ದಾವಣಗೆರೆ ಜಿಲ್ಲೆಯ ರೈತರೂ ದೆಹಲಿಯತ್ತ ಸಾಗಲು ಸಿದ್ದರಾಗಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಕರೆ
ದಾವಣಗೆರೆ, ಫೆ.3- ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ರೈತ ಚಳುವಳಿಯಲ್ಲಿ ದಾವಣಗೆರೆ ಜಿಲ್ಲೆ ಸೇರಿದಂತೆ, ಕರ್ನಾಟಕದಿಂದ ರೈತರು ಭಾಗವಹಿಸಲು ದೆಹಲಿಯತ್ತ ಸಾಗಲು ಸಿದ್ದರಾಗುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಕರೆ ನೀಡಿದರು.
ಅವರು, ಇಂದು ನಗರದ ಎಪಿಎಂಸಿ ಪ್ರಾಂಗಣದಲ್ಲಿನ ರೈತರ ಭವನದಲ್ಲಿ ನಡೆದ ಸೇನೆಯ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತ ವಿರೋಧಿ ಕಾನೂನುಗಳನ್ನು ಬಲವಂತವಾಗಿ ಹೇರಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಹಾಗೂ ಕನಿಷ್ಟ ಬೆಂಬಲ ಬೆಲೆಗೆ ಬಲಿಷ್ಟ ಕಾಯಿದೆ ರೂಪಿಸಬೇಕು ಮತ್ತು ತನ್ನ ಬೆಳೆಗೆ ತಾನೇ ದರ ನಿಗದಿಪಡಿಸುವ ಅಂಶಗಳನ್ನು ಒಳಗೊಂಡ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ, ಪಾಲ್ಗೊಳ್ಳಲು ಕರ್ನಾಟಕದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಸಿದ್ಧರಾಗಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದರೂ ಇದಕ್ಕೆ ಜಗ್ಗದೇ ಕಳೆದ ಎರಡು ತಿಂಗಳಿನಿಂದ ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೆ ನವ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಜಿಲ್ಲೆಯಲ್ಲೂ ತೀವ್ರವಾದ ಚಳವಳಿಗೆ ಚಾಲನೆ ನೀಡುವ ಮೂಲಕ ಜನಾಂದೋಲನವನ್ನಾಗಿ ರೂಪಿಸಬೇಕು. ಕಾಯಿದೆಗಳ ಜಾರಿ ವಿರೋಧಿಸಿ ಮುಂದಿನ ದಿನಗಳಲ್ಲಿ ಶೀಘ್ರವೇ ಇಡೀ ದಿನ ರಾಜ್ಯದ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಹೋರಾಟ ರೂಪಿಸಲಾಗುವುದು. ಇದು ಜಿಲ್ಲೆಯ ಪ್ರತಿಯೊಂದು ಗ್ರಾಮ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆಸಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಮೂರು ಕಾಯ್ದೆಗಳಿಂದ ಆಗುವ ಅನಾಹುತಗಳನ್ನು ತಿಳಿಸುವ ಉದ್ದೇಶದಿಂದ ಫೆ.18ರಂದು ಎಪಿಎಂಸಿ ಪ್ರಾಂಗಣದಲ್ಲಿ ಕಾರ್ಯಾಗಾರ ಆಯೋಜನೆ ಮಾಡಲಾಗಿದೆ. ಇದರಲ್ಲಿ ಸಂಘಟನೆಯ ಪ್ರತಿಯೊಬ್ಬ ಕಾರ್ಯ ಕರ್ತರು ಭಾಗವಹಿಸಬೇಕು. ಕಾರ್ಯಾಗಾರದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಯುವ ಜನಾಂಗಕ್ಕೆ ಮುಟ್ಟಿಸುವ ಕೆಲಸ ಮಾಡಬೇಕೆಂದರು.
