ದಾವಣಗೆರೆ, ಫೆ.4- ಹುಬ್ಬಳ್ಳಿ – ಧಾರವಾಡ ಬೈಪಾಸ್ ಬಳಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರು ಹಾಗೂ ಸ್ನೇಹಿತರು, ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ನಾಡಿದ್ದು ದಿನಾಂಕ 6ರಂದು ತಮ್ಮ ಸ್ವಂತ ವಾಹನಗಳ ಮೂಲಕ ಅಪಘಾತ ಸ್ಥಳವಾದ ಇಟಿಗಟ್ಟಿಗೆ ಜಾಥಾ ಹೊರಡಲಿದೆ.
ನಾಡಿದ್ದು ದಿನಾಂಕ 6ರ ಬೆಳಿಗ್ಗೆ ನಗರದ ಐಎಂಎ ಹಾಲ್ ನಿಂದ 50ಕ್ಕೂ ಹೆಚ್ಚು ಕಾರುಗಳ ಮೂಲಕ ಜಾಥಾ ಹೊರಟು, ಬೆಳಿಗ್ಗೆ 10 ಗಂಟೆಗೆ ಅಪಘಾತದ ಸ್ಥಳ ತಲುಪಲಾಗುವುದು ಎಂದು ಅಪಘಾತದಲ್ಲಿ ಮೃತಪಟ್ಟ ಶ್ರೀಮತಿ ಪ್ರೀತಿ ರವಿಕುಮಾರ್ ಅವರ ಪತಿ – ಆರೈಕೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರವಿಕುಮಾರ್ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಜನತೆ ಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು, ಅಪಘಾತ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಒಳಸಾರಿಗೆ ಇಲಾಖೆಯನ್ನು ಒತ್ತಾಯಿಸಿ, ಅಲ್ಲಿನ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಬೈಪಾಸ್ ರಸ್ತೆ ಬಹುತೇಕ ಚತುಷ್ಪಥ, ಷಟ್ಪಥ ರಸ್ತೆಯಾಗಿದ್ದು, ಹುಬ್ಬಳ್ಳಿ-ಧಾರವಾಡ ಬೈಪಾಸ್ ಮಾತ್ರ ದ್ವಿಪಥವಾಗಿದೆ. ಈ ರಸ್ತೆ ಸಾವಿನ ಹೆದ್ದಾರಿ ಯಾಗಿದೆ.
ಅಪಘಾತ ತಡೆಯಲು ರಸ್ತೆಯನ್ನು ವಿಸ್ತರಿ ಸಬೇಕು ಎಂದವರು ಸರ್ಕಾರವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಟೇಶ್, ಸಿದ್ಧು, ಚಂದ್ರಶೇಖರ್, ಡಾ.ರಮೇಶ್, ವಿನಯ್ ಹಾಗು ಚಂದ್ರು ಇತರರು ಉಪಸ್ಥಿತರಿದ್ದರು.