ಮಲೇಬೆನ್ನೂರು, ಏ.4- ರಾಜ್ಯದಲ್ಲಿ ಮೀಸ ಲಾತಿ ಪ್ರಮಾಣ ಶೇ. 50 ಕ್ಕಿಂತ ಹೆಚ್ಚು ಮಾಡಲು ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಸಿ, ನಮ್ಮ ವಾದವನ್ನೂ ಮಂಡಿಸಿದ್ದೇವೆ ಎಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಭಾನುವಾರ ಕಾಗಿನೆಲೆ ಕನಕ ಗುರುಪೀಠದ ಬೆಳ್ಳೂಡಿ ಶಾಖಾ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿ ನಿಲಯ, ಸಮುದಾಯ ಭವನ ಹಾಗೂ ಮುಖ್ಯ ಮಹಾದ್ವಾರ ಉದ್ಘಾಟನೆ ಮತ್ತು ಶಾಖಾಮಠದ 5ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸುಪ್ರೀಂ ಕೋರ್ಟ್‌ನಲ್ಲಿರುವ ನಮ್ಮ ಅರ್ಜಿಯ ವಿಚಾರಣೆ ನಡೆದ ನಂತರ, ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ನೋಡಿಕೊಂಡು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. ಕಾನೂನಾ ತ್ಮಕವಾಗಿ ಮತ್ತು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನ್ಯಾಯ ಸಮ್ಮತವಾದ ಬೇಡಿಕೆಗಳಿಗೆ ನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಹಾಲುಮತ ಸಮಾಜವನ್ನು ಎಸ್‌ಟಿ ಮೀಸಲಾತಿಗೆ ಪರಿಗಣಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಶ್ರೀ ನಿರಂಜನಾ ನಂದಪುರಿ ಶ್ರೀಗಳು ಪ್ರಸ್ತಾಪಿಸಿದಂತೆ ಮೀಸಲಾತಿ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಸಮಿತಿ ರಚಿಸಿದ್ದೇವೆ ಎಂದು ಹೇಳಿದರು.
ಹೊಸದುರ್ಗ ಶಾಖಾಮಠದಲ್ಲಿ ನಿರ್ಮಿಸುತ್ತಿರುವ ಭಾರತದಲ್ಲೇ ಅತಿ ದೊಡ್ಡದಾದ ಕನಕದಾಸರ ಏಕಶಿಲಾ ಮೂರ್ತಿ ಕಾಮಗಾರಿಗೆ ಸರ್ಕಾರದಿಂದ 5 ಕೋಟಿ ರೂ. ಅನುದಾನವನ್ನು ಕೂಡಲೇ ಬಿಡುಗಡೆ ಮಾಡುತ್ತೇನೆ. ಸಂಗೊಳ್ಳಿ ರಾಯಣ್ಣ ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗೆ ಅವಶ್ಯವಿರುವ 30 ಕೋಟಿ ರೂ. ಅನುದಾನವನ್ನು ಪ್ರಾಧಿಕಾರಕ್ಕೆ ಬಿಡುಗಡೆ ಮಾಡುವ ಬಗ್ಗೆ ಗಮನಹರಿಸುತ್ತೇನೆ ಎಂದು ಹೇಳಿದರು.
