ದಾವಣಗೆರೆ, ಏ.6- ಬಿಸಿಲಿನ ಬೇಗೆಯಿಂದ ಉಂಟಾಗುವ ದಾಹ ತೀರಿಸಿಕೊಳ್ಳಲು ಸಾರ್ವಜನಿಕರು ಮಜ್ಜಿಗೆ ಸೇವನೆ ಮಾಡುವುದು ಉತ್ತಮ. ತನ್ಮೂಲಕ ರೈತರಿಗೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ನಗರದ ಜಯದೇವ ವೃತ್ತದ ಬಳಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜನೆಗೊಂಡಿದ್ದ ಉಚಿತ ಮಜ್ಜಿಗೆ ಹಾಗೂ ನೀರು ವಿತರಣೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.
ಬಸವಣ್ಣನವರು ಮಜ್ಜಿಗೆಯನ್ನು ಶಿವದಾನ ಎಂದು ಕರೆಯಲ್ಪಟ್ಟಿದ್ದರು. ಮಜ್ಜಿಗೆ ಸೇವನೆಯಿಂದ ದೇಹ ತಂಪಾಗುವುದಲ್ಲದೇ ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ನಿವಾರಣೆಗೂ ಇದು ಉತ್ತಮ ಪಾನೀಯ ಎಂದರು.
ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರ ಬಿಸಿಲಿನ ದಾಹ ತೀರಿಸಲು ಉಚಿತ ವಾಗಿ ನೀರು ಮತ್ತು ಮಜ್ಜಿಗೆ ವಿತರಣೆ ಮಾಡುವ ಶ್ರೇಷ್ಠ ಕಾಯಕ ಮಾಡುತ್ತಿರುವ ಕರುಣಾಜೀವ ಕಲ್ಯಾಣ ಟ್ರಸ್ಟ್ ಇತರೆ ಸಂಘ-ಸಂಸ್ಥೆ ಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
`ಕರುಣಾ ಜೀವ ಕಲ್ಯಾಣ’ ಟ್ರಸ್ಟ್ ಹೆಸರೇ ವಿಶಿಷ್ಟವಾಗಿದೆ. ಈ ಸಂಸ್ಥೆ ತುಂಬಾ ವರ್ಷಗಳಿಂದ ಕರುಣೆಯಿಂದ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಬಡವರ, ದೀನ-ದಲಿತರ ಕಲ್ಯಾಣಕ್ಕಾಗಿ ದುಡಿಯುತ್ತಿರುವುದು ಶ್ಲಾಘನೀಯ ಎಂದರು.
ದಯಾಮರಣ ಹೋರಾಟಗಾರ್ತಿ ಹೆಚ್.ಬಿ. ಕರಿಬಸಮ್ಮ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಟ್ರಸ್ಟ್ನ ಅಧ್ಯಕ್ಷ ಸಿ.ಜಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಮಂಜುಳಾ ಬಸವಲಿಂಗಪ್ಪ, ಡಾ. ಹೆಚ್.ಎನ್. ಮಲ್ಲಿಕಾರ್ಜುನ್, ಬಸವರಾಜ್ ಒಡೆಯರ್, ನಸೀರ್ ಅಹ್ಮದ್, ಸಿಬ್ಬಂದಿ ಆರ್.ಬಿ. ಪಾಟೀಲ್, ವೀಣಾ ಕುಮಾರ್, ಸೋನು, ಲಿಂಗರಾಜ್, ಸದಾನಂದ್, ಸುಮ, ರೇಖಾ, ವಿಜಯಲಕ್ಷ್ಮಿ ಭಾಗವಹಿಸಿದ್ದರು.