ಬಡವರು ಊಟ ಮಾಡುವುದು ಬಿಜೆಪಿಗೆ ಇಷ್ಟವಿಲ್ಲ : ಸಿದ್ದರಾಮಯ್ಯ

ದಾವಣಗೆರೆ, ಏ. 2 – ಯಡಿಯೂರಪ್ಪ ಸರ್ಕಾರ ಅನ್ನ ಭಾಗ್ಯದ ಅಕ್ಕಿಯನ್ನು ಏಳು ಕೆಜಿಯಿಂದ 5 ಕೆಜಿಗೆ ಇಳಿಸಿರು ವುದನ್ನು ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಬಡವರು ಊಟ ಮಾಡುವುದು ಬಿಜೆಪಿ ಸರ್ಕಾರಕ್ಕೆ ಇಷ್ಟ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದ ತ್ರಿಶೂಲ್ ಕಲಾ ಭವನದಲ್ಲಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ವಾಣಿಜ್ಯ ಸಂಕೀರ್ಣ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಯಡಿಯೂರಪ್ಪ ಸರ್ಕಾರ ಅನ್ನ ಭಾಗ್ಯದ ಅಕ್ಕಿಯನ್ನು 7 ಕೆಜಿಯಿಂದ 5 ಕೆಜಿಗೆ ಇಳಿಸಿದೆ. ಮುಂದೆ 3 ಕೆಜಿಗೆ ಇಳಿಸ ಬಹುದು, ನಂತರ ಅಕ್ಕಿ ಕೊಡು ವುದನ್ನೇ ನಿಲ್ಲಿಸಬಹುದು ಎಂದು ಕಳವಳ ವ್ಯಕ್ತ ಪಡಿಸಿದ ಸಿದ್ದರಾಮಯ್ಯ, ಇಂದಿರಾ ಕ್ಯಾಂಟೀನ್ ಅನ್ನು ಈಗಾಗಲೇ ಮುಚ್ಚಿಸಿದ್ದಾರೆ ಎಂದು ಆಕ್ಷೇಪಿಸಿದರು.

ಬಡವರಿಗೆ ಎರಡು ಹೊತ್ತು ಊಟ ಸಿಗಬೇಕು, ಯಾರೂ ಹಸಿದು ಮಲಗಬಾರದು. ಹಸಿವು ಮುಕ್ತ ಕರ್ನಾಟಕ ಆಗಬೇಕು ಎಂದು ನಾನು ಈ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಬಡವರು ಊಟ ಮಾಡುವುದು ಇಷ್ಟ ಇಲ್ಲ, ಬಡವರು ಊಟ ಮಾಡುವುದು ತಡೆದುಕೊಳ್ಳಲು ಆಗಲ್ಲ ಎಂದು ಕಿಡಿ ಕಾರಿದರು. 

ಮಾಜಿ ಶಾಸಕ ದಿವಂಗತ ಗುರುಪಾದಪ್ಪ ನಾಗಮಾರ ಪಲ್ಲಿ ಅವರು ಅನ್ನಭಾಗ್ಯ ಯೋಜನೆಯ ಬಗ್ಗೆ ತಮ್ಮ ಬಳಿ ಆಕ್ಷೇಪಿಸಿ, ಈ ಯೋಜನೆಯಿಂದ ಬಡವರು ಕೆಲಸಕ್ಕೆ ಬರುವುದಿಲ್ಲ ಎಂದಿದ್ದರು. ಈ ಬಗ್ಗೆ ನಾನು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ, ಬಡವರು ಗೇಮೆ ಮಾಡಿ ಸಾಕಾಗಿ ದ್ದಾರೆ. ಅವರು ವಿಶ್ರಾಂತಿ ಪಡೆಯಲಿ, ನೀನು ಕೆಲಸ ಮಾಡು ಎಂದಿದ್ದೆ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು. ಬಡವರು ಮುಖ್ಯ ವಾಹಿನಿಗೆ ಬರದೇ ಹೋದರೆ ಸಮ ಸಮಾಜ ಸಾಧ್ಯ ಆಗುವುದಿಲ್ಲ. ಬಸವಣ್ಣ, ಕನಕದಾಸರಿಂದ ಹಿಡಿದು ಅಂಬೇಡ್ಕರ್‌ವರೆಗೆ ದಾರ್ಶನಿಕರು ಬಡತನ ಹಾಗೂ ಜಾತಿ ಮುಕ್ತ ಸಮಾಜ ಬಯಸಿದ್ದರು. ಬಡತನ ಹಾಗೂ ಜಾತಿ ವ್ಯವಸ್ಥೆ ಹೋಗದೆ ಸಮ ಸಮಾಜ ಸಾಧ್ಯವಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕನಕ ಗುರುಪೀಠದ ತಿಂಥಿಣಿ ಶಾಖಾ ಮಠದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ, ಕುರುಬರು ತಮ್ಮ ದೈವ – ಧಾರ್ಮಿಕ – ಸಾಮಾಜಿಕ ಸಂಪತ್ತು ಹಾಗೂ ಐತಿಹಾಸಿಕ ಸಂಪತ್ತು – ಚರಿತ್ರೆಯನ್ನು ಉಳಿಸಿಕೊಳ್ಳಬೇಕು. ಸಮಾಜದಲ್ಲಿ ಓದಿದವರು, ಉದ್ಯೋಗದಲ್ಲಿರುವವರು, ರಾಜಕೀಯ ಲಾಭ ಪಡೆಯುವವರು ಸಮುದಾಯಕ್ಕಾಗಿ ದುಡಿಯಬೇಕು ಎಂದವರು ಕಿವಿಮಾತು ಹೇಳಿದರು.

ಜಿಲ್ಲಾ ಕುರುಬ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವೈ. ವಿರೂಪಾಕ್ಷಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಶಾಸಕ ಎಸ್. ರಾಮಪ್ಪ, ಮಾಜಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ, ಹೆಚ್.ಎಂ. ವೀರಣ್ಣ, ಹೆಚ್. ಆಂಜನೇಯ, ಪರಿಷತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್ ಸಾಬ್, ಕುರುಬ ಸಮಾಜದ ಮುಖಂಡರಾದ ಕೆಂಗೋ ಹನುಮಂತಪ್ಪ, ಪಿ. ರಾಜಕುಮಾರ್‌, ಕೊಳೇನಹಳ್ಳಿ ಸತೀಶ್, ಜಯಮ್ಮ, ಹೆಚ್.ಬಿ. ಮಂಜಪ್ಪ, ಉದಯ ಶಂಕರ್ ಒಡೆಯರ್, ಎಂ.ಜಿ.ಸುಭಾಷ್‌ ಚಂದ್ರ, ಜಿ.ಪಂ. ಸದಸ್ಯರಾದ ಬಸವಂತಪ್ಪ, ಜಿ.ಸಿ. ಲಿಂಗಪ್ಪ, ಕಾಂಗ್ರೆಸ್ ವಕ್ತಾರ ಡಿ. ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.

ಸಮಾಜದ ಮುಖಂಡರಾದ ಹದಡಿ ಎಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್.ಎಸ್. ಪ್ರಕಾಶ್ ಸ್ವಾಗತಿಸಿದರು.

error: Content is protected !!