ದಾವಣಗೆರೆ, ಫೆ.2- ಜ್ಯೋತಿಷ್ಯ ಎಂದೂ ಭಯ ಹುಟ್ಟಿಸುವುದಿಲ್ಲ. ಬದಲಿಗೆ ಭವಿಷ್ಯದ ಸೂಕ್ಷ್ಮ, ಅತಿ ಸೂಕ್ಷ್ಮ ವಿಚಾರ ಗಳನ್ನು ಸರಳವಾಗಿ ತಿಳಿಸುವುದಾಗಿದೆ. ಭಯ ಹುಟ್ಟಿಸಿ ಜ್ಯೋತಿಷ್ಯ ಹೇಳುವುದು ಜ್ಯೋತಿಷ್ಯ ಶಾಸ್ತ್ರ ಹೇಳುವವರಲ್ಲ ಎಂದು ಆವರಗೊಳ್ಳ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಸಿ.ಕೆ. ಆನಂದತೀರ್ಥಾಚಾರ್ ಅವರ ರಚನೆಯ ‘ಸಂಸ್ಕಾರ ಸೌರಭ’ ಪುಸ್ತಕವನ್ನು ಲೋಕಾರ್ಪಣೆ ಗೊಳಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪಂಚ ಭೂತಗಳು ಯಾವಾಗ ಹುಟ್ಟಿದವು. ಅಲ್ಲಿಂದ ಜ್ಯೋತಿಷ್ಯ ಸೃಷ್ಟಿಯಾಗಿದೆ. ಅದು ಪಂಚಭೂತಗಳು ಇರುವವರೆಗೂ ಉಳಿಯುತ್ತದೆ. ಮನುಷ್ಯನ ಪ್ರತಿಯೊಂದು ಸ್ತರ, ಆಯಾಮಗಳಲ್ಲಿ ಕೂಡ ತಾತ್ವಿಕ ನೆಲೆಗಟ್ಟಿನಲ್ಲಿ ಅರಿವು, ತಿಳಿವಳಿಕೆಯ ಕೈಗನ್ನಡಿಯಾಗಿದೆ ಎಂದು ತಿಳಿಸಿದರು.
ಪ್ರಸ್ತುತ ವೈಜ್ಞಾನಿಕ ಸಮೂಹ ಒಂದು ಕಡೆ, ಇನ್ನೊಂದೆಡೆ ಪ್ರಾಜ್ಞರು ಜ್ಯೋತಿಷ್ಯ ಶಾಸ್ತ್ರದಲ್ಲಿ ಅವಲಂಬಿತರಾಗಿದ್ದಾರೆ. ಸರ ಹೊತ್ತಿನಲ್ಲಿ ಹುಟ್ಟಿದ ಮಗುವನ್ನು ನೋಡುವ ವಿಚಾರದಲ್ಲಿ ಜ್ಯೋತಿಷ್ಯದ ಮೊರೆ ಹೋಗುತ್ತಾರೆ. ಇದು ಜ್ಯೋತಿಷ್ಯದ ಮೇಲಿನ ನಂಬಿಕೆ ಆಗಿದೆ ಎಂದು ಹೇಳಿದರು.
ಟಿವಿ ಜ್ಯೋತಿಷ್ಯ ಬೇಡ
ಟಿ.ವಿ. ಜ್ಯೋತಿಷ್ಯದ ಪ್ರಭಾವ ಹೆಚ್ಚಾಗಿದೆ. ಇದು ನಿಜವಾದ ಜ್ಯೋತಿಷ್ಯ ಶಾಸ್ತ್ರವೇ ಅಲ್ಲ. ಇಂತಹ ಬೂಟಾಟಿಕೆಯ ಜ್ಯೋತಿಷ್ಯಕ್ಕೆ ಜನರು ಮಾರು ಹೋಗಬಾರದು. ವಿಷ ಬೀಜ ಬಿತ್ತುವ ಕೆಲಸವೂ ಆಗಬಾರದು. ಕೇವಲ ಜನರ ಮನಸ್ಸನ್ನು ತೃಪ್ತಿಪಡಿಸುವ ಭವಿಷ್ಯವು ನಿಜವಾದ ಜ್ಯೋತಿಷ್ಯವಲ್ಲ. ಭವಿ ಷ್ಯದ ಹಿತವನ್ನು ತಿಳಿಸುವಂತಹ ಜ್ಯೋತಿಷ್ಯ ವಿಜ್ಞಾನವನ್ನು ಅರಿತಿರುವ ಪಂಡಿತರ ಜ್ಯೋತಿಷ್ಯವೇ ನಿಜವಾದ ಜ್ಯೋತಿಷ್ಯ.
– ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ
ಜ್ಯೋತಿಷ್ಯ ದೂಷಣೆ ಸಲ್ಲ
ಕೊರೊನಾ, ಭೂಕಂಪನ ಸೇರಿದಂತೆ ಪ್ರಕೃತಿ ವಿಕೋಪ, ಅಪಾಯ, ಅನಾಹುತಗಳ ಬಗ್ಗೆ ಎಚ್ಚರಿ ಕೆಯ ಮುನ್ಸೂಚನೆ ನೀಡಿದರೆ, ಜ್ಯೋತಿಷ್ಯವನ್ನೇ ದೂಷಿಸುವುದು, ಟೀಕಿಸುವುದು ಸರಿಯಲ್ಲ. ಮಕರ ಸಂಕ್ರಮಣದ ಮಾರನೇ ದಿನ ಕರಿದಿನ ಮತ್ತು ಕೆಟ್ಟ ದಿನ ಅಂದು ಪ್ರಯಾಣ ಮಾಡಬಾರದು. ಅಂತೆಯೇ ಸಂಕ್ರಮಣದ ದಿನ ಪ್ರಯಾಣಿಸಿದ ಮಹಿಳೆಯರು ದುರಂತ ಸಾವು ಕಂಡಿದ್ದು ಬೇಸರದ ಸಂಗತಿ.
– ಸಿ.ಕೆ. ಆನಂದತೀರ್ಥಾಚಾರ್
ಹಿಂದೆ ಮಡಿವಂತಿಕೆಯಿಂದ ಕೂಡಿದ್ದ ಜ್ಯೋತಿಷ್ಯ ಶಾಸ್ತ್ರ ಈಗ ಅದರಿಂದ ಹೊರ ಬಂದಿದ್ದು, ಜಾತಿ, ಧರ್ಮಕ್ಕೆ ಸೀಮಿತ ವಾಗಿಲ್ಲ. ಅದು ನಂಬಿರುವ ಜನರಿಗೆ ನಿಖರ ಮತ್ತು ಸ್ಪಷ್ಟವಾದ ಭವಿಷ್ಯ ತಿಳಿಸಿ ಬೆಳಕು ಚೆಲ್ಲುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃತಿಯ ಸಂಗ್ರಹಕಾರ ಸಿ.ಕೆ. ಆನಂದತೀರ್ಥಾ ಚಾರ್, ಜನನದಿಂದ ಮರಣದವರೆಗೆ ಜ್ಯೋತಿಷ್ಯದ ಅಗತ್ಯವಿದೆ. ಸಕಾಲದಲ್ಲಿ ಜೀವನದ ಭವಿಷ್ಯದ ಬಗ್ಗೆ ತಿಳಿಯುವುದ ರಿಂದ ಒಳಿತನ್ನು ಕಾಣಬಹುದಲ್ಲದೇ, ಮುಂದಾಗುವ ಅಪಾಯದಿಂದ ಪಾರಾಗ ಬಹುದಾಗಿದೆ. ಜಾತಿ, ಭೇದ ಇಲ್ಲದೇ ಜ್ಯೋತಿಷ್ಯ ಕಲಿಯಬಹುದು ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಎಂ. ಗದಿಗೆಪ್ಪಯ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಜ್ಯೋತಿಷ್ಯ ಹಾಗೂ ಜ್ಯೋತಿಷ್ಯ ಬೋಧನೆಗಳ ಒಕ್ಕೂಟದ ಕಾರ್ಯದರ್ಶಿ ಬಿ. ಗಜೇಂದ್ರ, ಖಜಾಂಚಿ ಡಾ. ಅನಂತರಾಘವನ್, ವಸಿಷ್ಠ ಸಂಸ್ಥಾನ್ ಅಧ್ಯಕ್ಷ ಡಾ. ಕುಮಾರ್ ವಸಿಷ್ಠ, ಹುಬ್ಬಳಿಯ ಜ್ಯೋತಿರ್ವಿಜ್ಞಾನ ಮಾಸ ಪತ್ರಿಕೆ ಸಂಪಾದಕ ಗಣೇಶ್ ಹೆಗಡೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದರು.
ಮಂಜುನಾಥ ಸ್ವಾಮಿ ಅವರಿಂದ ವೇದಘೋಷ ನಡೆಯಿತು.
ಟಿ. ಪರಮೇಶ್ವರಾಚಾರ್ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ ನಿರೂಪಿಸಿದರು.