ದಾವಣಗೆರೆ, ಜ. 19- ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ತಮ್ಮ ಜಾಗದ ದಾಖಲೆ ಹೊಂದಿರದವರಿಗೆ ಆಧಾರ್ ಕಾರ್ಡ್ ಮಾದರಿಯಲ್ಲಿ ಹಕ್ಕುಪತ್ರ (ಪ್ರಾಪರ್ಟಿ ಕಾರ್ಡ್) ನೀಡುವ ಸ್ವಾಮಿತ್ವ ಯೋಜನೆಯನ್ನು ಚುರುಕುಗೊಳಿಸಿ, ಶೀಘ್ರ ಮುಗಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆ ಯಡಿ ಮೊದಲ ಹಂತದಲ್ಲಿ ಪ್ರತಿ ತಾಲ್ಲೂಕಿ ನಿಂದ 8 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಇನ್ನೊಂದು ತಿಂಗಳಲ್ಲಿ ಯೋಜನೆಯ ಶಾಶ್ವತ ಆಸ್ತಿ ದಾಖಲೀಕರಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ ಹೇಳಿದರು.
ಸಂಪೂರ್ಣ ಜಿಲ್ಲೆಯಲ್ಲಿ ಯೋಜನೆ ಪೂರ್ಣಗೊಳ್ಳಲು ಮೂರು ವರ್ಷಗಳಾದರೂ ಬೇಕಾಗುತ್ತದೆ ಎಂದು ಸಿಇಒ ಹೇಳಿದಾಗ, ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಸಂಸದರು ಸೂಚಿಸಿದರು.
1361 ಮನೆಗಳು ಬ್ಲಾಕ್: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿವೇಶನ ಪಡೆದು ಮನೆ ಕಟ್ಟಿಕೊಳ್ಳಲಾಗದ 1573 ನಿವೇಶನಗಳಿವೆ. ಸ್ಥಳೀಯ ಸಂಸ್ಥೆಗಳ ಮೂಲಕ ನೋಟಿಸ್ ನೀಡಿ ಇಲ್ಲಿಯವರೆಗೆ ಮನೆ ಕಟ್ಟದ 1361 ನಿವೇಶನಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು
ನೂತನವಾಗಿ ನಡೆಯುವ ಆಶ್ರಯ ಮನೆ ಸಮಿತಿ ಸಭೆಯಲ್ಲಿ ನಡೆಯುವ ಫಲಾನುಭವಿಗಳ ಆಯ್ಕೆ ವೇಳೆ ಬ್ಲಾಕ್ ಆದ ನಿವೇಶನಗಳನ್ನು ಪರಿಗಣಿಸಿ ಅಗತ್ಯವಿರುವವರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮನೆ ಕಟ್ಟಿಕೊಡಲು ಹಣವಿಲ್ಲ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟಿಕೊಡಲು ಹಣವಿಲ್ಲದ ಕಾರಣ 20×30 ಅಳತೆಯ ನಿವೇಶನ ಮಾಡಿ ನೀಡುವಂತೆ ಸರ್ಕಾರ ಸೂಚಿಸಿದೆ. ಅಧಿಕೃತ ಆದೇಶ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನಿವೇಶನ ನಿರ್ಮಾಣಕ್ಕೆ ಹೌಸಿಂಗ್ ಕಾರ್ಪೊರೇಷನ್‌ನಿಂದ ಹಣ ಅಗತ್ಯವಿದ್ದು, ಈ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಸಂಸದ ಸಿದ್ದೇಶ್ವರ್ ಮಾತನಾಡಿ, ಈ ಯೋಡನೆಯಡಿ ಕೆಲವರು ಮನೆ ಪಡೆದು ಮಾರಿಕೊಳ್ಳುವ ಹಾಗೂ ಜನಪ್ರತಿನಿಧಿಗಳು ತಮಗೆ ಬೇಕಾದವರಿಗೆ ಮನೆ ನೀಡುವ ಬಗ್ಗೆ ದೂರುಗಳು ಹೆಚ್ಚಾಗಿದ್ದು, ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು ಎಂದು ಸೂಚಿಸಿದರು.
