`ಗೀಗೀ ಪದ ಜಾನಪದ ಮಾಧ್ಯಮದ ಮೂಲಕ ವಿಜ್ಞಾನ’ ಸಂವಹನ ಕಾರ್ಯಾಗಾರದಲ್ಲಿ ಎಂ.ಜಿ. ಈಶ್ವರಪ್ಪ ಅಭಿಮತ
ದಾವಣಗೆರೆ, ಏ.4- ವೈಜ್ಞಾನಿಕ ಮನೋಭಾವ ಎಲ್ಲಿ ಇರುತ್ತದೆಯೋ ಅಲ್ಲಿ ಸರಿ ಎನಿಸಿದರಷ್ಟೇ ಒಪ್ಪಿಕೊಳ್ಳುತ್ತೇವೆ. ಆದರೆ ಜನಪದ ಆಚರಣೆಗಳಿಗೂ ವೈಜ್ಞಾನಿಕ ಹಿನ್ನೆಲೆ ಇದೆ ಎಂದು ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ, ವಿಕಸನ ಕೇಂದ್ರ ಬೆಳಗಾವಿ, ವಿಜ್ಞಾನ ಕೇಂದ್ರ ದಾವಣಗೆರೆ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಸಂಯುಕ್ತವಾಗಿ ಏರ್ಪಡಿಸಿದ್ದ `ಗೀ ಗೀ ಪದ ಜಾನಪದ ಮಾಧ್ಯಮದ ಮೂಲಕ ವಿಜ್ಞಾನ’ ಸಂವಹನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಂಬಿಕೆ, ಮೂಢನಂಬಿಕೆಗಳಲ್ಲಿ ಜನಪದ ಮಾಧ್ಯಮದ ಮೂಲಕ ವಿಜ್ಞಾನ ಸಂವಹನ ಸಾಧ್ಯವೇ ಎಂಬ ಜಿಜ್ಞಾಸೆ ಕಾಡುತ್ತದೆ ಎಂದರು.
ಸಾಹಿತ್ಯವನ್ನು ಜನಪದವಾಗಿ ಹೇಳುವುದು ಸುಲಭ. ವಿಜ್ಞಾನವನ್ನು ಜನಪದ ಮಾಧ್ಯಮದ ಮೂಲಕ ಸಂವಹನ ನಡೆಸಿದರೆ, ಅದರ ಗಂಭೀರತೆ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ವಿಜ್ಞಾನ ಬುದ್ಧಿಗೆ ಸಂಬಂಧಿಸಿದರೆ, ಸಾಹಿತ್ಯ ಹೃದಯಕ್ಕೆ ಸಂಬಂಧಿಸಿದೆ ಎಂದು ಹೇಳಿದರು.
ವಿಜ್ಞಾನ ಪರಿವೀಕ್ಷಕ ಡಾ. ಲಿಂಗರಾಜ ರಾಮಾಪುರ ಮಾತನಾಡಿ, ಹಳ್ಳಿಗರ, ಶ್ರಮಿಕರ, ಕೃಷಿಕರ, ಮಹಿಳೆಯರ ಹಾಗು ಶೋಷಿತರ ಮಧ್ಯೆ ವಿಜ್ಞಾನವನ್ನು ಕೊಂಡೊಯ್ಯುವ ಸರಳ ಮಾಧ್ಯಮ ಜನಪರ ಮಾಧ್ಯಮ ಎಂದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಂ.ಸಿ. ಕೌಶಿಕ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅದರ ತಳಹದಿಯನ್ನು ಮರೆಯುತ್ತಿದ್ದೇವೆ ಎಂದರು.
ವಿಜ್ಞಾನ ಜನರ ಹಸಿವು, ಬಡತನ, ಆರೋಗ್ಯ ನೀಗಿಸಲು ಬೇಕಾದ ಸಂಶೋಧನೆ ನಡೆಸಿದರೆ, ತಂತ್ರಜ್ಞಾನ ಅದರ ಪೂರೈಕೆಗೆ ನೆರವಾಗುತ್ತದೆ. ಜನಪದ ಮಾಧ್ಯಮದ ಮೂಲಕ ವಿಜ್ಞಾನವನ್ನು ಹೆಚ್ಚು ಪ್ರಚುರಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಶಿವಮೊಗ್ಗದ ಡಾ. ಬಸವರಾಜ್ ಮಾತನಾಡಿ, ಜನಪರ ಉಡುಗೆಗಳು, ಜೀವನ ಕಲೆ, ಆಹಾರ ಪದ್ಧತಿ ಎಲ್ಲವೂ ಸಮ್ಮಿಲನವಾಗಿ ಅಧ್ಯಯನ ಮಾಡಿ ನೋಡಿದರೆ, ಅದರಲ್ಲೂ ವಿಜ್ಞಾನವಿರುವುದು ತಿಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ, ಬುದ್ಧಿ ಮತ್ತು ಹೃದಯಕ್ಕೆ ಹತ್ತಿರವಾದ ರೀತಿಯಲ್ಲಿ ಮಗುವಿಗೆ ಶಿಕ್ಷಣ ಕೊಡಬೇಕೆಂದು ಸಲಹೆ ನೀಡಿದರು.
ವಿಕಸನ ಕೇಂದ್ರದ ಸಂಜಯ್ ಮುಗ್ದುಮ್, ಎಂ. ದಾದಾಪೀರ್, ಹೆಚ್.ಎಂ. ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಗದಗ ಜಿಲ್ಲೆ ಜನಪದ ಕಲಾವಿದ ವೀರಣ್ಣ ಅಂಗಡಿ ಮತ್ತು ಸಂಗಡಿಗರು ಆಶಯಗೀತೆ ಹಾಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕಿ ಎ.ಹೆಚ್. ಸುಗ್ಲಾದೇವಿ ನಿರೂಪಿಸಿದರು. ಶಿಕ್ಷಕ ದೊಡ್ಡಮನಿ ಕೆಂಚಪ್ಪ ವಂದಿಸಿದರು.