ಕನಕದಾಸರು ತಮ್ಮ ನಿಷ್ಕಲ್ಮಶ ಭಕ್ತಿ ಮೂಲಕ ದೇವರನ್ನು ಮತ್ತು ದಾಸ ಸಾಹಿತ್ಯದ ಮೂಲಕ ಜನರ ಮನ ಗೆದ್ದವರು. ಅವರ ಸರಳತೆ, ಸಾಮಾಜಿಕ ಕಳಕಳಿ ಸರ್ವಕಾಲಿಕವಾದದ್ದು. ಈ ನಿಟ್ಟಿನಲ್ಲಿ ಶ್ರೀ ನಿರಂಜನಾನಂದಪುರಿ ಶ್ರೀಗಳೂ ಕೂಡ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಪ್ರಯತ್ನದಲ್ಲಿ ಸಫಲತೆ ಕಂಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಸಮಸಮಾಜ ನಿರ್ಮಾಣ ಮಾಡಬೇಕೆಂಬ ಸರ್ಕಾರದ ಆಶಯಕ್ಕೆ ಎಲ್ಲಾ ಮಠಗಳು ಕೈ ಜೋಡಿಸಿರುವುದು ಸಂತಸ ತಂದಿದೆ ಎಂದು ಯಡಿಯೂರಪ್ಪ ಹೇಳಿದರು.
ಆರಂಭದಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ, 2020 ಪ್ರಪಂಚಕ್ಕೆ ಕರಾಳ ವರ್ಷ. ಈ ಕಾರ್ಯಕ್ರಮವನ್ನು 2020 ರಲ್ಲೇ ಮಾಡಲು ತೀರ್ಮಾನಿಸಿದ್ದೆವು. ಅಷ್ಟರಲ್ಲೇ ಕೊರೊನಾದಿಂದಾಗಿ ಲಾಕ್‌ಡೌನ್ ಆದ ಕಾರಣ ಕಾರ್ಯಕ್ರಮ ರದ್ದಾಯಿತು. ಈ ವರ್ಷವಾದರೂ ಅದ್ಧೂರಿ ಕಾರ್ಯಕ್ರಮ ಮಾಡೋಣ ಎಂದುಕೊಂಡು ತಯಾರಿ ಮಾಡಿಕೊಂಡೆವು. ಅಷ್ಟೊತ್ತಿಗೆ ರೂಪಾಂತರ ವೈರಸ್ ಬಂದಿದೆ ಎಂಬ ಕಾರಣದಿಂದಾಗಿ ಕಾರ್ಯಕ್ರಮವನ್ನು ಹೆಚ್ಚು ಜನರನ್ನು ಸೇರಿಸದಂತೆ ಸರಳವಾಗಿ ಹಮ್ಮಿಕೊಂಡಿದ್ದೇವೆ.
4 ವರ್ಷಗಳ ಹಿಂದೆ ಈ ಭೂಮಿ ಬರಡಾಗಿತ್ತು, ಈ 11 ಎಕರೆ ಜಮೀನು ನಮ್ಮ ಕೈಗೆ ಸಿಕ್ಕ ನಂತರ ಸಮೃದ್ಧಿಗೊಳಿಸಿದ್ದೇವೆ. 35 ರಿಂದ 40 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇಲ್ಲಿ ಮಾಡಬೇಕಾದ ಎಲ್ಲಾ ಕೆಲಸಗಳು ಮುಗಿದಿರುವುದರಿಂದ ನಮ್ಮ ಮುಂದಿನ ಪ್ರಯಾಣ ಶ್ರೀಕ್ಷೇತ್ರ ಮೈಲಾರಕ್ಕೆ ಸಾಗಿದೆ.
ಅಲ್ಲಿನ ಶಾಖಾಮಠದ ಆಶ್ರಯದಲ್ಲಿ ಶಿಕ್ಷಣ ಕೇಂದ್ರ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 10 ಕೋಟಿ ರೂ. ಅನುದಾನ ಘೋಷಣೆ ಮಾಡಿ, ಈಗಾಗಲೇ 2.50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಅಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಕಾಂಗ್ರೆಸ್ ಸರ್ಕಾರದಲ್ಲೂ ವಿದ್ಯಾರ್ಥಿನಿಲಯ ಸೇರಿದಂತೆ ವಿವಿಧ ಕಟ್ಟಡಗಳಿಗೆ ಅನುದಾನ ನೀಡಿದ್ದರು ಎಂದು ಸ್ವಾಮೀಜಿ ಸ್ಮರಿಸಿದರು.
