ರವಿ ಹಂಜ್ ಅವರ ಪುಸ್ತಕಗಳ ಲೋಕಾರ್ಪಣೆಯಲ್ಲಿ ಮುರುಘಾ ಶರಣರು
ದಾವಣಗೆರೆ, ಏ. 4 – ವ್ಯಕ್ತಿ, ವ್ಯವಸ್ಥೆ ಹಾಗು ಸಮಾಜವನ್ನು ಸುಧಾರಿಸಲು ಮಠ ಇರಬೇಕೇ ಹೊರತು, ಮತೀಯ ವ್ಯವಸ್ಥೆ ಬೆಳೆಸಲು ಅಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೈಸೂರಿನ ಸಂವಹನ ಪ್ರಕಾಶಕರ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ರವಿ ಹಂಜ್ ಅವರ §ರ ಠ ಈ ಕ’ ಹಾಗೂ §ಅಗಣಿತ ಅಲೆಮಾರಿ’ ಪುಸ್ತಕಗಳ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಸುಧಾರಣೆಗೆ ಹಾಗೂ ಮಾನವೀಯ ಪ್ರಜ್ಞೆಗಾಗಿ ಮಠಗಳಿರಬೇಕು. ಮಠವೇ ಒಂದು ವ್ಯವಸ್ಥೆಯಂತಾಗದೇ, ಅದು ವ್ಯವಸ್ಥೆಯನ್ನು ಮೀರಿ ಬೆಳೆಯಬೇಕು. ಕುವೆಂಪು ಅವರು ಹೇಳಿದ ವಿಶ್ವ ಮಾನವ ಪ್ರಜ್ಞೆ ಬೆಳೆಸುವುದೇ ಮಠಗಳ ಉದ್ದೇಶವಾಗಬೇಕು ಎಂದು ಹೇಳಿದರು.
ಭಿಕ್ಷಾವೃತ್ತಿಯ ಜೊತೆ ಉಳ್ಳವರು ಗುರುತಿಸಿಕೊಳ್ಳಲು ಬಯಸುವುದಿಲ್ಲ. ಆದರೆ, ರಾಜನಾಗಬಹುದಾಗಿದ್ದ ಗೌತಮ ಬುದ್ಧ ಭಿಕ್ಷುಕನ ಸ್ಥಿತಿಗೆ ಬರುತ್ತಾನೆ. ಅಂತಹ ಸ್ಥಿತಿಗೆ ಬಂದ ನಂತರವೂ ದಾರ್ಶನಿಕನಾಗುವುದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಶ್ರೀಗಳು ಹೇಳಿದರು.
ಅಲ್ಲಮಪ್ರಭು ದೇವರು ಅಲೆಮಾರಿತನವನ್ನು ಸವಾಲಾಗಿ ಸ್ವೀಕರಿಸಿದರು. ಅಲೆಮಾರಿತನದಲ್ಲೇ ಅಧ್ಯಾತ್ಮ ರಹಸ್ಯ ಭೇದಿಸಿದರು ಎಂದ ಶ್ರೀಗಳು, ಅಲೆಮಾರಿತನದ ಸುತ್ತಾಟದಿಂದ ಅನುಭವ ಸಿಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತ ನಾಡಿದ ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಬಹಳ ಇದೆ. ಹೊರದೇಶಕ್ಕೆ ಹೋದವರು ಅಲ್ಲಿಯ ತಮ್ಮ ಅನುಭವಗಳನ್ನೇ ಬರೆಯುತ್ತಾರೆ. ಆದರೆ ರವಿ ಅವರು ಹೊರ ದೇಶಗಳ ಸುತ್ತಿದ ನಂತರ ತಮ್ಮ ಹುಟ್ಟೂರಿನ ಅನುಭವಗಳ ಪುಸ್ತಕ ಬರೆದಿರುವುದು ವಿಶೇಷವಾಗಿದೆ ಎಂದರು.
ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಚಿತ್ರನಿರ್ದೇಶಕ ಬಿ.ಎಸ್. ಲಿಂಗದೇವರು, ಕಥೆ ಕೇಳುವುದು, ಸಾಹಿತ್ಯ ಹಾಗೂ ಸಿನಿಮಾಗಳಿಂದ ಮನುಷ್ಯನಿಗೆ ಸಹಜ ಗುಣಗಳಿಂದ ಬಿಡುಗಡೆಯಾದ ಭಾವ ಸಿಗುತ್ತದೆ. ಮನುಷ್ಯನ ಸಹಜ ಗುಣದಿಂದ ಮುಕ್ತಗೊಳಿಸುವುದೇ ಸಾಹಿತ್ಯದ ಶಕ್ತಿಯಾಗಿದೆ ಎಂದರು.
ಮೈಸೂರಿನ ಹಿರಿಯ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ಮಾತನಾಡಿ, ಆತ್ಮಚರಿತ್ರೆಗಳು ತಮ್ಮ ಬಗ್ಗೆ ಹಾಗೂ ತಮ್ಮ ವಂಶದ ಬಗ್ಗೆ ಹೊಗಳಿಕೊಳ್ಳುವ ಆತ್ಮರತಿಗಳಾಗಬಾರದು. ಸಾಕ್ಷಿ ಪ್ರಜ್ಞೆ ಹಾಗೂ ಒಳನೋಟ ಹೊಂದಿ ಜಾತಿಯಂತಹ ಮಿತಿಗಳನ್ನು ಮೀರಬೇಕು ಎಂದು ತಿಳಿಸಿದರು.
ಜೆಎಸ್ಎಸ್ ವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ರವಿ ಹಂಜ್ ಅವರ ಕೃತಿಗಳಲ್ಲಿ ಬದುಕಿನ ಅಲೆಮಾರಿತನದ ಚಿತ್ರಣ ಇದೆ. ಬದಲಾವಣೆ, ಪರಿವರ್ತನೆ ಅರಿವು ಹಾಗೂ ಜ್ಞಾನದ ಕಡೆ ನಿರಂತರ ಪ್ರಯಾಣದ ಚಿತ್ರಣವಿದೆ ಎಂದರು.
ಸಮಾರಂಭದಲ್ಲಿ ಕೃತಿಕಾರ ರವಿ ಹಂಜ್, ಸಾಹಿತಿ ಡಾ. ಆನಂದ್ ಋಗ್ವೇದಿ, ಬಿಎಸ್ಸಿ ಸಮೂಹದ ಶಿವಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಮಂಜುನಾಥ ಕುರ್ಕಿ, ಮೈಸೂರಿನ ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ, ಸಾಹಿತಿ ಡಿ. ನಾಗೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ದಾಕ್ಷಾಯಿಣಿ ಹುಡೇದ ಪ್ರಾರ್ಥಿಸಿದರೆ, ಆನಂದ ಋಗ್ವೇದಿ ನಿರೂಪಿಸಿದರು.