ಕನಿಷ್ಟ ಬೆಂಬಲ ಬೆಲೆಗೆ ಯಾವುದೇ ಕಾಯಿದೆ ಇಲ್ಲದಿರುವುದೇ ರೈತರ ಶೋಷಣೆಗೆ ಕಾರಣ. ಈ ಹಿನ್ನೆಲೆಯಲ್ಲಿ ಎಂಎಸ್‌ಪಿಗೆ ಕಾಯಿದೆ ರೂಪಿಸಿ ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ರೈತರ ಉತ್ಪನ್ನ ಖರೀದಿಸುವವರಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು ವ್ಯತ್ಯಾಸದ ಹಣವನ್ನು ಮರಳಿ ರೈತರಿಗೆ ಕೊಡಿಸುವ ಅಂಶಗಳನ್ನು ಕಾಯಿದೆ ಹೊಂದಿರಬೇಕು. ರೈತ ಬೆಳೆದ ಬೆಲೆಗೆ ಇದುವರೆಗೂ ದರ ನಿಗದಿ ಮಾಡಿಲ್ಲ. ಎಪಿಎಂಸಿ ಕಾಯಿದೆ ತಿದ್ದುಪಡಿ ಮಾಡುವುದಾದರೆ ರೈತ ಬೆಳೆದ ಬೆಲೆಗೆ ರೈತನೇ ಬೆಲೆ ನಿಗದಿಪಡಿಸುವ ಅಂಶಗಳನ್ನು ಹೊಸ ಕಾಯಿದೆಯಲ್ಲಿ ತರಬೇಕು. ಕನಿಷ್ಟ ಬೆಂಬಲ ಬೆಲೆಗೆ ಬಲಿಷ್ಟ ಕಾಯಿದೆ ರೂಪಿಸಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಖಾಸಗೀಕರಣದಿಂದ ರೈತರು ಹಣ ಕೊಟ್ಟು ವಿದ್ಯುತ್ ಖರೀದಿ ಮಾಡಬೇಕಾದ ಸಂಕಷ್ಟ ಎದುರಾಗಲಿದ್ದು, ಇದನ್ನು ಬಿಜೆಪಿ ನಾಯಕರು ಅಲ್ಲಗಳೆಯುತ್ತಾರೆ. ಈ ಕಾಯ್ದೆ ಬೆಂಬಲಿಸುವ ಬಿಜೆಪಿ ಸಂಸದರು, ಶಾಸಕರು ಅದನ್ನು ಅಳವಡಿಸಿಕೊಳ್ಳಲಿ. ಸರಿ ಇಲ್ಲದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ಕಾಯ್ದೆಯನ್ನು ತೆಗೆಸಲಿ ಎಂದು ಸವಾಲು ಹಾಕಿದರು.
ರೈತ ಮುಖಂಡ ಮಲ್ಲಿಗೆರೆ ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದರೂ ರೈತರು ಇನ್ನೂ ಆಕ್ರೋಶಗೊಂಡಿಲ್ಲ. ಕಾಯ್ದೆಗಳ ಪರ ಇರುವವರಿಗೆ ನಾವುಗಳು ಸಹ ತಕ್ಕ ಉತ್ತರ ನೀಡಬೇಕು. ಈ ದಿಸೆಯಲ್ಲಿ ನಾವುಗಳು ಜಾಲತಾಣಗಳಲ್ಲಿ ಸಕ್ರಿಯರಾಗಬೇಕು. ಇದಕ್ಕೆ ಯುವಕರನ್ನು ಸಿದ್ದಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಗುಮ್ಮನೂರು ಬಸವರಾಜ್ ಇತರರು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ರೈತ ಮುಖಂಡರಾದ ಚಿರಂಜೀವಿ, ಹೊನ್ನಾಳಿ ಸತೀಶ್, ಶಿವಕುಮಾರ್ ಸೇರಿದಂತೆ ಇತರರು ಇದ್ದರು.