ಡಿಸಿ ಜೊತೆ ಸಂಸದರ ಸಿಟಿ ರೌಂಡ್ಸ್
ನಗರ ಸ್ವಚ್ಛತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಸಿದ್ದೇಶ್ವರ್, ಯಾವಾಗ ನೀವು ಸಿಟಿ ರೌಂಡ್ಸ್ ಹಾಕುತ್ತೀರಿ? ಎಂದು ಆಯುಕ್ತರಿಗೆ ಪ್ರಶ್ನಿಸಿದರು.
ಪ್ರತಿ ದಿನ ಬೆಳಿಗ್ಗೆ 7 ರಿಂದ 9ರವರೆಗೆ ಎಂದು ಆಯುಕ್ತರು ಉತ್ತರಿಸಿದಾಗ, ನೀವಷ್ಟೇ ಹೋಗಬೇಡಿ. ಮುಂದಿನ ವಾರ ನನ್ನನ್ನೂ ಕರೆದುಕೊಂಡು ಹೋಗಿ. ಜೊತೆಗೆ ಜಿಲ್ಲಾಧಿಕಾರಿಗಳೂ ಬರುತ್ತಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಆಯುಕ್ತರು, ಬೆಳಿಗ್ಗೆ ಬಾರ್ಗಳು, ಅಂಗಡಿಗಳು ಆರಂಭಗೊಂಡ ನಂತರ ಕಸ ತಂದು ಬೀದಿಗೆ ಎಸೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗುತ್ತಿದೆ. ದೊಡ್ಡ ವಾರ್ಡ್ಗಳಿಗೆ 15 ಹಾಗೂ ಚಿಕ್ಕ ವಾರ್ಡ್ಗಳಿಗೆ 10 ಜನ ಪೌರ ಕಾರ್ಮಿಕರಂತೆ ಮರು ಹಂಚಿಕೆ ಮಾಡಲಾಗಿದೆ. ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ, 39ನೇ ವಾರ್ಡಿನಲ್ಲಿ ಸ್ವಚ್ಚತೆ ಇಲ್ಲ. ಪೌರಕಾರ್ಮಿಕ ಮಹಿಳೆಯರು ಬಂದರೂ ಕಸ ಸ್ವಚ್ಚ ಮಾಡುವುದಿಲ್ಲ ಎಂದು ದೂರಿದರೆ, ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ತಮ್ಮ ವಾರ್ಡಿಗೆ ಬರುವ ಮಹಿಳಾ ಪೌರ ಕಾರ್ಮಿಕರು ಸಾರ್ವಜನಿಕರೊಂದಿಗೇ ಜಗಳ ಆಡುತ್ತಾರೆ. ಚರಂಡಿ ಇತರೆ ಕಸವನ್ನು ನಾವು ಸ್ವಚ್ಚಗೊಳಿಸಲು ಆಗುವುದಿಲ್ಲವೆನ್ನುತ್ತಾರೆಂದು ದೂರಿದರು.
ಪಾಲಿಕೆ ಆಯುಕ್ತ, ಸ್ಮಾರ್ಟ್ ಎಂಡಿಗೆ ಸಂಸದರ ತರಾಟೆ
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರನ್ನು ಸಂಸದ ಜಿ.ಎಂ. ಸಿದ್ದೇಶ್ವರ ತರಾಟೆಗೆ ತೆಗೆದುಕೊಂಡರು.
ಸ್ವಚ್ಛ ಭಾರತ್ ಮಿಷನ್ ಯೋಜನೆ ಯಡಿ ನಗರದಲ್ಲಿ ನಿರ್ಮಿಸಿರುವ ಶೌಚಾ ಲಯಗಳ ಬಗ್ಗೆ ತಪ್ಪಾಗಿ ಮಾಹಿತಿ ನೀಡಲಾಗಿದೆ. ಪ್ರಸ್ತುತ ನಿರ್ಮಿಸಲಾಗುತ್ತಿ ರುವ ಶೌಚಾಲಯಗಳ ಬದಲು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದ್ದು, ಸಂಸದರ ಕೆಂಗಣ್ಣಿಗೆ ಗುರಿಯಾಯಿತು.
ತಪ್ಪು ಮಾಹಿತಿ ನೀಡಿ ನಮ್ಮನ್ನೂ ತಪ್ಪುದಾರಿಗೆ ಎಳೆಯಬೇಡಿ. ಪ್ರಾಮಾಣಿಕವಾಗಿ ವರದಿ ನೀಡಿ ಎಂದು ಸಂಸದರು ಹೇಳಿದರು. ಜಿಲ್ಲಾಧಿಕಾರಿಗಳೂ ಸಹ ದನಿಗೂಡಿಸಿ, ವಾಸ್ತವ ವರದಿ ನೀಡುವಂತೆ ಸೂಚಿಸಿದರು.
