ಡಿ.ಸಿ. ಆಫೀಸ್ ಜಾಗ ವಾಪಸ್‌ ಕೊಡಿ!

ಸಚಿವ ಜಗದೀಶ್ ಶೆಟ್ಟರ್ ಬಳಿ ಜಮೀನು ಕಳೆದುಕೊಂಡವರ ಮೊರೆ

ದಾವಣಗೆರೆ, ಜ. 27 – ಸಮಸ್ಯೆ ಬಗೆಹರಿಸಿಕೊಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಮಾಡಿಕೊಳ್ಳುವುದು ಮಾಮೂಲಿ. ಆದರೆ, ಜಿಲ್ಲಾಧಿಕಾರಿ ಕಚೇರಿಯನ್ನೇ ಬಿಟ್ಟು ಕೊಡಿ ಎಂಬ ಮನವಿಯೊಂದನ್ನು ಜಿಲ್ಲಾಧಿಕಾರಿ ಕಚೇರಿಯಲ್ಲೇ ದಾಖಲಿಸಲಾಗಿದೆ.

ರೈತರಿಂದ ವಶಪಡಿಸಿಕೊಂಡ ಭೂಮಿ ಉದ್ದೇಶಿತ ಯೋಜನೆಗೆ ಜಮೀನು ಬಳಕೆಯಾಗದ ಸಂದರ್ಭದಲ್ಲಿ ಅದನ್ನು ವಾಪಸ್ ಕೊಡಬೇಕೆಂಬ ನಿಯಮವಿದೆ. ಅದೇ ರೀತಿ ಜಿಲ್ಲಾಧಿಕಾರಿ ಕಚೇರಿ ಇರುವ ಜಾಗವನ್ನು ನಮಗೆ ವಾಪಸ್ ಕೊಡಿ ಎಂದು ಜಮೀನು ಕಳೆದುಕೊಂಡ ರೈತರು ಸಚಿವ ಜಗದೀಶ್ ಶೆಟ್ಟರ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಸಂದರ್ಭದಲ್ಲಿ ಈ ರೀತಿಯ ಮನವಿ ಸಲ್ಲಿಕೆಯಾಗಿದೆ.

ಸೈಯದ್ ನಯಾಜ್, ಸಯೀದಾ ಹಫೀಜಾ ಹಾಗೂ ಮರಡಿ ನಾಗಣ್ಣ ಅವರು ಸಭೆಗೆ ಬಂದು, ಕೈಗಾರಿಕೆಗಳಿಗಾಗಿ ಕೆಐಎಡಿಬಿಯಿಂದ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಈಗ ಜಿಲ್ಲಾಧಿಕಾರಿ ಕಚೇರಿ ಕಟ್ಟುವ ಮೂಲಕ ಸರ್ಕಾರವೇ ರೂಪಿಸಿದ ನಿಯಮ ಉಲ್ಲಂಘಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾವುಕರಾಗಿ ಮಾತನಾಡಿದ ಸೈಯಿದಾ, ಮನೆಯಲ್ಲಿ ತಂದೆ – ತಾಯಿಗಳು ಹಾಸಿಗೆ ಹಿಡಿದಿದ್ದಾರೆ. ಕೊರೊನಾ ಸಮಯದಲ್ಲಿ ಊಟಕ್ಕೂ ತೊಂದರೆಯಾಗಿದೆ. ನಮ್ಮ ಸಮಸ್ಯೆ ಬಗೆಹರಿಸಿ ಎಂದು ಮೊರೆಯಿಟ್ಟರು.

ಪದೇ ಪದೇ ಮಾಡಿದ ಒತ್ತಾಯಕ್ಕೆ ಒಂದು ಹಂತದಲ್ಲಿ ಏರಿದ ದನಿಯಲ್ಲಿ ಮಾತನಾಡಿದ ಸಚಿವ ಶೆಟ್ಟರ್, ಹರಿಹರದಲ್ಲಿ 20 ವರ್ಷಗಳಿಂದ ಬಾಕಿ ಇದ್ದ ಕ್ರಯಪತ್ರ ಸಮಸ್ಯೆ ಬಗೆಹರಿಸಿದ್ದೇನೆ. ಈ ಸಮಸ್ಯೆಯನ್ನೂ ಬಗೆಹರಿಸುವ ಬಯಕೆ ಇದೆ. ಪದೇ ಪದೇ ಸಮಸ್ಯೆ ಬಾಕಿ ಇದೆ ಎಂದು ಹೇಳುತ್ತಾ ಹೋದರೆ ಆಗುವುದಿಲ್ಲ. ನನ್ನ ಭರವಸೆ ಮೇಲೆ ನಂಬಿಕೆ ಇಡಿ ಎಂದು ತಿಳಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸೈಯದ್ ನಯಾಜ್, ತಮ್ಮ ತಂದೆ ಹಾಗೂ ಅವರ ಸಹೋದರಗೆ ಸೇರಿದ 12 ಎಕರೆ ಜಮೀನನ್ನು ಕೆಐಎಡಿಬಿ ಜವಳಿ ಪಾರ್ಕ್‌ಗೆ ಎಂದು ವಶಪಡಿಸಿಕೊಂಡಿತ್ತು. ನಂತರ ಉದ್ದೇಶ ಬದಲಿಸಲಾಗಿದೆ ಎಂದು ಹೇಳಿದರು.

error: Content is protected !!