ಪರಾಜಿತರಿಗೆ ಮನ್ನಣೆ ನೀಡಿದಾಗ ಪಕ್ಷ ಮತ್ತಷ್ಟು ಬಲಶಾಲಿ

ಪರಾಜಿತರಿಗೆ ಮನ್ನಣೆ ನೀಡಿದಾಗ ಪಕ್ಷ ಮತ್ತಷ್ಟು ಬಲಶಾಲಿ - Janathavaniರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆ ರಾಷ್ಟ್ರೀಯ ಕನ್ವೀನರ್ 

ನಂದಾ ಮಾತ್ರಾ

ದಾವಣಗೆರೆ, ಜ.24- ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿ ಪರಾಜಿತಗೊಂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಡೆಗಣಿಸದೇ ಅವರಿಗೂ ಮನ್ನಣೆ ನೀಡಿದಾಗ ಪಕ್ಷವನ್ನು ಮತ್ತಷ್ಟು ಬಲಶಾಲಿಯಾಗಿ ಸಬಹುದು ಎಂದು ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ರಾಷ್ಟ್ರೀಯ ಕನ್ವೀನರ್ ನಂದಾ ಮಾತ್ರಾ ತಿಳಿಸಿದರು. 

ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಇಂದು ನಡೆದ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಗ್ರಾಮ ಪಂಚಾಯ್ತಿ, ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿಗಳಿಗೆ ಪಕ್ಷದಲ್ಲಿ ಸ್ಥಾನ, ಸನ್ಮಾನಗಳು ಸಿಗುತ್ತವೆ. ಆದರೆ, ಪರಾಜಿತರಾದ ಪಕ್ಷದ ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗುತ್ತದೆ. ಇದರಿಂದ ಪಕ್ಷಕ್ಕೆ ಹಾನಿ. ಪಕ್ಷ ಸಂಘಟನೆಗೆ ಎಲ್ಲರೂ ಮುಖ್ಯ. ಆದ್ದರಿಂದ ಚುನಾವಣೆಯಲ್ಲಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳಿಗೆ ಮನ್ನಣೆ ನೀಡಿ  ಅವರಿಂದ ಪಕ್ಷವನ್ನು ಮತ್ತಷ್ಟು ಬಲಿಪಡಿಸುವಂತೆ ಸಲಹೆ ನೀಡಿದರು.

ಕೇಂದ್ರ ಸರ್ಕಾರ ಹೋರಾಟಗ ಳನ್ನು ನ್ಯಾಯಾಲಯದ ಮೂಲಕ ಹತ್ತಿಕ್ಕುವಂತಹ ಕೆಲಸಕ್ಕೆ ಮುಂದಾಗಿ ದೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದು ಹಕ್ಕು. ದೌರ್ಜನ್ಯ, ದಬ್ಬಾಳಿಕೆ ನಡೆದಾಗ ಕಾಂಗ್ರೆಸ್ ಪಕ್ಷ ಧ್ವನಿಯಾಗಬೇಕಿದೆ. ಇಂತಹ ಚಿಂತನೆ ಇಟ್ಟುಕೊಂಡು ಪಕ್ಷ ಸಂಘಟಿತವಾಗುತ್ತಿದ್ದು, ಪಕ್ಷದ ಪ್ರತಿಯೊಂದು ಘಟಕದ ಕಾರ್ಯ ಕರ್ತರು ಇದರಲ್ಲಿ ತೊಡಗಿಸಿಕೊಳ್ಳ ಬೇಕು ಎಂದು  ಹೇಳಿದರು.

