ಕೊರೊನಾ: ಶಿಕ್ಷಣದ ಮೇಲೆ ಪ್ರಹಾರ

ರಾಜ್ಯದಲ್ಲಿ ಶುಕ್ರವಾರ 4,991 ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮ.

ಎಸ್ಸೆಸ್ಸೆಲ್ಸಿ- ಪಿಯುಸಿ ತರಗತಿಗಳು ನಡೆಯಲಿವೆ, ಹಾಜರಾತಿ ಕಡ್ಡಾಯವಲ್ಲ.

ಜಿಮ್ ಹಾಗೂ ಈಜುಕೊಳಗಳನ್ನು ಬಂದ್ ಮಾಡಲು ನಿರ್ಧಾರ.

ರಾಲಿ, ಮುಷ್ಕರ, ಧರಣಿ ಇತ್ಯಾದಿಗಳ ಮೇಲೆ ಸಂಪೂರ್ಣ ನಿಷೇಧ.


6ರಿಂದ 9ನೇ ತರಗತಿವರೆಗೆ ಕಲಿಕೆ ಸಂಪೂರ್ಣ ಬಂದ್, ಬಾರ್-ಸಿನೆಮಾಗಳು ನಿರ್ಬಂಧಗಳೊಂದಿಗೆ ಮುಂದುವರಿಕೆ

ಬೆಂಗಳೂರು, ಮಾ. 2 – ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 9ನೇ ತರಗತಿ ಯವರೆಗೆ ಶಾಲೆ ಹಾಗೂ ವಿದ್ಯಾಗಮವನ್ನು ಸಂಪೂರ್ಣ ನಿಲ್ಲಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಶುಕ್ರವಾರ 4,991 ಸೋಂಕು ಪ್ರಕರಣಗಳು ಕಂಡ ಬಂದ ಪರಿಣಾಮ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸೋಂಕಿನಿಂದ ಆರು ಜನ ಮೃತಪಟ್ಟಿದ್ದಾರೆ.

ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ನಿರ್ಬಂಧಗಳ ಬಗ್ಗೆ ಆದೇಶ ಹೊರಡಿಸಿದ್ದಾರೆ. ಆದರೆ, ಎಸ್‌ಎಸ್‌ ಎಲ್‌ಸಿ ಹಾಗೂ ಪಿಯುಸಿ ತರಗತಿಗಳು ಈಗಿರುವಂತೆ ಮುಂದುವರೆಯಲಿವೆ. ಆದರೆ, ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ.

ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ತರಗತಿಗಳಲ್ಲಿ ಮಂಡಳಿಯ/ವಿಶ್ವವಿದ್ಯಾನಿಲಯಗಳ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣ ತರಗತಿಗಳನ್ನು ಹೊರತು ಪಡಿಸಿ ಇತರೆ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ವಸತಿ ಶಾಲೆಗಳು ಹಾಗೂ ಬೋರ್ಡಿಂಗ್ ಇರುವ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ವಿಶ್ವವಿದ್ಯಾನಿಲಯಗಳ ಪರೀಕ್ಷೆ ಬರೆಯುವವರು ಮತ್ತು ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತು ಪಡಿಸಿ ಇತರೆ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ.

ಜಿಮ್ ಹಾಗೂ ಈಜುಗೊಳಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿನ ಪಾರ್ಟಿ ಹಾಲ್ – ಕ್ಲಬ್‌ ಹೌಸ್‌ಗಳನ್ನೂ ಸಹ ಮುಚ್ಚಲು ಆದೇಶ ಹೊರಡಿಸಲಾಗಿದೆ.

ರಾಜ್ಯದ ಕೆಲ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಡೆ ಚಿತ್ರಮಂದಿರಗಳಲ್ಲಿ §ಹೌಸ್‌ಫುಲ್‌’ಗೆ ಅವಕಾಶ ನೀಡಲಾಗಿದೆ. ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್‌ಗಳು ಹಿಂದಿನಂತೆ ಮುಂದುವರೆ ಯಲಿವೆ.

ಬೆಂಗಳೂರು ನಗರ – ಗ್ರಾಮಾಂತರ, ಮೈಸೂರು, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್ ಹಾಗೂ ಧಾರವಾಡಗಳಲ್ಲಿ ಸಿನೆಮಾ ಮಂದಿರಗಳು ಮತ್ತು ಬಾರ್ – ರೆಸ್ಟೋರೆಂಟ್‌ಗಳಲ್ಲಿ ಶೇ.50 ಸಂಖ್ಯೆಗೆ ಮಿತಿಗೊಳಿಸಲಾಗಿದೆ. ಆದರೆ, ಸಿನೆಮಾ – ಬಾರ್‌ ಇತ್ಯಾದಿಗಳು ಕೊವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಉಲ್ಲಂಘಿಸಿದರೆ, ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೂ ಮುಚ್ಚಲಾಗುವುದು ಎಂದು ಎಚ್ಚರಿಸಲಾಗಿದೆ.

ಶಾಪಿಂಗ್ ಮಾಲ್, ಮುಚ್ಚಿದ ಪ್ರದೇಶಗಳಲ್ಲಿರುವ ಮಾರ್ಕೆಟ್‌ಗಳು ಹಾಗೂ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳು ಮಾಸ್ಕ್, ದೈಹಿಕ ಅಂತರ, ಸ್ಯಾನಿಟೈಸರ್ ರೀತಿಯ ನಿಯಮಗಳನ್ನು ಪಾಲಿಸದಿದ್ದರೆ ಬಂದ್ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗದಿ ಪಡಿಸಿರುವ ಆಸನದ ವ್ಯವಸ್ಥೆಯನ್ನು ಮೀರುವಂತಿಲ್ಲ ಎಂದು ತಿಳಿಸಲಾಗಿದೆ.

ರಾಲಿ, ಮುಷ್ಕರ, ಧರಣಿ ಇತ್ಯಾದಿಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಕಚೇರಿಗಳು ಹಾಗೂ ಇತರೆ ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಸಾಧ್ಯವಾದಷ್ಟು ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆ ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಈ ನಿರ್ಬಂಧಗಳು ಏಪ್ರಿಲ್ 20ರವರೆಗೆ ಮುಂದುವರೆಯಲಿವೆ. ಜಿಲ್ಲಾಡಳಿತ, ಪೊಲೀಸರು ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ಕ್ರಮಗಳನ್ನು ಜಾರಿಗೆ ತರಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

error: Content is protected !!