ಹೊಸದುರ್ಗ ಶಾಖಾಮಠದಲ್ಲಿ ನಿರ್ಮಿಸುತ್ತಿರುವ ಕನಕದಾಸರ ಏಕಶಿಲಾ ಮೂರ್ತಿ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ. – ಯಡಿಯೂರಪ್ಪ ಭರವಸೆ
ಕುರುಬರನ್ನು ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿ. -ಸಿಎಂಗೆ ಕಾಗಿನೆಲೆ ಶ್ರೀ ಮನವಿ
ಹರಿಹರ ಪಂಚಮಸಾಲಿ ಪೀಠಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ
ಮಲೇಬೆನ್ನೂರು, ಏ.4- ಬೆಳ್ಳೂಡಿ ಶಾಖಾಮಠದ ಕಾರ್ಯಕ್ರಮ ಮುಗಿದ ನಂತರ ಅಲ್ಲಿಯೇ ಮಧ್ಯಾಹ್ನದ ಊಟ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಪಂಚಮಸಾಲಿ ಪೀಠಕ್ಕೆ ತೆರಳಿ ಕೆಲಹೊತ್ತು ಶ್ರೀ ವಚನಾನಂದ ಸ್ವಾಮೀಜಿ ಅವರ ಜೊತೆ ಮಾತುಕತೆ ನಡೆಸಿದರು. ಸಂಸದ ಜಿ.ಎಂ ಸಿದ್ದೇಶ್ವರ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರ್. ಶಂಕರ್, ಶಾಸಕರುಗಳಾದ ಎಂ.ಪಿ. ರೇಣುಕಾಚಾರ್ಯ, ಅರುಣ್‌ಕುಮಾರ್ ಪೂಜಾರ್ ಮತ್ತಿತರರು ಈ ವೇಳೆ ಹಾಜರಿದ್ದರು.
ಪರಸ್ಪರ ಮಾತನಾಡದ ಸಿಎಂ-ಈಶ್ವರಪ್ಪ
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಇಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಜೊತೆಗೆ ಹೆಜ್ಜೆ ಹಾಕಿದರೂ ಪರಸ್ಪರ ಮಾತನಾಡದಿರಲಿ, ಒಬ್ಬರನ್ನೊಬ್ಬರು ಮುಖವನ್ನೂ ನೋಡಿಕೊಳ್ಳಲಿಲ್ಲ. ಮೊದಲೇ ಮಠಕ್ಕೆ ಆಗಮಿಸಿದ್ದ ಈಶ್ವರಪ್ಪ ಅವರು ಸಿಎಂ ಬಂದಾಗ ಅವರನ್ನು ಸ್ವಾಗತಿಸಲೂ ಸಹ ಹೋಗಲಿಲ್ಲ.
ಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡದ ಸಿಎಂ
ಸಚಿವ ಕೆ.ಎಸ್. ಈಶ್ವರಪ್ಪ ಅವರ ಪತ್ರದ ವಿಚಾರ ಹಾಗೂ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೆ ರಾಜ್ಯದಲ್ಲಿ ನಡೆಯುವ ಬೆಳಗಾವಿ
ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತ್ತು ಮಸ್ಕಿ, ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ
ಅಭ್ಯರ್ಥಿಗಳು ದಾಖಲೆ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಯಡಿಯೂರಪ್ಪ ಉತ್ತರಿಸಿದರು.
30 ಬೀರದೇವರು : 3 ದಿನಗಳ ಕಾರ್ಯಕ್ರಮಕ್ಕಾಗಿ ಮಠಕ್ಕೆ ಆಗಮಿಸಿದ್ದ ವಿವಿಧ ತಾಲ್ಲೂಕುಗಳ 30 ಬೀರದೇವರ ದರ್ಶನಕ್ಕಾಗಿ ಜನ ಮುಗಿಬಿದ್ದಿದ್ದರು. ಅಲ್ಲದೆ ಮಹಾಸಂಕಲ್ಪದ ಪೂಜೆ, ಹೋಮ ಎಲ್ಲರನ್ನೂ ಆಕರ್ಷಿಸಿತು.
