ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಐಜಿಪಿ ರವಿ ಕಿವಿಮಾತು
ದಾವಣಗೆರೆ, ಏ.2- ನಿವೃತ್ತಿ ನಂತರವೂ ಖಾಲಿ ಕೂರದೇ ವೃತ್ತಿಯಲ್ಲಿದ್ದಾಗ ಇದ್ದಂತಹ ಕಾರ್ಯಚಟುವಟಿಕೆಗಳಂತೆ ನಿವೃತ್ತಿ ಜೀವನದಲ್ಲೂ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ಎಸ್. ರವಿ ಕಿವಿಮಾತು ಹೇಳಿದರು.
ಅವರು, ಇಂದು ನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಅನಿ ವಾರ್ಯ. ಆದರೆ, ನಿವೃತ್ತಿಯ ನಂತರ ಯಾರೂ ಖಾಲಿ ಕೂರಬಾರದು. ದಿನದ 8 ಗಂಟೆ ಯಾದರೂ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿ ಚಟುವಟಿಕೆ, ಉದ್ಯಮ ಹೀಗೆ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡು, ನಿವೃತ್ತಿ ಜೀವನದಲ್ಲೂ ಬದುಕು ಕಟ್ಟಿಕೊಳ್ಳಬೇಕು. ಹಾಗೇನಾದರೂ ಖಾಲಿ ಕೂತರೆ ಖಿನ್ನತೆ ಬರುವ ಸಾಧ್ಯತೆ ಇದೆ. ಹಾಸಿಗೆ ಹಿಡಿದು ಇಹಲೋಕ ತ್ಯಜಿಸಿದವರೂ ಇದ್ದಾರೆ ಎಂದು ಸೂಚ್ಯವಾಗಿ ಎಚ್ಚರಿಸಿದರು.
ಪೊಲೀಸ್ ಇಲಾಖೆ ಕಷ್ಟದ ಇಲಾಖೆಯಾಗಿದ್ದು, ಕಾರ್ಯಾದೊತ್ತಡದಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಹೀಗಾಗಿ ದಿನದ ಒಂದು ಗಂಟೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸದೃಢತೆಗೆ ಗಮನ ಹರಿಸಬೇಕು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರ ಯೋಗಕ್ಷೇಮ ಬಹಳಷ್ಟು ಮುಖ್ಯವಾಗಿದೆ. ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸುವವರೇ ನಿಜವಾದ ನಾಯಕ ಆಗಲಿದ್ದಾರೆ. ಸಿಬ್ಬಂದಿಗಳ ಸಂಖ್ಯೆ ಹಿಡಿದು ಕರೆಯುವ ಬದಲು, ಹೆಸರು ಹಿಡಿದು ಪ್ರೀತಿಯಿಂದ ಮಾತನಾಡಿಸಬೇಕು. ಯಾವುದೇ ಕಲ್ಯಾಣ ಮಾನವೀಯತೆಯ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.
ಕಲ್ಯಾಣ ಮತ್ತು ಕ್ಷೇಮಾಭಿವೃದ್ಧಿ ಅಧಿಕಾರಿ ಗಳು ಮತ್ತು ಸಿಬ್ಬಂದಿಗಳ ಹಕ್ಕು. ಕೇವಲ ಹಕ್ಕು ಮಾತ್ರ ಪ್ರತಿಪಾದಿಸದೆ ಕರ್ತವ್ಯವನ್ನೂ ಪಾಲಿಸಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಇಲಾಖೆ ಕಠಿಣ ಇಲಾಖೆಯಾಗಿದ್ದು ಕೊಲೆ, ಸುಲಿಗೆ ಸೇರಿದಂತೆ ಇತರೆ ಕಠಿಣ ಕೆಲಸದ ಮಧ್ಯೆ ಬದುಕಬೇಕಾಗಿದೆ. ನಾವು ಸ್ವಲ್ಪ ಯಾಮಾರಿದರೂ ಪಾತಾಳಕ್ಕೆ ಕುಸಿಯಬೇಕಾಗಲಿದೆ. ನಮ್ಮ ಸಿಬ್ಬಂದಿಗಳು ಚಳಿ, ಗಾಳಿ, ಬಿಸಿಲಿನಲ್ಲಿ ಕೆಲಸ ಮಾಡುವುದನ್ನು ನೋಡಿದಾಗೆಲ್ಲಾ ಪೊಲೀಸರಾಗುವುದೇ ಬೇಡ ಎನಿಸುತ್ತದೆ. ಆದರೆ, ನಾವು ತೊಟ್ಟಿರುವ ಕಾಕಿ ಭೂ ತಾಯಿಯ ಪ್ರತೀಕವಾಗಿದ್ದು, ತಾಯಿಗಾಗಿ ಹೆಮ್ಮೆಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಪೊಲೀಸ್ ಇಲಾಖೆಗೆ ಸೇರುವವರಲ್ಲಿ ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವ ಕ್ಷೀಣಿಸುತ್ತಿರುವುದು ಸರಿಯಲ್ಲ. ಎಲ್ಲರೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಜನರಿಗೆ ಜೀವನ-ಮರಣದ ಪ್ರಶ್ನೆ ಬಂದಾಗ ನಮ್ಮ ಬಳಿ ಬರಲಿದ್ದಾರೆ. ಹೀಗಾಗಿ ನಿಷ್ಠೆಯಿಂದ ಸ್ಪಂದಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಜಿ. ನಾಗರಾಜ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸಮಾಧಾನ, ಸಮರ್ಪಣಾಭಾವ ಮತ್ತು ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದರೆ ವೃತ್ತಿ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಇಲಾಖೆಯಿಂದ ಬರುವ ಸಮಸ್ಯೆಯನ್ನು ಯಾರೂ ಸಮಸ್ಯೆ ಎಂಬುದಾಗಿ ಭಾವಿಸದೆ ಅದೊಂದು ಅವಕಾಶ ಎಂದು ಸ್ವೀಕರಿಸಿ, ಉತ್ತಮವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳನ್ನು ಸನ್ಮಾನಿಸಿ ಗೌರವಿಸ ಲಾಯಿತು. ಪೊಲೀಸ್ ಧ್ವಜ ವಿತರಿಸಲಾಯಿತು. ಎಸ್ಪಿ ಹನುಮಂತರಾಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಎಸ್ಪಿ ಎಂ. ರಾಜೀವ್ ವಂದಿಸಿದರು.