ಸಾರ್ವಜನಿಕ ಸೇವೆ ಪುಣ್ಯದ ಕೆಲಸ : ಮೇಯರ್ ವೀರೇಶ್

ದಾವಣಗೆರೆ, ಜೂ. 30- ಸಾರ್ವಜನಿಕ ಸೇವೆ ಮಾಡು ವುದು ಪುಣ್ಯ, ಅದರಲ್ಲೂ ಪಾಲಿಕೆಯಲ್ಲಿ ಸೇವೆ ಮಾಡುತ್ತಿರುವ ನಾವುಗಳೇ ಭಾಗ್ಯಶಾಲಿಗಳು ಎಂದು ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಹರ್ಷ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ಪಾಲಿಕೆಯ ವಯೋನಿವೃತ್ತ ನೌಕರರ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ನಿವೃತ್ತ ನೌಕರರನ್ನು ಗೌರವಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸೇವೆಯಲ್ಲಿ ಜನರ ಕೆಲಸ ಭಗವಂತನದ್ದು ಎಂದು ತಿಳಿದು ಕರ್ತವ್ಯ ನಿರ್ವಹಿಸಿದರೆ ಜೀವನ ಸಾರ್ಥಕವಾಗುತ್ತದೆ ಮತ್ತು ಶ್ರೇಯಸ್ಸಕರವಾಗಲಿದೆ ಎಂದು ಪ್ರತಿಪಾದಿಸಿದ ಮೇಯರ್ ವೀರೇಶ್, ಜನಪ್ರತಿನಿಧಿಗಳು ಪಾಲಿಕೆಯಲ್ಲಿ ಶಾಶ್ವತ ಅಲ್ಲ. ನಮಗೆ ಸಿಕ್ಕಿರುವ ಸೇವಾವಧಿಯಲ್ಲಿ ಇರುವಷ್ಟು ದಿನ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ನಗರ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಮಾತನಾಡಿ, ಸರ್ಕಾರಿ ಸೇವೆಗೆ ಸೇರಿದ ದಿನ ನಿವೃತ್ತಿಯ ದಿನವೂ ಕೂಡ ನಿರ್ಧಾರ ಆಗಿರುತ್ತದೆ. ನಾವು ನಿವೃತ್ತಿವರೆಗೂ ಸಾರ್ವಜನಿಕರಿಗೆ ನೀಡುವ ಸೇವೆಯೇ ಬಹಳ ಮುಖ್ಯ. ಪಾಲಿಕೆ ವ್ಯಾಪ್ತಿಯಲ್ಲಿ ಆರು ಲಕ್ಷ ಜನರಿಗೆ ಸೇವೆ ನೀಡುವ ಸೌಭಾಗ್ಯ ನಮ್ಮದಾಗಿದೆ ಎಂದರು.  

ಕಚೇರಿ ಚಾಲಕ ಎಂ. ವೀರೇಶಿ, ಕರ ವಸೂಲಿಗಾರ ಖಾದರ್ ಬಾಷ, ಪ್ರಥಮ ದರ್ಜೆ ಸಹಾಯಕ ಶ್ರೀನಿವಾಸ ಗೌಡ, ಪೌರ ಕಾರ್ಮಿಕರಾದ ಗಿರಿಜಮ್ಮ, ಗೌರಮ್ಮ, ವಾಲ್‍ಮ್ಯಾನ್ ಆರ್. ತಿಪ್ಪೇಸ್ವಾಮಿ, ಗಾರ್ಡನರ್ ರತ್ನಮ್ಮ ಅವರುಗಳು ಇಂದು ಸೇವೆಯಿಂದ ನಿವೃತ್ತರಾಗಿದ್ದು, ಎಲ್ಲರನ್ನೂ ಬೀಳ್ಕೊಡಲಾಯಿತು.

ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆಯ ಪ್ರಭಾರ ಅಧೀಕ್ಷಕ ಅಭಿಯಂತರ ಉದಯ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ನೌಕರರ ಸಂಘದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಹೆಚ್. ಗುರುಮೂರ್ತಿ ಸೇರಿದಂತೆ, ಇತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!