ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಕ್ರೀಡಾಂಗಣ ಬಣ ಬಣ, ಸುದೀರ್ಘ ಭಾಷಣ
ದಾವಣಗೆರೆ, ಜ. 26 – ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ಧ್ವಜಾರೋಹಣ ನೆರವೇರಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದಿನ ಗಣರಾಜ್ಯೋತ್ಸವಗಳ ಮಾದರಿಯಂತೆ ಈ ಬಾರಿ ಶಾಲಾ ಮಕ್ಕಳು ಉಪಸ್ಥಿತರಿರಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳೂ ನೆರವೇರಲಿಲ್ಲ. ಇಡೀ ಕ್ರೀಡಾಂಗಣ ಖಾಲಿಯಾಗಿ ಬಣಗುಡುತ್ತಿತ್ತು. ಕವಾ ಯತು ಪೊಲೀಸರ ತಂಡಗಳು ಮಾತ್ರ ಮೈದಾನದ ಲ್ಲಿದ್ದವು. ಸಾರ್ವಜನಿಕರಿಗಿಂತ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಉಪಸ್ಥಿತಿಯೇ ಹೆಚ್ಚಾಗಿತ್ತು.
ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದ ಸಚಿವ ಬಸವರಾಜ್, ಕೊರೊನಾ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಕೃಷಿ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತೋಟಗಾರಿಕಾ ಇಲಾಖೆಗಳ ಕಾರ್ಯ ನಿರ್ವಹಣೆ ಕುರಿತು ವಿವರ ನೀಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಳ್ಳುತ್ತಿರುವ ಕಾಮಗಾರಿಗಳು ಹಾಗೂ ಮಹಾನಗರ ಪಾಲಿಕೆಯ ಕಾಮಗಾರಿಗಳ ಕುರಿತು ಸುದೀರ್ಘ ವಿವರ ನೀಡಿದರು.
ಸಾವಿರ ಸಂಖ್ಯೆಯಲ್ಲಿದ್ದ ಕೊರೊನಾ ಪ್ರಕರಣಗಳು ಈಗ ಎರಡಂಕಿಗೆ ಬಂದಿವೆ. ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ನೇತೃತ್ವದಲ್ಲಿ ಸಂಜೀವಿನಿಯಂತೆ ಬಂದಿರುವ ಲಸಿಕೆ ನಮ್ಮಲ್ಲಿ ಮತ್ತಷ್ಟು ಹುಮ್ಮಸ್ಸು ತುಂಬಿದೆ. ಈ ಲಸಿಕೆ ಅಭಿಯಾನ ಜಿಲ್ಲಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದವರು ಹೇಳಿದರು.
ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 170 ಟನ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 25.78 ಕೋಟ ರೂ. ವೆಚ್ಚದ ಯೋಜನಾ ವರದಿಗೆ ಸರ್ಕಾರ ಅನುಮೋದನೆ ನೀಡಿದೆ. ಯೋಜನೆ ಅನುಷ್ಠಾನದ ನಂತರ ರೈತರಿಗೆ ಭೂ ಫಲವತ್ತತೆ ಉತ್ತಮಗೊಳಿಸಲು ವಾರ್ಷಿಕ 6000 ಟನ್ ಸಿಟಿ ಕಾಂಪೋಸ್ಟ್ ತಯಾರಿಸಲಾಗುವುದು ಎಂದು ಸಚಿವರು ಹೇಳಿದರು.
ದೇಶ 1950ರ ಜನವರಿ 26 ರಂದು ಸಂವಿಧಾನವನ್ನು ಅಂಗೀಕರಿಸಿ, ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮಿದೆ. ಸಂವಿಧಾನದ ಕರಡು ರಚನಾ ಸಮಿತಿಯಲ್ಲಿ ಡಾ|| ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿತ್ತು. ತಮ್ಮ ಪಾತ್ರವನ್ನು ಸಂಪೂರ್ಣವಾಗಿ ನಿರ್ವಹಿಸುವಲ್ಲಿ ಅಂಬೇಡ್ಕರ್ ಅವರಿಗೆ ಹಲವಾರು ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅನುಭವ ನೆರವಾಯಿತು. ಅವರ ಸೇವೆಗೆ ದೊರೆತ ಮನ್ನಣೆಗೆ §ಸಂವಿಧಾನದ ಪಿತಾಮಹ¬ ಎಂದು ನಾವು ಸ್ಮರಿಸುವಂತಾಗಿದೆ ಎಂದವರು ಹೇಳಿದರು.
