ಬಾಪೂಜಿ ಹಾಲ್‌ ಅಭಿವೃದ್ಧಿ ಬಗ್ಗೆ ಡಿಸಿ ಬಳಿ ಚರ್ಚಿಸಿ, ತೀರ್ಮಾನ

ಮಲೇಬೆನ್ನೂರು ಪುರಸಭೆಯ ವಿಶೇಷ ಸಭೆಯಲ್ಲಿ ನಿರ್ಧಾರ

ಮಲೇಬೆನ್ನೂರು, ಏ.5- ಪಟ್ಟಣದಲ್ಲಿರುವ ಬಾಪೂಜಿ ಹಾಲ್ ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಿ, ಅನುಮತಿ ಪಡೆಯುವ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಇಂದಿನ ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

2019-20 ನೇ ಸಾಲಿನ ಬಾಪೂಜಿ ಹಾಲ್‌ ದುರಸ್ತಿ ಕಾಮಗಾರಿಯ ಬದಲಾಗಿ, ಬದಲಿ ಕಾಮಗಾರಿ ತೆಗೆದುಕೊಳ್ಳುವ ವಿಚಾರವನ್ನು ಪ್ರಭಾರ ಮುಖ್ಯಾಧಿಕಾರಿ ದಿನಕರ್ ಪ್ರಸ್ತಾಪಿಸಿದಾಗ ಸದಸ್ಯ ಬಿ.ಎಂ. ಚನ್ನೇಶ್ ಸ್ವಾಮಿ ಅವರು ಕಾಮಗಾರಿ ಬದಲಿ ಮಾಡುವುದು ಬೇಡ. ಬಾಪೂಜಿ ಹಾಲ್ ಅಭಿವೃದ್ಧಿಗೆ ಈಗಿರುವ ಅನುದಾನದ ಜೊತೆಗೆ ಬೇರೆ ಅನುದಾನವನ್ನು ಹಾಕುವ ಬಗ್ಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸೋಣ ಎಂದರು.

ಆಗ ಸದಸ್ಯ ದಾದಾವಲಿ ಅವರು ಕೇವಲ 9 ಲಕ್ಷ ಅನುದಾನದಲ್ಲಿ ಬಾಪೂಜಿ ಹಾಲ್‌ ಅಭಿವೃದ್ಧಿ ಸಾಧ್ಯವಿಲ್ಲ. ಶಾಸಕರು, ಸಂಸದರ ಮತ್ತು ವಿಶೇಷ ಅನುದಾನ ಪಡೆದು ಅಭಿವೃದ್ಧಿ ಪಡಿಸೋಣ. ಈಗಿರುವ ಅನುದಾನವನ್ನು ಬೇರೆ ಕೆಲಸಕ್ಕೆ ಬಳಕೆ ಮಾಡೋಣ ಎಂದಾಗ ಇದಕ್ಕೆ ದನಿಗೂಡಿಸಿದ ಸದಸ್ಯ ಎ. ಆರೀಫ್ ಅಲಿ ಅವರು ಬಾಪೂಜಿ ಹಾಲ್‌ನಲ್ಲಿ ನಾನೂ ಓದಿದ್ದೇನೆ. ಅದರ ಅಭಿವೃದ್ಧಿ ಬಗ್ಗೆ ನಮಗೂ ಕಳಕಳಿ ಇದೆ. ಮೊದಲು ನಾವು ಆ ಕಟ್ಟಡವನ್ನು ನಮ್ಮ ಸುಪರ್ದಿಗೆ ಪಡೆದು, ನಂತರ ಅನುದಾನ ಹಾಕಿ ಅಭಿವೃದ್ಧಿ ಪಡಿಸೋಣ ಎಂದರು.

ಸದಸ್ಯ ಬಿ. ಸುರೇಶ್ ಮಾತನಾಡಿ, ಬಾಪೂಜಿ ಹಾಲ್ ಅಭಿವೃದ್ಧಿ ಪಡಿಸಿ, ವಿವಿಧ ಕಚೇರಿಗಳ ಸಂಕೀರ್ಣ ಮಾಡಬೇಕು. ಸದಸ್ಯ ಬಿ. ಸುರೇಶ್ ಮಾತನಾಡಿ, ಕಳೆದ 5 ವರ್ಷಗಳಿಂದ ಈ ಕುರಿತು ಚರ್ಚೆ ನಡೆದಿದೆ. ಈಗಾಗಲೇ ಟೆಂಡರ್ ಆಗಿತ್ತು. ಆದರೆ ಡಿಸಿಯವರೇ ಇಷ್ಟು ಕಡಿಮೆ ಅನುದಾನದಲ್ಲಿ ಕೆಲಸ ಆಗಲ್ಲ ಎನ್ನುವ ಕಾರಣ ಹೇಳಿ ಕೆಲಸ ನಿಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ.

