ಕಲ್ಯಾಣ ಮಂಟಪದಲ್ಲಿ 200 ಕ್ಕಿಂತ ಹೆಚ್ಚು ಜನ ಸೇರಿದರೆ ಮಂಟಪದ ಮಾಲೀಕರು, ಹೆಣ್ಣು ಮತ್ತು ಗಂಡಿನ ಕಡೆಯವರಿಂದ ಪಾಲಿಕೆ ಅಧಿಕಾರಿಗಳು ದಂಡ ವಸೂಲಿ ಮಾಡಲಿದ್ದಾರೆ. ಸೂಪರ್ ಸ್ಪ್ರೆಡರ್‍ಗಳಾದ ಕಲ್ಯಾಣ ಮಂಟಪ, ವಸತಿ ಶಾಲೆ, ಅಂಗಡಿಗಳಲ್ಲಿ, ಥಿಯೇಟರ್ ಇತರೆಡೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಕೋವಿಡ್ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ: ವ್ಯಾಪಾರಸ್ಥರಿಗೆ ಡಿಸಿ ಎಚ್ಚರಿಕೆ
ದಾವಣಗೆರೆ, ಏ.1- ದೊಡ್ಡ ದೊಡ್ಡ ಅಂಗಡಿಗಳು, ವ್ಯಾಪಾರ ವಹಿವಾಟು ಕೇಂದ್ರಗಳು, ಮದುವೆ ಮಂಟಪಗಳು, ಎಪಿಎಂಸಿ ಮಾರುಕಟ್ಟೆ, ಥಿಯೇಟರ್, ವಸತಿ ಶಾಲೆಗಳು ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವ್ಯಾಪಾರ – ವಹಿವಾಟು, ಕಲ್ಯಾಣ ಮಂಟಪ, ಶೈಕ್ಷಣಿಕ ಸಂಸ್ಥೆ ಸೇರಿದಂತೆ ಆರ್ಥಿಕ ಚಟುವಟಿಕೆ ನಡೆಸುವ ಮಾಲೀಕರುಗಳಿಗೆ ಕೋವಿಡ್ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಸರಣೆ ಕುರಿತು ತಿಳಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನ ಸೇರುವ ಅಂಗಡಿಗಳು, ಕೇಂದ್ರಗಳನ್ನೇ ‘ಸೂಪರ್ ಸ್ಪೆಡರ್’ ಎಂದು ಕರೆಯಲಾಗುತ್ತದೆ. ಇಲ್ಲಿ ಜನ ನಿಯಂತ್ರಣ ಅಗತ್ಯ. ಜನ ಸೇರುವ ಸ್ಥಳಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಮಾರ್ಷಲ್ ನೇಮಕ ಮಾಡಲಾಗುವುದು. ವಹಿವಾಟು ಕೇಂದ್ರಗಳ ಮಾಲೀಕರು ಸರ್ಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಕಳೆದ ಸಾಲಿನ ಮಾರ್ಚ್ ಮಾಹೆಯಲ್ಲಿ ಕೇವಲ 2 ಪ್ರಕರಣಗಳಿದ್ದು, ಮಾರ್ಚ್ 23 ಕ್ಕೆ ಲಾಕ್‍ಡೌನ್ ತಯಾರಿಯಾಗಿತ್ತು. ಜೊತೆಗೆ ಜನರು ಅತ್ಯಂತ ಎಚ್ಚರಿಕೆಯಿಂದ ಇದ್ದರು. ಆದರೆ ಪ್ರಸ್ತುತ 156 ಪ್ರಕರಣಗಳಿದ್ದರೂ ಜನರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಉಡಾಫೆಯಿಂದ ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಿದ್ದು, ಮಾಸ್ಕ್ ಧರಿಸುತ್ತಿಲ್ಲ, ಅಂತರ ಕಾಪಾಡುತ್ತಿಲ್ಲ ಎಂದರು.
ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ. ಕೋವಿಡ್ ವೈರಾಣು ರೂಪಾಂತರಗೊಂಡಿದ್ದು ಎರಡನೇ ಅಲೆಯಲ್ಲಿ ವೈರಾಣು ಅತ್ಯಂತ ವೇಗವಾಗಿ ಹರಡುತ್ತಿದೆ. ಯಾರೂ ಕೋವಿಡನ್ನು ಹಗುರವಾಗಿ ತೆಗೆದುಕೊಳ್ಳಬಾರದು. ವ್ಯಾಪಾರ, ವಹಿವಾಟು, ಮದುವೆ ಮನೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಸಾವುಗಳು ನಡೆಯುತ್ತಿದ್ದರೂ ಜನತೆ ಮೈಮರೆತಿರುವುದು ಸಲ್ಲದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಕಳೆದ ಸಾಲಿನ ಮಾರ್ಚ್ 4 ರಿಂದ ಕೋವಿಡ್ ನಿಯಂತ್ರಣ ಚಟುವಟಿಕೆಯನ್ನು ಸರ್ಕಾರ ಅತ್ಯಂತ ಕಟ್ಟುನಿಟ್ಟಾಗಿ ಆರಂಭಿಸಿದ್ದು, ಇಲ್ಲಿಯವರೆಗೆ ಮುಂದುವರೆದಿದೆ. ಇದುವರೆಗೆ 27605 ಪಾಸಿಟಿವ್ ಪ್ರಕರಣ ಬಂದಿದ್ದು, ಒಟ್ಟು 264 ಸಾವು ಸಂಭವಿಸಿವೆ. ಕಳೆದ ಆಗಸ್ಟ್‍ನಲ್ಲಿ ಅತಿ ಹೆಚ್ಚು ಪಾಸಿಟಿವಿಟಿ ದರ ಅಂದರೆ ಶೇ.16.30 ಇತ್ತು. ಸೋಂಕು ಹರಡುವ ಕೊಂಡಿ ತುಂಡು ಮಾಡುವ ಕಾರ್ಯವನ್ನು ಮಾಡುತ್ತಾ ಬಂದಿದ್ದು, ಈ ಮಾರ್ಚ್‍ನಲ್ಲಿ ಪಾಸಿಟಿವಿಟಿ ದರ 0.29 ಇದೆ. ಪ್ರಸ್ತುತ 160 ಪಾಸಿಟಿವ್ ಪ್ರಕರಣ ಇದ್ದು ಇದರಲ್ಲಿ ದಾವಣಗೆರೆ ತಾಲ್ಲೂಕಿನದ್ದೇ 124 ಪ್ರಕರಣಗಳು ಇವೆ ಹಾಗೂ ನಗರದ್ದೇ 106 ಪ್ರಕರಣಗಳು ಇದ್ದು ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಎಲ್ಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳು ಐಎಲ್‍ಐ ಮತ್ತು ಎಸ್‍ಎಆರ್‍ಐ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಬೇಕು ಹಾಗೂ ಎಲ್ಲ ಹೋಟೆಲ್, ಛತ್ರ, ವಸತಿ ಶಾಲೆ ಸೇರಿದಂತೆ ಹೆಚ್ಚು ಜನರು ಕೆಲಸ ಮಾಡುವ ಅಂಗಡಿಗಳು, ಹೋಟೆಲ್, ಶಾಲೆಗಳಲ್ಲಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ವೈಯಕ್ತಿಕವಾಗಿ ಕೋವಿಡ್ ವಿರುದ್ದ ಹೋರಾಡಬೇಕಿರುವ ಇಂದಿನ ಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ಇತರೆ ಸಂಸ್ಥೆಗಳು ಸಹಕರಿಸಬೇಕು ಎಂದರು.
ಮೊನ್ನೆವರೆಗೆ ಸಿಂಗಲ್ ಡಿಜಿಟ್‍ನಲ್ಲಿದ್ದ ಪ್ರಕರಣ ಇಂದು ಡಬಲ್ ಡಿಜಿಟ್ ಆಗಿದ್ದು ಮೂರಂಕಿಗೆ ತಲುಪುವ ಸಮಯ ದೂರವಿಲ್ಲ. ಆದ ಕಾರಣ ಎಲ್ಲರೂ ಎಚ್ಚೆತ್ತುಕೊಂಡು ಕೋವಿಡ್ ನಿಯಮ ಪಾಲಿಸಬೇಕು ಎಂದರು.
ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಮನೆಗಳಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದರು.
ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ.ನಾಗರಾಜ್, ಜಿಲ್ಲಾ ವರ್ತಕರ ಸಂಘದ, ಐಎಂಎ, ಛೇಂಬರ್ ಆಫ್ ಕಾಮರ್ಸ್, ಸಿನೆಮಾ ಥಿಯೇಟರ್, ವಸತಿ ಶಾಲೆಗಳು, ಬಟ್ಟೆ ಅಂಗಡಿಗಳ ಸಂಘ, ಎಪಿಎಂಸಿ ವರ್ತಕರ ಸಂಘದ, ಲಿಕ್ಕರ್ ಮತ್ತು ವೈನ್ ಸಂಘದ, ಬೀದಿ ಬದಿ ವ್ಯಾಪಾರಿಗಳ ಸಂಘ ಸೇರಿದಂತೆ ವಿವಿಧ ರೀತಿಯ ಆರ್ಥಿಕ ಚಟುವಟಿಕೆ ಮಾಡುವಂತಹ ಸಂಸ್ಥೆಗಳ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.