ದಾವಣಗೆರೆ, ಏ.6- ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿನಿಯರೂ ಸೇರಿದಂತೆ ಜಿಲ್ಲೆಯಲ್ಲಿಂದು 47 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದೆ. ಸಕ್ರಿಯ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 39, ಹರಿಹರ 1, ಚನ್ನಗಿರಿ 1, ಹೊನ್ನಾಳಿ 4 ಹಾಗೂ ಹೊರ ಜಿಲ್ಲೆಯ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಮೂವರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿಗಳಿಗೆ ಸೋಂಕು: ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 25 ವಿದ್ಯಾರ್ಥಿ ನಿಯರಲ್ಲಿಂದು ಕೊರೊನಾ ಸೋಂಕು ದೃಢಪಟ್ಟಿದೆ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲರೂ ಕಾಲೇಜಿನ ವಿದ್ಯಾರ್ಥಿನಿಲಯದಲ್ಲಿ ವಾಸವಿದ್ದು, ಅಲ್ಲಿನ 134 ವಿದ್ಯಾರ್ಥಿನಿಯರು, 15 ಜನ ಅಡುಗೆ ಸಿಬ್ಬಂದಿ ಹಾಗೂ ಪರಿಚಾರಕರ ಗಂಟಲು ಮಾದರಿ ದ್ರವ ಪರೀಕ್ಷೆಗೆ ಪಡೆಯಲಾಗಿದೆ. ವಿದ್ಯಾರ್ಥಿ ನಿಲಯವನ್ನು ಕಂಟೈನ್‌ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್ ತಿಳಿಸಿದ್ದಾರೆ.
ಎಲ್ಲಾ ವಿದ್ಯಾರ್ಥಿನಿಯರೂ ಕೇರಳ ಮೂಲದವರಾಗಿದ್ದು, ಎರಡು ತಿಂಗಳ ಹಿಂದೆ ಕಾಲೇಜು ಆರಂಭವಾದಾಗ ಬಂದಿದ್ದಾರೆ. ಬರುವಾಗ ಕೊರೊನಾ ನೆಗೆಟಿವ್ ವರದಿ ತಂದಿದ್ದರೆಂದು ಹಾಸ್ಟೆಲ್ ಮೇಲ್ವಿಚಾರಕರು ತಿಳಿಸಿದ್ದಾರೆ ಎಂದ ರಾಘವನ್, ಜಿಲ್ಲೆಯಲ್ಲಿ ರೂಪಾಂತರಿ ಕೊರೊನಾ ವೈರಸ್ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.