ಇತ್ತೀಚೆಗಷ್ಟೇ ಈ ಇಬ್ಬರೂ ಅಧಿಕಾರಿಗಳ ಕಾರ್ಯವೈಖರಿ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ಹರಿಹಾಯ್ದಿದ್ದರು.
ಶುದ್ಧ ನೀರಿನ ಘಟಕ ರಿಪೇರಿಗೆ ಕರೆ ಮಾಡಿ
ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯ ಸಮಿತಿ ಬಂದು ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದೆ.
ದುರಸ್ತಿಗೆ ಸಂಬಂಧಿಸಿದಂತೆ 48 ಗಂಟೆಯೊಳಗೆ ದುರಸ್ತಿ ಪಡಿಸಲು ಗುತ್ತಿಗೆದಾರರಿಗೆ, ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ರವರಿಗೂ ಸಹ ಈ ಬಗ್ಗೆ ಪ್ರತಿನಿತ್ಯ ಪರಿ ಶೀಲಿಸಿ ಎಲ್ಲಾ ಘಟಕಗಳನ್ನು ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದೆ ಎಂದು ಸಿಇಓ ತಿಳಿಸಿದರು.
ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸದಿದ್ದರೆ ಟೋಲ್ಫ್ರೀ ಸಂಖ್ಯೆ 9480985555 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ದೂರು ನೀಡಿದರೆ, ಪರಿಹಾರ ಪೋರ್ಟಲ್ ಮೂಲಕ ತ್ವರಿತವಾಗಿ ರಿಪೇರಿ ಮಾಡಲಾಗುವುದು ಎಂದು ಸಿಇಓ ತಿಳಿಸಿದರು.
7.63 ಕೋಟಿ ರೂ. ಮೊತ್ತದ ವಾಹನ ಖರೀದಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗಾಗಿ 7.63 ಕೋಟಿ ರೂ. ಮೊತ್ತದ ವಾಹನ ಖರೀದಿಸುತ್ತಿದ್ದು, ಜಿಲ್ಲಾಧಿಕಾರಿಗಳ ಅನುಮೋದನೆ ಬಾಕಿ ಇದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹೇಳಿದರು.
ತಾವು ಈಗಾಗಲೇ ಅನುಮೋದನೆ ನೀಡಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದಾಗ, ಇಂದೇ ಟೆಂಡರ್ ಕರೆಯುವುದಾಗಿ ಮುದಜ್ಜಿ ಹೇಳಿದರು. ನಗರವನ್ನು ಸ್ವಚ್ಛವಾಗಿಡುವಲ್ಲಿ ಆಯುಕ್ತರ ಪಾತ್ರ ಮಹತ್ವದ್ದು, ನಿರ್ಲಕ್ಷ್ಯ ವಹಿಸದೆ ಶೀಘ್ರ ಕ್ರಮ ಕೈಗೊಳ್ಳಿ ಎಂದರು.
ನೀರುಗಂಟಿಗಳಿಗೆ ಹಣ-ಕ್ರಮಕ್ಕೆ ಸೂಚನೆ: ಶುದ್ಧ ನೀರಿನ ಘಟಕಗಳಿಗೆ ಸ್ಥಳೀಯ ನೀರು ಗಂಟಿಗಳು ನೀರು ಪೂರೈಕೆ ಮಾಡುತ್ತಿಲ್ಲ. ಗುತ್ತಿಗೆದಾರರು ನೀರು ಗಂಟಿಗಳಿಗೆ ಹಣ ನೀಡಿ ನೀರು ಪಡೆದುಕೊಳ್ಳುತ್ತಿದ್ದಾರೆ ಎಂದು ನ್ಯಾಮತಿ ತಾ.ಪಂ. ಅಧ್ಯಕ್ಷರು ದೂರಿದರು. ನ್ಯಾಮತಿ ಶುದ್ಧ ನೀರಿನ ಘಟಕದಲ್ಲಿ ಕಳೆದ ಒಂದು ವರ್ಷದಿಂದಲೂ 5 ರೂ. ಪಡೆಯಲಾಗುತ್ತಿದೆ ಎಂದರು.
