ಜಿ.ಪಂ.ಅಧ್ಯಕ್ಷರಿಂದ ದಿಢೀರ್ ಜಿಲ್ಲಾಸ್ಪತ್ರೆ ಭೇಟಿ

ದಾವಣಗೆರೆ, ಜ.27- ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬುಧವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಅವರು ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಡಿ ಗ್ರೂಪ್ ನೌಕರರಿಗೆ ಕನಿಷ್ಟ ವೇತನ ರೂ.12,473 ಇದೆ. ಆದರೆ ಸಿ.ಜಿ. ಆಸ್ಪತ್ರೆಯಲ್ಲಿ ಈ ನೌಕರರಿಗೆ ರೂ. 5 ರಿಂದ 6 ಸಾವಿರ ನೀಡುತ್ತಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷರು ಜಿ.ಪಂ. ಅಧ್ಯಕ್ಷರ ಗಮನಕ್ಕೆ ತಂದರು.

ನಾನ್‍ಕ್ಲಿನಿಕಲ್ ಸಿಬ್ಬಂದಿಗಳಿಗೆ ಕನಿಷ್ಟ ವೇತನ ರೂ.15,073 ಇದ್ದು, ರೂ. 8 ರಿಂದ 9 ಸಾವಿರ ಸಂಬಳ ನೀಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆಯುವುದಾಗಿ ಬೆದರಿಸುತ್ತಾರೆಂದು ನೌಕರರು ದೂರಿದರು.

ಎಲ್ಲರ ಸಮಸ್ಯೆ ಆಲಿಸಿದ ಜಿ.ಪಂ. ಅಧ್ಯಕ್ಷರು ಜಿಲ್ಲಾಸ್ಪತ್ರೆ ಅಧೀಕ್ಷಕರನ್ನು ಸ್ಥಳಕ್ಕೆ ಕರೆಸಿ ಇಂತಹ ತಪ್ಪು ಗಳು ಮುಂದೆ ಮರುಕಳಿಸಬಾರದು. ನೌಕರರಿಗೆ ಸರಿಯಾದ ಸಂಬಳವನ್ನು ಪ್ರತಿ ತಿಂಗಳು ಸರಿಯಾದ ಸಮ ಯಕ್ಕೆ ನೀಡಬೇಕು ಹಾಗೂ ಸುಮಾರು 20 ವರ್ಷಗಳಿಂದ ದುಡಿಯುತ್ತಿರುವ ನೌಕರರನ್ನು ಯಾವುದೇ ಕಾರಣಕ್ಕೆ ತೆಗೆಯಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ಜಯಪ್ರಕಾಶ್, ಸಹಾಯಕ ಆಡಳಿತಾಧಿಕಾರಿ ರಹೀಂ ಖಾನ್ ಹಾಗೂ ನೌಕರರು ಇದ್ದರು.

error: Content is protected !!