ದಾವಣಗೆರೆ, ಏ.2- ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಶ್ರೀ ಕನ್ನಿಕಾ ಪರಮೇಶ್ವರಿ ಕೋ-ಆಪ್. ಬ್ಯಾಂಕ್ ಲಿ. 2021 ಮಾರ್ಚ್ ಅಂತ್ಯಕ್ಕೆ 5.4 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.
ವ್ಯವಹಾರ ಲಾಭದಲ್ಲಿ 1.05 ಕೋಟಿ ರೂ. ಆದಾಯ ತೆರಿಗೆಯನ್ನು ಪಾವತಿಸಿದ ನಂತರ ಆದಾಯ ತೆರಿಗೆ ನಿಯಮಾನುಸಾರ 34 ಲಕ್ಷ ರೂ., ಭಾರತೀಯ ರಿಜರ್ವ್ ಬ್ಯಾಂಕ್ ಸುತ್ತೋಲೆ ಅನ್ವಯ 9.10 ಕೋಟಿ ರೂ.ಗಳನ್ನು, ಸಹಕಾರ ಸಂಘಗಳ ಕಾಯ್ದೆ ಅಡಿಯಲ್ಲಿ 49.68 ಲಕ್ಷ ರೂ.ಗಳನ್ನು ಪ್ರವದಾನ ಮಾಡಿದ ನಂತರ ವಾರ್ಷಿಕದ ಅಂತ್ಯಕ್ಕೆ 3.05 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸುವ ಮೂಲಕ ನಿವ್ವಳ ಲಾಭದ ಪ್ರಮಾಣ ಶೇ. 37.38 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರ್ಥಿಕ ಸಾಲಿನ ಅಂತ್ಯಕ್ಕೆ 1.30 ಕೋಟಿ ರೂ. ಷೇರು ಬಂಡವಾಳ, 15.22 ಕೋಟಿ ರೂ.ಗಳ ಸ್ವಂತ ನಿಧಿ, 106.91 ಕೋಟಿ ರೂ. ಠೇವಣಿಯನ್ನು ಸಂಗ್ರಹಿಸಲಾಗಿದೆ. 77.89 ಕೋಟಿ ರೂ. ಸಾಲ ಮುಂಗಡಗಳನ್ನು ನೀಡಲಾಗಿದೆ. ಗೌರವ ಸದಸ್ಯರುಗಳ ಹಾಗೂ ಗ್ರಾಹಕರುಗಳ ಸಹಕಾರದಿಂದ ಒಟ್ಟು ಎನ್.ಪಿ.ಎ. ಪ್ರಮಾಣ (ಗ್ರಾಸ್) ವನ್ನು ಶೇ. 3.73 ನಿವ್ವಳ ಎನ್.ಪಿ.ಎ. ಪ್ರಮಾಣ ಶೇ. 0.49 ಕ್ಕೆ ಕಡಿತವಾಗಿರುತ್ತದೆ.
ಈ ಸಾಲಿನಲ್ಲಿ ಎಲ್ಲಾ ಸಿಬ್ಬಂದಿ ವರ್ಗದವರಿಗೆ 3 ಲಕ್ಷ ರೂ.ಗಳ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಮೂಲಕ ಆರೋಗ್ಯ ವಿಮೆ ಕಲ್ಪಿಸಲಾಗಿದೆ. ಪಿಗ್ಮಿ ಠೇವಣಿ ಸಂಗ್ರಹಣಾಕಾರರಿಗೆ ಮೊಬೈಲ್ ಮೂಲಕ ಪಿಗ್ಮಿ ಠೇವಣಿ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ.
ಬ್ಯಾಂಕಿನ ಜ್ಞಾನ ದೇಗುಲದ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಘಟಕವನ್ನು ಅಳವಡಿಸಿಕೊಂಡು ಸೌರ ವಿದ್ಯುತ್ ಉತ್ಪಾದನೆ ಮೂಲಕ ಬ್ಯಾಂಕಿನ ವಿದ್ಯುಚ್ಛಕ್ತಿ ವೆಚ್ಚವನ್ನು ಕಡಿತ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಶೇ.8 ರ ಬಡ್ಡಿದರದಲ್ಲಿ ನೀಡುವ ಆಧಾರ ರಹಿತ ಸಾಲದ ಯೋಜನೆಯನ್ನು ಮುಂದುವರೆಸಲಾಗಿದೆ. ಬ್ಯಾಂಕಿನ ಷೇರುದಾರರ ಕ್ಷೇಮಾಭಿವೃದ್ಧಿ ನಿಧಿಯಿಂದ ಸದಸ್ಯರಿಗೆ, ಗ್ರಾಹಕರಿಗೆ ಉಚಿತ ಕ್ಲಿನಿಕಲ್ ಲ್ಯಾಬ್ ಸೇವೆಯನ್ನು ನೀಡುತ್ತಿದ್ದು, ಶೀಘ್ರದಲ್ಲಿಯೇ ಥೈರೋಕೇರ್, ಮುಂಬೈ ಇವರೊಂದಿಗೆ ಒಡಂಬಡಿಕೆ ಮಾಡಿಕೊಂಡು ಹೆಚ್ಚಿನ ಕ್ಲಿನಿಕಲ್ ಸೇವೆಯನ್ನು ಕಲ್ಪಿಸುವ ಯೋಜನೆ ಇದೆ. 2021-22ನೇ ಸಾಲಿನಲ್ಲಿ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಯ ಮೂಲಕ ನೆಟ್ ಬ್ಯಾಂಕಿಂಗ್ ಸೇವೆಯನ್ನು ಶೀಘ್ರದಲ್ಲಿಯೇ ಸಮರ್ಪಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಬ್ಯಾಂಕಿನ ಉಪಾಧ್ಯಕ್ಷರಾದ ಆರ್.ಎನ್. ಸುಜಾತ, ನಿರ್ದೇಶಕರುಗಳಾದ ಆರ್.ಎಲ್. ಪ್ರಭಾಕರ್, ಕಾಸಲ್ ಎಸ್. ಸತೀಶ್, ಎನ್. ಕಾಶೀನಾಥ್, ಕೆ.ಎನ್. ಅನಂತರಾಮ ಶೆಟ್ಟಿ, ಎ.ಎಸ್. ಸತ್ಯನಾರಾಯಣಸ್ವಾಮಿ, ಕೆ.ವಿ. ಮಂಜುನಾಥ, ಜೆ. ರವೀಂದ್ರ ಗುಪ್ತಾ, ಬಿ.ಎಸ್. ಶಿವಾನಂದ್, ವೈ.ಬಿ. ಸತೀಶ್, ರಾಘವೇಂದ್ರ ಶೆಟ್ಟಿ, ಗೀತಾರಾಮ್, ವೃತ್ತಿಪರ ನಿರ್ದೇಶಕರಾದ ಜಿ. ಶ್ರೀಧರ್, ಆರ್. ನಾಗರಾಜ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಪಡಗಲ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಭೀಮಾನಂದ ಶೆಟ್ಟಿ ಅವರುಗಳು ಬ್ಯಾಂಕಿನ ಪ್ರಗತಿ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.