ನೂತನ ರೈಲ್ವೆ ನಿಲ್ದಾಣ ಸುತ್ತು ಹಾಕಿದ ಸಂಸದರು

2 ವರ್ಷದಲ್ಲಿ ಜಿ+2 ದರ್ಜೆಗೆ ರೈಲ್ವೇ ನಿಲ್ದಾಣ

ದಾವಣಗೆರೆಯನ್ನು ಸುಂದರ ನಗರವನ್ನು ಮಾಡುವ ಉದ್ದೇಶದಿಂದ ಸ್ಮಾರ್ಟ್‍ಸಿಟಿ ಯೋಜನೆಯನ್ನು ತಂದೆನು. ರೈಲ್ವೆ ನಿಲ್ದಾಣಕ್ಕಿಂತ ಮುಂಚೆ ಪ್ರಾರಂಭವಾದ ಬಸ್ ನಿಲ್ದಾಣ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ರೈಲ್ವೆ ನಿಲ್ದಾಣದ ಕಾಮಗಾರಿ ತ್ವರಿತಗತಿಯಲ್ಲಿ ಮಾಡಲಾಗಿದೆ. ಜಿ+1 ಮಾದರಿಯಲ್ಲಿರುವ ರೈಲ್ವೇ ನಿಲ್ದಾಣವನ್ನು 2 ವರ್ಷದಲ್ಲಿ ಜಿ+2 ದರ್ಜೆಯನ್ನಾಗಿ ನಿರ್ಮಾಣ ಮಾಡಲಾಗುವುದು.

– ಸಂಸದ ಜಿ.ಎಂ. ಸಿದ್ದೇಶ್ವರ.

ದಾವಣಗೆರೆ, ಏ.2- ಆಧುನೀಕರಣದೊಂದಿಗೆ ಸಿದ್ಧಗೊಂಡಿರುವ ನಗರದಲ್ಲಿನ ನೂತನ ರೈಲ್ವೆ ನಿಲ್ದಾಣವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಸುತ್ತು ಹಾಕಿದರು.

ಉದ್ಘಾಟನೆಯ ಮುನ್ನ ದಿನವಾದ ಇಂದು ಸಂಜೆ ಬಿಜೆಪಿಯ ಮುಖಂಡರು, ಕಾರ್ಯಕರ್ತರೊಂದಿಗೆ ರೈಲ್ವೆ ನಿಲ್ದಾಣವನ್ನು ಸುತ್ತು ಹಾಕಿ ಎಸ್ಕಲೇಟರ್, ಪ್ರಯಾಣಿಕರ ಕೊಠಡಿ ಸೇರಿದಂತೆ, ಸೌಲಭ್ಯಗಳು ಮತ್ತು ನಿಲ್ದಾಣದ ಸೌಂದರ್ಯವನ್ನು ವೀಕ್ಷಿಸಿದರು.

ನಂತರ ರೈಲ್ವೆ ನಿಲ್ದಾಣದ ಆವರಣದಲ್ಲಿ ನಡೆದ ಸೌಹಾರ್ದ ಕೂಟದಲ್ಲಿ ನಗರಪಾಲಿಕೆ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳಾ ಘಟಕದವರು, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಮತ್ತು ಆಟೋ ಚಾಲಕರು, ಮುಖಂಡರಾದ ದೇವರಮನೆ ಶಿವಕುಮಾರ್, ಬಾಡಾ ಆನಂದ್ ರಾಜ್ ಇತರರು ಜಿ.ಎಂ. ಸಿದ್ದೇಶ್ವರ ಅವರನ್ನು ಸನ್ಮಾನಿಸಿ, ಗೌರವಿಸಿದರಲ್ಲದೇ, ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗುಣಗಾನ ಮಾಡಿದರು.

ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜಿ.ಎಂ. ಸಿದ್ದೇಶ್ವರ ಅವರು ಅತ್ಯಾಧುನಿಕ ರೈಲ್ವೆ ನಿಲ್ದಾಣವನ್ನು ಮಾಡಬೇಕು ಎಂಬ ಕನಸು ಕಂಡಿದ್ದರು. ಅದನ್ನು ಒಂದು ವರ್ಷದ ಅವಧಿಯಲ್ಲಿ ಯಶಸ್ವಿಯಾಗಿ ನಿರ್ಮಿಸಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಎಂತಹ ವಿರೋಧಿಗಳೂ ಸಹ ಸುಂದರ ರೈಲ್ವೇ ನಿಲ್ದಾಣದ ಬಗ್ಗೆ ಹೊರಗೆ ಟೀಕೆ ಮಾಡಿದರೂ ಸಹ ನಿಲ್ದಾಣದ ಅಭಿವೃದ್ಧಿಯನ್ನು ಕಣ್ಣಾರೆ ಕಂಡಾಗ ಮನಸ್ಸಿನಲ್ಲಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾತಿಗಷ್ಟೇ ಸೀಮಿತವಾಗದೇ, ಅಭಿವೃದ್ಧಿ ಕೆಲಸಗಳನ್ನೂ ಮಾಡಿ ತೋರಿಸುತ್ತಿದೆ ಎಂದರು.

ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಸಂಸದರ ಜನಪರ ಕಾರ್ಯವೈಖರಿ ಏನೆಂಬುದನ್ನು ಮಲ್ಲಿಕಾರ್ಜುನಪ್ಪನವರು ತೋರಿಸಿಕೊಟ್ಟರು. ಅಂತೆಯೇ ಅವರ ಮಗನಾದ ಜಿ.ಎಂ. ಸಿದ್ದೇಶ್ವರ ಸಹ ಅದೇ ಮಾರ್ಗದಲ್ಲಿ ಸಾಗಿ ಸಾರ್ಥಕಪಡಿಸಿದ್ದಾರೆ. ಟೀಕೆ-ಟಿಪ್ಪಣಿ ಮಾಡುತ್ತಿದ್ದವರಿಗೆ ಕೆಲಸದ ಮೂಲಕ ಉತ್ತರ ನೀಡಿದ್ದಾರೆಂದರು.

ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸಂಸದರ ಪುತ್ರ ರಾಜೀವ್, ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಣಬೇರು ಜೀವನಮೂರ್ತಿ ಉಪಸ್ಥಿತರಿದ್ದರು. 

error: Content is protected !!