ದಾವಣಗೆರೆ, ಜು.1- ರಾಜ್ಯಾದ್ಯಂತ ಶಾಲಾ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಶಿಕ್ಷಣ ಇಲಾಖೆ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡಲು ಪ್ರಾರಂಭಿಸಲಾಗಿದೆ.
ನಗರದ ನಿಟುವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆನ್ಲೈನ್ ಮೂಲಕ ಪಾಠ ಮಾಡಲಾಯಿತು. ಗಣಿತ ಶಿಕ್ಷಕ ಕೆ.ಟಿ. ಜಯಪ್ಪ ಪಾಠ ಮಾಡಿದರು.
ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಸೇರಿ 8, 9 ಹಾಗೂ 10ನೇ ತರಗತಿ ಮಕ್ಕಳ ಗುಂಪು ರಚಿಸಿಕೊಂಡು ಆನ್ಲೈನ್ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ರೂಪಿಸಲಾಗಿತ್ತು.
ಈಗಾಗಲೇ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ್ದ ಶಿಕ್ಷಕರು ಮೊಬೈಲ್ ಲಭ್ಯತೆ ಬಗ್ಗೆ ವಿವರ ಪಡೆದಿದ್ದರು. ಆಂಡ್ರಾಯ್ಡ್ ಮೊಬೈಲ್ ಇಲ್ಲದ ಮಕ್ಕಳಿಗೆ ಮೊಬೈಲ್ ಇರುವ ಮಕ್ಕಳ ಜೊತೆ ಸೇರಿಸಿ ಪಾಠ ಕೇಳುವಂತೆ ವ್ಯವಸ್ಥೆ ಮಾಡಲಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಮುಖ್ಯ ಶಿಕ್ಷಕ ಎಂ.ಸುರೇಶ್, ಶಾಲೆಯಲ್ಲಿ ಈ ಬಾರಿ ದಾಖಲಾತಿ ಹೆಚ್ಚಾಗಿದ್ದು, ವ್ಯವಸ್ಥಿತವಾಗಿ ಆನ್ಲೈನ್ ಶಿಕ್ಷಣ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಡಯಟ್ ವತಿಯಿಂದಲೂ ಸಹ ತಂತ್ರಜ್ಞಾನ ಬಳಸುವ ತರಬೇತಿ ನೀಡಿದ್ದು, ಇದು ಶಿಕ್ಷಕರಿಗೆ ಸಹಕಾರಿಯಾಗಿದೆ. ಪ್ರತಿದಿನ ಮೂವರು ಶಿಕ್ಷಕರು ಆನ್ಲೈನ್ ಮೂಲಕ ಪಾಠ ಮಾಡಲಿದ್ದಾರೆ ಎಂದು ತಿಳಿಸಿದರು.