ಪ್ರಾಣ ಪ್ರತಿಷ್ಠಾಪನೆ : ಸೋಮವಾರ ಬೆಳಿಗ್ಗೆ 11.30 ಕ್ಕೆ ನೂತನ ಹೋರಬೀರದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಕಾರ್ಯಕ್ರಮವನ್ನು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಉದ್ದೇಶದಿಂದ ಈಗಾಗಲೇ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅಲ್ಲಿಂದ ಇಲ್ಲಿಯತನಕ ನಾವು ಮೀಸಲಾತಿ ವಿಚಾರವಾಗಿ ಯಾವ ಹೇಳಿಕೆ ಕೊಟ್ಟಿಲ್ಲ. ಏಕೆಂದರೆೆ ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ ಎಂಬ ಮಾಹಿತಿಯನ್ನು ಗೃಹ ಸಚಿವರು ನಮಗೆ ನೀಡಿದ್ದರಿಂದ ನಾವು ಆಶಾಭಾವನೆಯಲ್ಲಿದ್ದೇವೆ ಎಂದ ಶ್ರೀಗಳು, ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಬಗ್ಗೆ ಸಮಾಜಕ್ಕೆ ತಿಮುಖ್ಯಮಂತ್ರಿಗಳು ತಿಳಿಸಬೇಕು. ಮತ್ತು ಹೊಸದುರ್ಗ ಶಾಖಾ ಮಠದಲ್ಲಿ ನಿರ್ಮಿಸುತ್ತಿರುವ ಕನಕದಾಸರ ಏಕಶಿಲಾ ಪ್ರತಿಮೆಗೆ ಅನುದಾನ ಹಾಗೂ ನೆನೆಗುದಿಗೆ ಬಿದ್ದಿರುವ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಹೇಳಿದರು.
ಉಪಚುನಾವಣೆ ನಂತರ ಕುರುಬರ ಎಸ್‌ಟಿ ಹೋರಾಟ ಸಮಿತಿಯವರ ಸಭೆ ಕರೆದು ಚರ್ಚಿಸಿ ಎಂದು ಮನವಿ ಮಾಡಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ. 7.5 ಕ್ಕೆ ಹೆಚ್ಚಿಸಬೇಕು ಮತ್ತು ಕುರುಬರನ್ನು ಎಸ್ಟಿಗೆ ಹಾಗೂ ಪಂಚಮಸಾಲಿ ಸಮಾಜವನ್ನು 2ಎ ಗೆ ಸೇರಿಸಬೇಕು ಎಂಬ ಬೇಡಿಕೆ ಸೇರಿದಂತೆ ಇನ್ನೂ ಅನೇಕರು ಮೀಸಲಾತಿ ಕೇಳುತ್ತಿದ್ದಾರೆ. ಇವೆಲ್ಲವನ್ನು ಪರಿಗಣಿಸಿ ನಾವು ಸುಪ್ರೀಂ ಕೋರ್ಟ್ ಅನುಮತಿ ಕೇಳಿದ್ದೇವೆ. ಕೋರ್ಟ್ ಕೂಡ ಒಳ್ಳೆಯ ತೀರ್ಮಾನ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಕುರುಬ ಸಮಾಜದ ಇತಿಹಾಸದಲ್ಲಿ ಎಸ್‌ಟಿ ಮೀಸಲಾತಿ ಪಾದಯಾತ್ರೆ ದಾಖಲೆ ನಿರ್ಮಿಸುವುದರ ಜೊತೆಗೆ ಎಲ್ಲಾ ಕುರುಬರನ್ನು ಒಂದಾಗಿಸಿದೆ. ಮೂರು ಪಕ್ಷಗಳ ಮುಖಂಡರು ಒಗ್ಗಟ್ಟಾಗಿದ್ದೇವೆ. ಆದ್ದರಿಂದ ಅದೊಂದು ಮಾದರಿ ಪಾದಯಾತ್ರೆ ಎಂದು ಬಣ್ಣಿಸಿದರು. ಕುರುಬರಿಗೆ ಅಷ್ಟೇ ಮೀಸಲಾತಿ ಕೇಳುತ್ತಿಲ್ಲ. ಕೂಲಿ, ಸವಿತಾ, ಉಪ್ಪಾರ, ಮಡಿವಾಳ ಸಮಾಜಗಳಿಗೂ ಮೀಸಲಾತಿ ಕೊಡಬೇಕೆಂದು