಯುವುದು ಸಾಧ್ಯವಿದೆ ಎಂಬುದನ್ನು ಈ ಹಿಂದಿನ ಅಲೆಗಳ ಸಮಯದಲ್ಲಿ ನಡೆಸಿದ ಅಧ್ಯಯನ ಹಾಗೂ ಸಂಶೋಧನೆ ಗಳು ತೋರಿಸುತ್ತವೆ ಎಂದು ಆನಂದ್ ಹೇಳಿದ್ದಾರೆ. ಮಕ್ಕಳು ಕೊರೊನಾ ಎದುರಿಸುವ ಶಕ್ತಿ ಹೊಂದಿದ್ದಾರೆ. ಹೀಗಾಗಿ ಮಕ್ಕಳಲ್ಲಿ ತೀವ್ರ ಸೋಂಕು ಹಾಗೂ ಸಾವು ಸಂಭವಿಸುವ ಅಪಾಯ ಕಡಿಮೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.
ಮಕ್ಕಳಿಗೆ ಎರಡನೇ ಅಲೆಯಲ್ಲಿ ಸೋಂಕು ಬಂದಿದೆ. ಸೋಂಕಿತ ಮಕ್ಕಳಲ್ಲಿ ಹೊಟ್ಟೆ ಸಮಸ್ಯೆ ಹಾಗೂ ಉಸಿರಾಟದ ಸಮಸ್ಯೆ ಕಂಡು ಬಂದಿದೆ. ಸೂಕ್ತ ರೋಗ ನಿರೋಧಕ ಚಿಕಿತ್ಸೆ ಹಾಗೂ ರಕ್ಷಣಾತ್ಮಕ ಕಾಳಜಿಯಿಂದ ಮಕ್ಕಳು ಚೇತರಿಸಿಕೊಳ್ಳುತ್ತಾರೆ ಎಂದವರು ಹೇಳಿದರು.
ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ, ಕೊರೊನಾ ಮೊದಲ ಹಾಗೂ ಎರಡನೇ ಅಲೆ ನಿಭಾಯಿಸುವಿಕೆ ಮತ್ತು ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ತಡೆಯುವಲ್ಲಿ ದಾವಣಗೆರೆ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.
ಶಾಲೆಗಳ ಪುನರಾರಂಭ ಕುರಿತು ಪ್ರತಿಕ್ರಿಯಿಸಿದ ಅವರು, ಶಿಕ್ಷಣ ಮುಖ್ಯವಾಗಿದೆ. ಮಕ್ಕಳ ಆರೋಗ್ಯವೂ ಅಷ್ಟೇ ಮುಖ್ಯ. ಸಾಮಾಜಿಕ ಅಂತರದ ಶಿಷ್ಟಾಚಾರದ ಪಾಲನೆ ಮಕ್ಕಳಿಗೆ ಕಷ್ಟವಾಗಿದೆ. ಪೋಷಕರೂ ಸಹ ಮಕ್ಕಳನ್ನು ಶಾಲೆಗೆ ಕಳಿಸಲು ಕಳವಳಪಡುತ್ತಿದ್ದಾರೆ. ಸರ್ಕಾರ ಕೊರೊನಾ ಪರಿಸ್ಥಿತಿ ಅಧ್ಯಯನ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಮಕ್ಕಳಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಲು ಕೇಂದ್ರ ಸರ್ಕಾರ ಸಂವೇದನ ಎಂಬ 1800 121 2830 ಸಂಖ್ಯೆಯ ಸಹಾಯವಾಣಿಯನ್ನು ಆರಂಭಿಸಿದೆ. ಕೊರೊನಾ ಅಷ್ಟೇ ಅಲ್ಲದೇ ಮಕ್ಕಳ ಎಲ್ಲ ರೀತಿಯ ಮಾನಸಿಕ ಒತ್ತಡಗಳ ನಿವಾರಣೆಗಾಗಿ ಈ ಮೂಲಕ ನೆರವು ಪಡೆಯಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ಎಸ್ಪಿ ಸಿ.ಬಿ. ರಿಷ್ಯಂತ್ ಉಪಸ್ಥಿತರಿದ್ದರು.