ಪ್ರಭಾರ ಮುಖ್ಯಾಧಿಕಾರಿ ದಿನಕರ್ ಅವರು, ನಾನು ಅಧಿಕಾರ ವಹಿಸಿಕೊಂಡು 15 ದಿನಗಳಾಗಿವೆ. ಸದಸ್ಯರು ಕೇಳುವ ಎಲ್ಲಾ ಮಾಹಿತಿಗಳನ್ನು ನೀಡಲು ಸಿದ್ಧರಿದ್ದೇವೆ ಎಂದು ಉತ್ತರ ನೀಡಿದರು. 

ಇದರ ಮಧ್ಯೆ ಹಿರಿಯ ಸದಸ್ಯ ಮಾಸಣಗಿ ಶೇಖರಪ್ಪ ಅವರು 5 ವರ್ಷಗಳಿಂದ ಹೇಳಿಕೊಳ್ಳುವಂತಹ ಒಂದೂ ಕೆಲಸವನ್ನು ನಾವು ಮಾಡಿಲ್ಲ ಎಂದಾಗ ಸಭೆಯಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

2020-2021 ನೇ ಸಾಲಿನ 15 ನೇ ಹಣಕಾಸು ಯೋಜನೆಯ ಕಾಮಗಾರಿಗಳನ್ನು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಕರೆಯಲು ಮತ್ತು 2015-16 ನೇ ಸಾಲಿನಿಂದ 2019-20ನೇ ಸಾಲಿನವರೆಗೆ 14ನೇ ಹಣಕಾಸಿನ ಅನುದಾನದಲ್ಲಿ ಉಳಿದಿರುವ 21.30 ಲಕ್ಷ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಲು ವಿಶೇಷ ಸಭೆ ಒಪ್ಪಿಗೆ ನೀಡಿತು.

ಬೇರೆ ವಿಷಯ ಪ್ರಸ್ತಾಪ ಮಾಡಲು ಸದಸ್ಯ ಬಿ. ಸುರೇಶ್ ಮುಂದಾದಾಗ ಮುಖ್ಯಾಧಿಕಾರಿ ದಿನಕರ್ ಅವರು ವಿಶೇಷ ಸಭೆಯಲ್ಲಿ 3 ವಿಷಯಗಳಿಗೆ ಮಾತ್ರ ಅವಕಾಶ ಇದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಎಸ್‌ಎಫ್‌ಸಿ ಅನುದಾನದ ಬಗ್ಗೆ ಚರ್ಚಿಸೋಣ ಎಂದು ಹೇಳಿ ಸಭೆಯನ್ನು ಮುಗಿಸಿದರು.

ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಅಂಜಿನಮ್ಮ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ್ ಸ್ವಾಮಿ, ಸದಸ್ಯರಾದ ಮಹಾಲಿಂಗಪ್ಪ, ಬರ್ಕತ್ ಅಲಿ, ಸಾಕಮ್ಮ ರವಿಕುಮಾರ್, ಶಶಿಕಲಾ ಕೇಶವಾಚಾರಿ, ನಾಮಿನಿ ಸದಸ್ಯರಾದ ಪಿ.ಆರ್. ರಾಜು, ಜಿ.ಹೆಚ್. ಮಂಜಪ್ಪ, ಟಿ. ವಾಸಪ್ಪ, ಪ್ರೇಮ ಪರಮೇಶ್ವರಪ್ಪ, ಅಧಿಕಾರಿಗಳಾದ ಉಮೇಶ್, ಪ್ರಭು, ಗುರುಪ್ರಸಾದ್, ಶಿವಯೋಗಿ, ಇಮ್ರಾನ್ ಇನ್ನಿತರರಿದ್ದರು.

error: Content is protected !!