ಕೇಳಿದ್ದೇವೆ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಈ ಮಠದಲ್ಲಿ ಕೇವಲ 4 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯಿಂದ ಇತಿಹಾಸ ನಿರ್ಮಾಣವಾಗಿದೆ. ಇದರ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಶರಣರ, ದಾಸರ ಕಾಲಗಳು ಈ ನಾಡಿಗೆ ಮಹಾಬೆಳಕು ನೀಡಿದ್ದು, ಆ ಬೆಳಕಿನಲ್ಲಿ ಇಂದು ನಾವೆಲ್ಲರೂ ಒಳ್ಳೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಮಠಗಳ ಅನನ್ಯ ಸೇವೆ ಗುರುತಿಸಿದ ಯಡಿಯೂರಪ್ಪ ಅವರು ಮಠಗಳಿಗೆ ಅನುದಾನ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸಚಿವ ಆರ್. ಶಂಕರ್ ಮಾತನಾಡಿದರು. ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ತಿಂಥಿಣಿ ಶಾಖಾಮಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್. ರಾಮಪ್ಪ, ಎಂ.ಪಿ ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಪ್ರೊ. ಎ. ಲಿಂಗಪ್ಪ, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ, ರಾಣೇಬೆನ್ನೂರು ಶಾಸಕ ಅರುಣ್‌ಕುಮಾರ್ ಪೂಜಾರ್, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿ.ಪಂ. ಸದಸ್ಯರಾದ ಕೆ.ಇ. ಕಾಂತೇಶ್, ಹದಡಿ ನಿಂಗಪ್ಪ, ಎಂ.ಆರ್. ಮಹೇಶ್, ಶಿವಮೊಗ್ಗದ ಜೆಡಿಎಸ್ ಮುಖಂಡ ಶ್ರೀಕಾಂತ್, ಚಲನಚಿತ್ರ ನಿರ್ದೇಶಕ ಆರ್. ಚಂದ್ರು, ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಕೆ. ರೇವಣಸಿದ್ದಪ್ಪ, ಕುಣೆಬೆಳಕೆರೆ ದೇವೇಂದ್ರಪ್ಪ, ನಂದಿಗಾವಿ ಶ್ರೀನಿವಾಸ್, ಕೊಳೇನಹಳ್ಳಿ ಸತೀಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಮತ್ತಿತರರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಆಯುಷ್ ಹಾಗೂ ಶಂಕರ್ ಟಿವಿಯ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ರಿತಿಷ್ ಪ್ರಾರ್ಥಿಸಿದರು. ಮಂಜುನಾಥ್ ಮಾಗುಂದಿ ಸ್ವಾಗತಿಸಿದರು, ಉಪನ್ಯಾಸಕ ಎಳೆಹೊಳೆ ಬೀರೇಶ್, ಶಿಕ್ಷಕ ಪದ್ದಪ್ಪ ನಿರೂಪಿಸಿದರೆ, ಉಪನ್ಯಾಸಕ ರಾಜನಹಳ್ಳಿ ಬೀರೇಶ್ ವಂದಿಸಿದರು.
ಜಿಗಳಿ ಪ್ರಕಾಶ್,
[email protected]