ಇಂದು ದೇಶದಲ್ಲಿ ಏಕವ್ಯಕ್ತಿ ಪ್ರದರ್ಶನದಿಂದ ಗ್ರಾಮ ಸ್ವರಾಜ್ ವ್ಯವಸ್ಥೆಯೇ ಇಲ್ಲದಂತಾಗಿದೆ. ಅಧಿಕಾರ
ವಿಕೇಂದ್ರೀಕರಣ ಅನ್ನುವುದು ಸಹ ಮರೀಚಿಕೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯವರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಿ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ತಿಳಿವಳಿಕೆ ಹೇಳಬೇಕಿದೆ. ಮಹಾತ್ಮ ಗಾಂಧಿಜಿಯವರ ಪರಿಕಲ್ಪನೆ ಗ್ರಾಮ ಸ್ವರಾಜ್ ದಿಕ್ಕಿನಲ್ಲಿ ನಾವೆಲ್ಲಾ ನಡೆಯಬೇಕಾದ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ಅಗತ್ಯವಿದೆ ಎಂದು ಹೇಳಿದರು. 

ಸ್ವಾತಂತ್ರ್ಯ ಪೂರ್ವದಲ್ಲೇ ಗ್ರಾಮ ಸ್ವರಾಜ್ ಹೆಸರಿನಲ್ಲಿ ಮಹಾತ್ಮ ಗಾಂಧೀಜಿ ಗ್ರಾಮಗಳ ಅಭಿವೃದ್ಧಿ ಮತ್ತು ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಇಡೀ ವಿಶ್ವದ ಗಮನ ಸೆಳೆದಿದ್ದರು. ಅದೇ ರೀತಿ ಕಾಂಗ್ರೆಸ್ ಪಕ್ಷವನ್ನು ಅವರ ಪರಿಕಲ್ಪನೆಯಲ್ಲಿಯೇ ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆ ತಂದು ಮೂರು ಹಂತಗಳಲ್ಲಿ ಅಧಿಕಾರ ವಿಕೇಂದ್ರಿಕರಣಕ್ಕೆ ನಾಂದಿ ಹಾಡಲಾಯಿತು. ಇದರಿಂದಾಗಿ ಗ್ರಾಮೀಣ ಪ್ರದೇಶಗಳನ್ನೊಳಗೊಂಡ ದೇಶದ ಬೆಳವಣಿಗೆಗೆ ಸಹಕಾರಿಯಾಯಿತು ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ರಾಷ್ಟ್ರೀಯ ಸಂಘಟನೆಯವರು ಈ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯ ಬಗ್ಗೆ ತಿಳಿದು ವರದಿ ನೀಡಲು ಆಗಮಿಸಿರುವುದು ಸ್ವಾಗತಾರ್ಹ. ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಸಂಘಟನೆ ಉತ್ತಮ ರೀತಿಯಲ್ಲಿದೆ. ಇದಕ್ಕೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯೇ ಸಾಕ್ಷಿ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ರಾವ್, ಜಿಲ್ಲಾ ಸೇವಾದಳದ ಸಂಚಾಲಕ ಡೋಲಿ ಚಂದ್ರು, ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಬಸವರಾಜ್ ಬೆಳ್ಳೂಡಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ರಾಘವೇಂದ್ರಗೌಡ ಉರ್ಲುಕಟ್ಟೆ ಮಾತನಾಡಿದರು. 

ಈ ಸಂದರ್ಭದಲ್ಲಿ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ  ಚನ್ನಗಿರಿಯ ರವಿಕುಮಾರ್, ಕುಬೇರಪ್ಪ, ರೋಹಿತ್, ಆರ್.ಕೆ.ಅಜಯ್, ಸಾರಥಿ ಗೋಣೇಶ್, ಬನ್ನಿಕೋಡು ಸುನೀಲ್, ನವೀನ್ ಜಗಳೂರು, ಯುವ ಕಾಂಗ್ರೆಸ್‍ನ ಎಲ್.ಎಂ.ಹೆಚ್. ಸಾಗರ್, ಮೈನುದ್ದೀನ್, ಸಾಜಿದ್, ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲು, ಮಹಿಳಾ ಕಾಂಗ್ರೆಸ್‍ನ ರಾಜೇಶ್ವರಿ, ಕವಿತಾ ಚಂದ್ರಶೇಖರ್, ಉಮಾಕುಮಾರ್, ಜಯಮ್ಮ, ಪುಷ್ಪಲತಾ ಸೇರಿದಂತೆ ಇತರರು ಇದ್ದರು.

error: Content is protected !!