ಪ್ರಥಮ ಪ್ರಜೆಗೆ ಪೊಲೀಸ್ ತಡೆ
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ ಕುಮಾರ್ ಅವರನ್ನು ಪೊಲೀಸರು ವೇದಿಕೆಗೆ ಬರದಂತೆ ತಡೆದರು. ದಾವಣಗೆರೆ ನಗರದ ಪ್ರಥಮ ಪ್ರಜೆ ಅಜಯ್ ಕುಮಾರ್ ವೇದಿಕೆಗೆ ಹತ್ತಬೇಕಾದಾಗ ಅವರನ್ನು ತಡೆದಿದ್ದು, ಕಾರ್ಯಕ್ರಮದ ನಂತರ ಬಹಳಷ್ಟು ಚರ್ಚೆಗೆ ಕಾರಣವಾಯಿತು.
ಪತ್ರಿಕಾ ಛಾಯಾಗ್ರಹಕರು ಮತ್ತು ದೃಶ್ಯ ಮಾಧ್ಯಮಗಳ ವಿಡಿಯೋಗ್ರಾಫರ್ಗಳಿಗೆ ಸೂಕ್ತ ವ್ಯವಸ್ಥೆ ಮಾಡದೇ ಇರುವುದೂ ಗೊಂದಲಕ್ಕೆ ಕಾರಣವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಛಾಯಾಚಿತ್ರ ಸಮರ್ಪಕವಾಗಿ ತೆಗೆಯಲು ಅವಕಾಶ ಇಲ್ಲದ್ದರಿಂದ ಈ ಗೊಂದಲವಾಯಿತು. ಕಾರ್ಯಕ್ರಮದ ನಂತರ ಐಜಿಪಿ ರವಿ ಪತ್ರಕರ್ತರೊಂದಿಗೆ ಮಾತುಕತೆ ನಡೆಸಿ, ಗೊಂದಲಕ್ಕೆ ತೆರೆ ಎಳೆದರು.
ಪಥಸಂಚಲನ : ಡಿಎಆರ್ ಪೊಲೀಸ್ ತಂಡ, ನಾಗರಿಕ ಪೊಲೀಸ್ ತಂಡ, ಗೃಹ ರಕ್ಷಕದಳ, ಅರಣ್ಯ ಇಲಾಖೆ, ಅಬಕಾರಿ ಪೊಲೀಸ್ ತಂಡ, ಅಗ್ನಿಶಾಮಕ ದಳಗಳು ಪೊಲೀಸ್ ವಾದ್ಯವೃಂದದ ಹಿಮ್ಮೇಳದಲ್ಲಿ ಪಥಸಂಚಲನ ನಡೆಸಿದವು.
ಅಧಿಕಾರಿಗಳಿಗೆ ಗೌರವ : ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆಯನ್ನು ನಗರದಲ್ಲಿ ಶೇ. 90 ರಷ್ಟು ಅನುಷ್ಠಾನಗೊಳಿಸಿರುವ ಪ್ರಯುಕ್ತ ‘ತಂಬಾಕು ಮುಕ್ತ ದಾವಣಗೆರೆ ನಗರ’ ವನ್ನಾಗಿ ಘೋಷಿಸಿದ್ದು, ಇದಕ್ಕೆ ಶ್ರಮಿಸಿದ ಅಧಿಕಾರಿಗಳಿಗೆ ಗೌರವ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧ್ಯಕ್ಷ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಕೋಶದ ಉಪಾಧ್ಯಕ್ಷರಾದ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮತ್ತಿತರರಿಗೆ ಗೌರವ ಸ್ಮರಣಿಕೆ ನೀಡಲಾಯಿತು.
ಸನ್ಮಾನ : ಕೋವಿಡ್ ಹಿನ್ನೆಲೆಯಲ್ಲಿ ಸೇವೆ ಸಲ್ಲಿಸಿದ ಸಿ.ಜಿ. ಆಸ್ಪತ್ರೆ ವೈದ್ಯ ಡಾ. ಮುನಾವರ್ ಹುಸೇನ್, ಹೊನ್ನಾಳಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಂದ್ರಪ್ಪ, ಚನ್ನಗಿರಿ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಆರ್.ಎಮ್.ಗಿರಿ, ಬಾಪೂಜಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಬಿ.ಎಂ.ಹರ್ಷ, ಸ್ಪಂದನ ಯೂರಾಲಜಿ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ.ನವೀನ್ ಹಾಗೂ ಎನ್.ಸಿ.ಸಿ.ಯ ಶ್ರೀಷ್ಮ ಹೆಗಡೆ, ಮಹಮ್ಮದ್ ಮುಸವೀರ್ ಪಾಷಾ, ಇಂಫನಾ, ಬಿ.ಜಿ. ಅನುಶ್ರೀ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು.
ಶಾಸಕ ಎಸ್.ಎ ರವೀಂದ್ರನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ ಶಿವಕುಮಾರ್, ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, , ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ತಹಶೀಲ್ದಾರ್ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.