ದಾವಣಗೆರೆ, ಜ.22- ಅತೃಪ್ತರ ಸಭೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಯಾವ ಅತೃಪ್ತ ಶಾಸಕರ ಸಭೆಯಲ್ಲೂ ಪಾಲ್ಗೊಂಡಿಲ್ಲ. ಅತೃಪ್ತ ಗುಂಪನ್ನು ಸೇರಿಲ್ಲ, ಸೇರುವುದೂ ಇಲ್ಲ ಎಂದು ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಸ್ಪಷ್ಟಪಡಿಸಿದರು.
ಕೆಲ ಪತ್ರಿಕೆಗಳಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯರ ನೇತೃತ್ವದಲ್ಲಿ ನಡೆದ ಅತೃಪ್ತ ಶಾಸಕರ ಸಭೆಯಲ್ಲಿ ಪ್ರೊ.ಎನ್.ಲಿಂಗಣ್ಣ ಭಾಗವಹಿಸಿದ್ದಾ ರೆಂಬುದಾಗಿ ಸುದ್ದಿಯಾಗಿದೆ. ನನಗೂ ಈ ಅತೃಪ್ತರ ಸಭೆಗೂ ಯಾವುದೇ ಸಂಬಂಧವಿಲ್ಲ. ಅತೃಪ್ತ ಶಾಸಕರ ಸಭೆ ಬಗ್ಗೆ ನನಗೆ ಗೊತ್ತಿಲ್ಲ. ಯಾರೂ ಸಭೆಗೆ ಆಹ್ವಾನಿಸಿಲ್ಲ. ಅತೃಪ್ತ ಶಾಸಕರ ಜೊತೆ ಸೇರಿಲ್ಲ, ಸೇರುವುದೂ ಇಲ್ಲವೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನನ್ನ ರಾಜಕೀಯ ಗುರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನಗೆ ತಂದೆ ಸಮಾನ. ಎಂತಹ ಸನ್ನಿವೇಶದಲ್ಲಿಯೂ ಅವರ ವಿರುದ್ಧ ಮಾತನಾಡಿಲ್ಲ, ಮಾತನಾಡೋದೂ ಇಲ್ಲ. ನಾನು ದ್ರೋಹ ಮಾಡಲ್ಲ. ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದು ಎಂಬ ಕಾರಣಕ್ಕೆ ಸ್ಪಷ್ಟನೆ ನೀಡುತ್ತಿದ್ದೇನೆಂದರು.
ನಾನು ರಾಜಕೀಯ ಮಾಡಿ ಜೀವನ ಮಾಡಬೇಕೆಂದೇನಿಲ್ಲ. ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡದಿದ್ದರೂ ಪರವಾಗಿಲ್ಲ. ನಾನು ಯಾವುದೇ ಕಾರಣಕ್ಕೂ ಕೆಟ್ಟ ರಾಜಕಾರಣ ಮಾಡಲ್ಲ. ಹೀಗೆ ಮಾಡಿ ಜೀವನ ನಡೆಸುವ ಅವಶ್ಯಕತೆಯೂ ನನಗಿಲ್ಲವೆಂದರು.
ನನಗೆ ಬಾಬು ಜಗಜೀವನ ರಾಂ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಮತ್ತೇನು ಬೇಕು ನನಗೆ. ನನ್ನಂತೆಯೇ ಹಲವು ಜನ ಹಿರಿಯ ಶಾಸಕ ರಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗಲಿ. ಜಿಲ್ಲೆಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬುದಕ್ಕೆ ನನ್ನ ಸಹಮತ ಇದೆ. ಅದು ಸಿಎಂ ವಿವೇಚನೆಗೆ ಬಿಟ್ಟದ್ದು. ಅವರ ನಿರ್ಧಾರಕ್ಕೆ ನಾನು ಸದಾ ಬದ್ಧನಾಗಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸರೇಂದ್ರಪ್ಪ, ಚಂದ್ರೇಗೌಡ್ರು, ನಾಗರಾಜ್, ದಾದಾಪೀರ್, ಬಾವಿಹಾಳ್ ಅಜಯ್ ಹಾಜರಿದ್ದರು.