ಮಹಿಳೆಯರು ಸ್ವಾವಲಂಬಿಗಳಾಗಬೇಕು

ದಾವಣಗೆರೆ, ಏ.1- ಮಹಿಳೆಯರು ನಾಲ್ಕು ಗೋಡೆಗಳಿಗೆ ಸೀಮಿತವಾಗದೇ ಉದ್ಯೋಗ ಪಡೆಯುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಎಸ್‌.ಎಸ್. ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಶಶಿಕಲಾ ಕೃಷ್ಣಮೂರ್ತಿ ಕರೆ ನೀಡಿದರು.

ಇಲ್ಲಿನ ಪಿಸಾಳೆ ಕಾಂಪೌಂಡ್‌ನಲ್ಲಿ ಬುಧವಾರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶುಭಲಕ್ಷ್ಮಿ ಮಹಿಳಾ ಮಂಡಳಿಯಿಂದ ನಡೆದ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳಿಂದ ಹೆಣ್ಣಿಗೆ ಸಮಾನತೆ ಇರಲಿಲ್ಲ. ಬಸವಣ್ಣನವರು ಮಹಿಳೆಗೆ ಸಮಾನತೆಯನ್ನು ಕಲ್ಪಿಸಿದರು. ಮಹಿಳೆಯರಿಗೆ ಹೆಚ್ಚಿನ ಕಾಳಜಿ, ಪ್ರೀತಿ ನೀಡಿದರೆ ಸಾಕು. ಈ ದೇಶ ಉದ್ಧಾರವಾಗುತ್ತದೆ ಎಂದರು.

ಪತಿ-ಪತ್ನಿ ಒಂದೇ ಗಾಡಿಯ ಎರಡು ಚಕ್ರಗಳಿದ್ದಂತೆ. ಎರಡೂ ಸಲೀಸಾಗಿ ಸಾಗಿದಾಗ ಮಾತ್ರ ಜೀವನ ಸುಂದರವಾಗಿರುತ್ತದೆ ಎಂದರು.

ಹೆಣ್ಣಿನ ಸ್ಥಿತಿಯನ್ನು ನೋಡಿ ಕಲ್ಲೆಸೆಯುವವರು ಇರುತ್ತಾರೆ. ಆದರೆ ಆ ಕಲ್ಲುಗಳನ್ನು ನೀವು ಮನೆ ಕಟ್ಟಲು ಬಳಸಬೇಕು ಎಂದು ಸಲಹೆ ನೀಡಿದರು.

ಗಂಡನನ್ನು ಕಳೆದುಕೊಂಡರೂ ಮಹಿಳೆ ಯಾರ ಹಂಗೂ ಇಲ್ಲದೇ ಮಕ್ಕಳನ್ನು ಬೆಳೆಸಬಲ್ಲಳು. ಆದರೆ ಪತ್ನಿಯನ್ನು ಕಳೆದುಕೊಂಡ ಪತಿಗೆ ಈ ಶಕ್ತಿ ಇಲ್ಲ. ಇನ್ನೊಂದು ಹೆಣ್ಣಿನ ಆಸರೆ ಬೇಕು. ಆದ್ದರಿಂದ ಮಹಿಳೆಗೆ ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿಯೂ ಅಗತ್ಯವಿದೆ ಎಂದು.

ಮಹಿಳಾ ಠಾಣೆಯ ಸಬ್ ಇನ್ ಸ್ಪೆಕ್ಟರ್ ಮಾಳಮ್ಮ ಹಾಗೂ ಶಶಿಕಲಾ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷೆ ಪದ್ಮಜಾರಾವ್, ಗೌರವಾಧ್ಯಕ್ಷೆ ವಸಂಬಾಯಿ ಸಾಬಾಳೆ, ರಾಜ್ಯ ಸ್ಲಂ ಮೋರ್ಚಾ ಕಾರ್ಯದರ್ಶಿ ಕೃಷ್ಣ ಪಿಸಾಳೆ, ಉಪಾಧ್ಯಕ್ಷೆ ಅಂಬಿಕಾ, ಕನ್ನಡಪರ ಹೋರಾಟಗಾರ ವಿಜಯ್ ಜಾಧವ್ ಇದ್ದರು.

error: Content is protected !!