ಹಳೆಯ ಟೆಂಡರ್ ಪ್ರಕಾರ ಅವರು 2 ರೂ.ಪಡೆಯಬೇಕು. ಇಲ್ಲಿಯವರೆಗೆ ಪಡೆದ ಹೆಚ್ಚು ಹಣವನ್ನು ವಸೂಲಿ ಮಾಡಿ ಗ್ರಾಮ ಪಂಚಾಯ್ತಿಗೆ ಜಮಾ ಮಾಡುವಂತೆ ಕ್ರಮ ಕೈಗೊಳ್ಳಿ ಎಂದ ಸಂಸದರು, ಹಣ ಪಡೆಯುವ ನೀರು ಗಂಟಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.
ಅಲ್ಪಸಂಖ್ಯಾತರಿಲ್ಲದ ಹಳ್ಳಿಗಳಲ್ಲಿ ? : ಪ್ರಧಾನಮಂತ್ರಿ ಆವಾಸ್ ಯೋಜನೆ ಯೋಜನೆಯಡಿ ಹಳ್ಳಿಗಳಲ್ಲಿ ಅಲ್ಪಸಂಖ್ಯಾತರಿಗೆಂದು ಮನೆಗಳನ್ನು ಮೀಸಲಿಡಲಾಗುತ್ತದೆ. ಅನೇಕ ಹಳ್ಳಿಗಳಲ್ಲಿ ಅಲ್ಪಸಂಖ್ಯಾತರಿಲ್ಲ. ಕಾರಣ ಅವರ ಪಾಲಿನ ಮನೆಗಳನ್ನು ಬಡ ವರ್ಗದ ಜನತೆಗೆ ನೀಡುವಂತಾಗಬೇಕು ಎಂದು ದಾವಣಗೆರೆ ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು.
ಸಂಸದ ಸಿದ್ದೇಶ್ವರ ಅವರು, ಅಲ್ಪಸಂಖ್ಯಾತರಿಲ್ಲದ ಹಳ್ಳಿಗಳ ಲಿಸ್ಟ್ ತಯಾರಿಸಿ, ಜಿ.ಪಂ.ಸಿಇಒ ಅವರಿಗೆ ನೀಡಿ. ಯೋಜನಾ ವ್ಯವಸ್ಥಾಪಕರೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆಂದರು.
ಜಲ್ ಜೀವನ ಮಿಷನ್ ಎಲ್ಲಾ ಗ್ರಾಮದ ಮನೆಗಳಿಗೂ ಕಡ್ಡಾಯ: ಜಲ ಜೀವನ ಮಿಷನ್ ಯೋಜನೆಯಡಿ ನೀರು ಪೂರೈಕೆ ಪಡೆಯಲು ಕೆಲ ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ. ನಮಗೆ ಹಳೆಯ ಪದ್ಧತಿಯೇ ಇರಲಿ ಎಂದು ಹೇಳುತ್ತಿದ್ದಾರೆ ಎಂದು ಚನ್ನಗಿರಿ ತಾ.ಪಂ. ಅಧ್ಯಕ್ಷರು ಪ್ರಸ್ತಾಪಿಸಿದರು.
ನೀರಿನ ಅತಿ ಬಳಕೆಗೆ ಕಡಿವಾಣ ಹಾಕಲು ಹಾಗೂ ಎಲ್ಲರಿಗೂ ನೀರು ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ಬಂದಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಯೋಜನೆ ಉಪಯೋಗ ಪಡೆಯಬೇಕಿದೆ ಎಂದು ಸಿಇಒ ಪದ್ಮಾ ಬಸವಂತಪ್ಪ ಹೇಳಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ಮೀಟರ್ ಅಳವಡಿಕೆ ಕಡ್ಡಾಯವಾಗಿದ್ದು, ಹಣ ಕಟ್ಟಲೇ ಬೇಕಿದೆ ಎಂದರು.
ಬಿಎಸ್‌ಎನ್‌ಎಲ್ ನೆಟ್ ವರ್ಕ್ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಂಸದರು ಎಂದಿನಂತೆಯೇ ಇಂದೂ ಸಹ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಾಂತಕುಮಾರಿ ಕೆ.ವಿ, ದಿಶಾ ವಿಚಕ್ಷಣಾ ಸಮಿತಿ ಸದಸ್ಯರು, ತಾ.ಪಂ. ಅಧ್ಯಕ್ಷರು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.