ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ
ದಾವಣಗೆರೆ, ಫೆ.1- ಜಗತ್ತು ಇಷ್ಟೊಂದು ಮುದುವರೆದರೂ ಸಹ ಸಮಾಜದಲ್ಲಿ ಈಗಲೂ ಹಲವಾರು ಕಟ್ಟುಪಾಡುಗಳು ನಡೆದುಕೊಂಡು ಬಂದಿವೆ. ಅಂತಹ ಎಲ್ಲಾ ಕಟ್ಟುಪಾಡುಗಳನ್ನು, ಸೂತಕಗಳನ್ನು ಮಡಿ ಮಾಡುವ ಪುಣ್ಯದ ಕೆಲಸ ಮಡಿವಾಳ ಸಮುದಾಯಕ್ಕೆ ದೊರಕಿದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಶಾಂತಕುಮಾರಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡ ಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಮಾಚಿದೇವ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸ ಲಾಗಿದ್ದ ವಚನ ರಕ್ಷಕ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲಾ ಸಮಾಜಗಳ ಸೂತಕಗಳನ್ನು ತೊಳೆಯುವ ಜೊತೆಗೆ ಸಮಾಜದಲ್ಲಿನ ಮಡಿ ಮಾಡುವುದು ಮಾತ್ರವಲ್ಲದೆ, ಕೊಳಕು ಮನಸ್ಸುಗಳನ್ನು ತೊಳೆದು ಮಾಲಿನ್ಯ ರಹಿತವಾದ ಸಮಾಜ ನಿರ್ಮಿಸುವಲ್ಲಿ ಮಡಿವಾಳ ಸಮಾಜದ ಕೊಡುಗೆ ಇದೆ ಎಂದು ಸ್ಮರಿಸಿದರು. ಹೆಸರಿನಲ್ಲಿ ಮಡಿ ಇರುವ ಮಡಿವಾಳ ಸಮಾಜ ಶೈಕ್ಷಣಿಕ ವಾಗಿ ಮುಂದೆ ಬಂದಲ್ಲಿ ಸಮುದಾಯ ಮುಂದೆ ಬರಲು ಸಾಧ್ಯ. ಕಾರಣ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ತಾವು ಸ್ವಾವಲಂಬನೆ ಸಾಧಿಸುವ ಜೊತೆಗೆ ಸಮಾಜಕ್ಕೆ ಮಕ್ಕಳನ್ನು ಉತ್ತಮ ಕೊಡುಗೆ ಯನ್ನಾಗಿ ನೀಡಬೇಕೆಂದು ಕರೆ ನೀಡಿದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ನಜ್ಮಾ ಮಾತನಾಡಿ, ಬಸವಣ್ಣನವರ ಆದರ್ಶ, ತತ್ವಗಳನ್ನು ಮೈಗೂಡಿಸಿಕೊಂಡು ವಚನ ಮತ್ತು ಸಾಹಿತ್ಯವನ್ನು ಓದುವ ಮೂಲಕ ಪರಿಪೂರ್ಣ ವ್ಯಕ್ತಿಗಳಾಗಬೇಕು. ಸಮಾಜದಲ್ಲಿನ ಅಪನಂಬಿಕೆಗಳನ್ನು ಹೋಗಲಾಡಿಸಬೇಕಿದೆ. ಇದಕ್ಕಾಗಿ ಶಿಕ್ಷಣ ಅಗತ್ಯ. ಮಾಚಿದೇವರ ತತ್ವಗಳ ಮೇಲೆ ನಡೆಯಬೇಕೆಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಸಮುದಾಯದ ಕಾಯಕ ಮಾಡುತ್ತಾ ಸಮಾಜದ ಅಭಿವೃದ್ಧಿಗೆ ಶ್ತಮಿಸಬೇಕು. ಮಡಿವಾಳ ಸಮುದಾಯ ಎಲ್ಲಾ ಸಮುದಾಯಗಳ ಜೊತೆಗೆ ನಿಲ್ಲಬೇಕೆಂದರೆ ಶಿಕ್ಷಣ ಬೇಕು. ಸಮಾಜವನ್ನು ಬಲಿಷ್ಠವಾಗಿ ಕಟ್ಟಿ ಎಲ್ಲರೂ ಒಗಟ್ಟಾಗಿ ನಿಂತರೆ ಎಂತಹ ಸವಾಲುಗಳನ್ನಾದರೂ ಎದುರಿಸಲು ಸಾಧ್ಯ. ಕಾರಣ ಎಲ್ಲರೂ ಒಂದಾಗಿ ಒಗ್ಗಟ್ಟಿನ ಮಂತ್ರ ಪಠಿಸಬೇಕು. ಆ ಮೂಲಕ ಸಮಾಜಕ್ಕೂ, ದೇಶಕ್ಕೂ ಕೊಡುಗೆ ನೀಡಬೇಕೆಂದು ಹೇಳಿದರು.
ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ ಮಾತನಾಡಿ, ಕಳಂಕ ರಹಿತ ಶರಣರ ಬಟ್ಟೆಗಳನ್ನು ಮಡಿ ಮಾಡುವ ಮೂಲಕ 12ನೇ ಶತಮಾನದಲ್ಲಿ ಕಲ್ಮಶ ಮನಸ್ಸುಗಳನ್ನು ದೂರ ಇಟ್ಟು ಸಮಾಜದಲ್ಲಿನ ಅನಿಷ್ಟ ಕಟ್ಟುಪಾಡುಗಳನ್ನು ವಿರೋಧಿಸಿ, ಬಸವಣ್ಣನವರ ಶರಣರ ಗುಂಪಿನಲ್ಲಿ ಮುಂಚೂಣಿಯಲ್ಲಿದ್ದ ಮಹಾನ್ ಪ್ರಕಾಶಮಾನ ಶರಣ ಮಡಿವಾಳ ಮಾಚಿದೇವರು ಎಂದು ಹೇಳಿದರು.
ಜಿ.ಪಂ. ಉಪಾಧ್ಯಕ್ಷರಾದ ಸಾಕಮ್ಮ ಗಂಗಾ ಧರ ನಾಯ್ಕ, ಮಡಿವಾಳ ಮಾಚಿದೇವ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಉಪಾಧ್ಯಕ್ಷ ಡೈಮಂಡ್ ಮಂಜುನಾಥ್, ಪಿ.ಮಂಜುನಾಥ್, ವಿಜಯ ಕುಮಾರ್, ಖಜಾಂಚಿ ಸುರೇಶ್ ಕೋಗುಂಡೆ, ತಾಂತ್ರಿಕ ಸಲಹೆಗಾರರಾದ ಎಂ.ಎನ್.ನಾಗರಾಜ್, ಸಹ ಕಾರ್ಯದರ್ಶಿ ಆರ್.ಎನ್.ಧನಂಜಯ್, ನಿರ್ದೇಶಕರಾದ ಎಂ.ವೈ.ಸತೀಶ್, ರುದ್ರೇಶ್, ಗುಡ್ಡಪ್ಪ, ಹೆಚ್.ದುಗ್ಗಪ್ಪ, ರವಿಚಿಕ್ಕಣ್ಣ, ಅಜಯ್, ಪರಶುರಾಮ, ಕಿಶೋರ್ ಕುಮಾರ್, ರೇವಣಪ್ಪ, ನಾಗಪ್ಪ, ನಾಗಮ್ಮ, ಚಂದ್ರ ಕಲಾ, ಎಂ.ಕೆ.ಲಕ್ಷ್ಮಿ, ಸುಮಿತ್ರಾ, ರತ್ನಕ್ಕ, ಗಣೇಶ್ ಪೂಜಾರ್, ಶ್ರೀನಿವಾಸ್ ಪೂಜಾರ್, ಯಲ್ಲಪ್ಪ ಪೂಜಾರ್, ಅಶೋಕ್ ಪೂಜಾರ್, ಮಡಿಕಟ್ಟೆಯ ರವಿ, ಮಲ್ಲೇಶಪ್ಪ, ಫಕ್ಕೀರಪ್ಪ, ಲಕ್ಷ್ಮಣ್, ಹುಚ್ಚಪ್ಪ, ಕೋಟೆಪ್ಪ, ಮಡಿವಾಳಪ್ಪ, ಬಸವರಾಜ್ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಇದ್ದರು.
ಇದೇ ಸಂದರ್ಭದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪದವಿ ಪಡೆದ ಡಾ.ಗಣೇಶ್ ಪೂಜಾರ್ ಇವರನ್ನು ಸನ್ಮಾನಿಸಲಾಯಿತು.