ಐದನೇ ದಿನದ ಪಾದಯಾತ್ರೆಯಲ್ಲಿ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ
ದಾವಣಗೆರೆ, ಜ.19 – ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡಬೇಕೆಂದು ತಾವು ಆರಂಭಿಸಿರುವ ಪಾದಯಾತ್ರೆಗೆ ಅಭೂತಪೂರ್ವವಾಗಿ ಸ್ವಾಗತ ಸಿಗುತ್ತಿದೆ ಎಂದಿರುವ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜಾನಂದಪುರಿ ಸ್ವಾಮೀಜಿ, ಸಮಾಜಕ್ಕೆ ಎಸ್.ಟಿ. ಸ್ಥಾನ ಸಿಗುವುದು ಸೂರ್ಯ ಹುಟ್ಟುವಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಗಿನೆಲೆಯಿಂದ ಆರಂಭವಾದ ಪಾದಯಾತ್ರೆಯು ಐದನೇ ದಿನ ಸಂಜೆ ನಗರಕ್ಕೆ ತಲುಪಿತ್ತು. ಈ ಸಂದರ್ಭದಲ್ಲಿ ಮೆರವಣಿಗೆಯ ನಂತರ ಬೀರಲಿಂಗೇಶ್ವರ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಶ್ರೀಗಳು ಮಾತನಾಡುತ್ತಿದ್ದರು.
ಕುರುಬ ಸಮಾಜದ ಎಂಟು ವರ್ಷದ ಮಗುವಿನಿಂದ ಹಿಡಿದು, ಯುವಕರಾದಿಯಾಗಿ 80 ವರ್ಷದ ವೃದ್ಧರವರೆಗೆ ಎಲ್ಲರೂ ಪಾದಯಾತ್ರೆಗೆ ಬೆಂಬಲಿಸುತ್ತಿದ್ದಾರೆ, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪಾದಯಾತ್ರೆ ಕುರುಬ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಪರವಾಗಿದೆ. ಯಾವುದೇ ವ್ಯಕ್ತಿ, ಇಲ್ಲವೇ ಪಕ್ಷದ ಪರ ಅಥವಾ ವಿರುದ್ಧವಲ್ಲ ಎಂದು ಶ್ರೀಗಳು ಹೇಳಿದರು.
ಮೀಸಲಾತಿ ಹೋರಾಟದ ಹಿಂದೆ ಆರ್.ಎಸ್.ಎಸ್. ಪಾತ್ರವಿದೆ ಎಂಬ ಟೀಕೆಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಶ್ರೀಗಳು, ಯಾವುದೋ ಸಂಘ – ಸಂಸ್ಥೆಯಿಂದ ಹೋರಾಟಕ್ಕೆ ಹಣ ಬಂದಿಲ್ಲ. ಸಮಾಜದ ಕುರುಬರು ಕುರಿಗಳನ್ನು ಮಾರಿ ದೇಣಿಗೆ ನೀಡಿದ್ದಾರೆ. ಪ್ರತಿ ಹಳ್ಳಿಯಲ್ಲಿ – ಜಿಲ್ಲೆಯಲ್ಲಿ ಬಂದಿರುವ ದೇಣಿಗೆಯ ಹಣದ ಬಗ್ಗೆ ಪಾದಯಾತ್ರೆಯ ನಂತರ ಮಾಧ್ಯಮಗಳ ಎದುರು ವಿವರಗಳನ್ನು ನೀಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಸಮಾಜದ ಮುಖಂಡ ಕೆ.ಎಸ್. ಈಶ್ವರಪ್ಪ, ಕುರುಬರ ಜೊತೆಗೆ ತಮಗೂ ಎಸ್.ಟಿ. ಮೀಸಲಾತಿ ಕಲ್ಪಿಸಬೇಕೆಂದು ಉಪ್ಪಾರ ಹಾಗೂ ಕೋಳಿ ಸಮುದಾಯದವರು ಕೇಳಿದ್ದಾರೆ. ಕುರುಬರು ಸ್ವಾರ್ಥಿಗಳಲ್ಲ. ಅರ್ಹ ಎಲ್ಲರ ಮೀಸಲಾತಿಗಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಉಪ್ಪಾರ ಸಮಾಜದ ಅಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ ಅವರು ಕುರುಬ ಸಮುದಾಯದ ಮೀಸಲಾತಿ ಹೋರಾಟವನ್ನು ಬೆಂಬಲಿಸುವುದಾಗಿ ತಿಳಿಸಿದರು. ಉಪ್ಪಾರ ಸಮಾಜದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಬೆಂಬಲದ ಮನವಿಯನ್ನು ಶ್ರೀ ನಿರಂಜನಾನಂದಪುರಿ ಶ್ರೀಗಳಿಗೆ ನೀಡಿದರು.
ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕುರುಬರು ಭಾರತದ ಮೂಲ ನಿವಾಸಿಗಳು ಎಂಬುದನ್ನು ವಿದೇಶಿ ಸಂಶೋಧಕರು ತಿಳಿಸಿ ಕೊಟ್ಟಿದ್ದಾರೆ. ಇಷ್ಟಾದರೂ ಕುರುಬರು ಎಸ್.ಟಿ. ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಶಕ್ತಿ ಪ್ರದರ್ಶನ ನೋಡಿಯಾದರೂ ಮೀಸಲಾತಿ ಕಲ್ಪಿಸಲಿ ಎಂದು ಒತ್ತಾಯಿಸಿದರು.
ನಾವು ಕಿಂಗ್ಮೇಕರ್, ಕಿಂಗ್ ಆಗುವುದಿಲ್ಲ
ನಾವು ಕಿಂಗ್ಮೇಕರ್ ಆಗುತ್ತೇವೆಯೇ ಹೊರತು, ಕಿಂಗ್ ಆಗುವುದಿಲ್ಲ ಎಂದಿರುವ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾಂದಪುರಿ ಸ್ವಾಮೀಜಿ, ತಾವು ರಾಜಕೀಯ ಪ್ರವೇಶಿಸುವ ಸಾಧ್ಯತೆಯೇ ಇಲ್ಲ ಎಂದಿದ್ದಾರೆ.
ಎಸ್.ಟಿ. ಹೋರಾಟ ಆರಂಭಿಸಿದ ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಶಾಸಕ ಇಲ್ಲವೇ ಸಂಸದರನ್ನಾಗಿ ಮಾಡುವುದಾಗಿ ಹೇಳುವ ವಿಡಿಯೋ ಹರಿದಾಡುತ್ತಿದೆ. ಆದರೆ, ತಾವು ಕಿಂಗ್ಮೇಕರ್ ಆಗುತ್ತೇವೆಯೇ ವಿನಃ ಕಿಂಗ್ ಅಲ್ಲ ಎಂದಿದ್ದಾರೆ. ಎಸ್.ಟಿ. ಹೋರಾಟದ ಸಂದರ್ಭದಲ್ಲಿ ಕೆಲವರು ಹಾಲುಮತ ಎಂಬ ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಇದರಿಂದಾಗಿ ಕೆಲ ಜೇನುಗಳು ಹಾರಿ ಹೋಗಿವೆ. ಆದರೆ, ಆ ಜೇನುಗಳೂ ಮುಂದೆ ವಾಪಸ್ ಬರಲಿವೆ. ಸಮಾಜಕ್ಕೆ ಎಸ್.ಟಿ. ಮೀಸಲಾತಿ ಎಂಬ ಜೇನುತುಪ್ಪ ಸಿಗಲಿದೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಎಸ್.ಟಿ. ಹೋರಾಟಕ್ಕೆ ಅನ್ಯಾಯ ಮಾಡಬಾರದು : ಈಶ್ವರಪ್ಪ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕುರುಬರ ಎಸ್.ಟಿ. ಹೋರಾಟಕ್ಕೆ ಬರಲಿ ಇಲ್ಲವೇ ಸುಮ್ಮನಿರಲಿ. ಆದರೆ, ಈ ಹೋ ರಾಟಕ್ಕೆ ಆರ್.ಎಸ್.ಎಸ್. ದುಡ್ಡು ಕೊಟ್ಟಿದೆ, ಇದಕ್ಕಾಗಿ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಸುಳ್ಳು ಹೇಳುವ ಮೂಲಕ ಸಮಾಜಕ್ಕೆ ಅನ್ಯಾಯ ಮಾಡಬಾರದು ಎಂದು ಗ್ರಾಮೀಣಾ ಭಿವೃದ್ಧಿ ಸಚಿವ ಹಾಗೂ ಕುರುಬ ಸಮಾಜದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸಮಾಜದವರು ಒಟ್ಟಿಗೆ ಎಸ್.ಟಿ. ನೀಡಬೇಕೆಂದು ಕೇಳಿದರೆ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮೀಸಲಾತಿ ನೀಡುವ ಮನಸ್ಸು ಬರುತ್ತದೆ. ಸಮಾಜದ ದನಿ ಒಡಕಾಗಬಾರದು ಎಂದು ತಿಳಿಸಿದರು.
ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಹೋರಾಟಕ್ಕೆ ಕೆಲವರು ಅಡ್ಡಗಾಲು ಹಾಕುವ ಯತ್ನ ನಡೆಸಿದ್ದಾರೆ. ಅವರಿಗೆ ಪಾದಯಾತ್ರೆಯಲ್ಲಿ ಸುನಾಮಿಯಂತೆ ಜನ ಬಂದು ಉತ್ತರ ಕೊಟ್ಟಿದ್ದಾರೆ. ಯಾರೇ ಆಗಲಿ ಸಮಾಜದ ಕಣ್ಣು ಕೀಳುವ ಕೆಲಸ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರೇವಣಸಿದ್ದೇಶ್ವರ ಮಠದ ಶ್ರೀ ರೇವಣಸಿದ್ದೇಶ್ವರ ಶಾಂತ ಸ್ವಾಮೀಜಿ, ಮಂಗಾಪುರದ ಶ್ರೀ ಸೋಮಲಿಂಗೇಶ್ವರ ಸ್ವಾಮೀಜಿ, ಮೈಲಾರದ ಗೊರವಯ್ಯ ರಾಮಪ್ಪ, ಬೆಂಗಳೂರಿನ ರೇವಣಸಿದ್ದೇಶ್ವರ ಮಠದ ಶ್ರೀ ಮುಕ್ತೇಶ್ವರ ಸ್ವಾಮೀಜಿ, ತುರುವಿಹಾಳದ ಅಮೋಘ ರೇವಣಸಿದ್ದೇಶ್ವರ ಮಠ ಶ್ರೀ ಮಾದಯ್ಯ ಸ್ವಾಮೀಜಿ, ಮನಗೂಳಿಯ ರೇವಣಸಿದ್ದೇಶ್ವರ ಮಠದ ಶ್ರೀ ಶರಭಯ್ಯ ಸ್ವಾಮೀಜಿ, ಹೊಸರಿತ್ತಿಯ ಗೋನಾಳ ಮಠದ ಶ್ರೀ ಸಂಗಯ್ಯ ಗುರುವಿನವರು, ಬೆಳ್ಳೂಡಿಯ ಮಹಾದೇವಯ್ಯ ಒಡೆಯರ್, ಬಸವನ ಬಾಗೇವಾಡಿಯ ಸಿದ್ದಲಿಂಗಯ್ಯ ಒಡೆಯರ್, ಗೋಕಾಕದ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಎಸ್.ಟಿ ಹೋರಾಟ ಸಮಿತಿಯ ಮುಖಂಡರಾದ ಕೊಳೇನಹಳ್ಳಿ ಸತೀಶ್, ಜೀವೇಶ್ವರಿ, ರವಿ ದಂಡಿನ, ರಾಜೇಂದ್ರಣ್ಣ, ಬಿ.ಟಿ. ವಿಜಯಾ, ರಾಜು ಮೌರ್ಯ, ಜಿ.ಪಂ. ಸದಸ್ಯರಾದ ಜಿ.ಸಿ. ನಿಂಗಪ್ಪ, ಜಯಶೀಲ, ಪಾಲಿಕೆ ಸದಸ್ಯರಾದ ಜಯಮ್ಮ, ಜೆ.ಎನ್. ಶ್ರೀನಿವಾಸ್, ಶ್ವೇತ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಶಿವಮೊಗ್ಗದ ಜಿ.ಪಂ. ಸದಸ್ಯ ಇ. ಕಾಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐರಣಿ ಚಂದ್ರು ಸ್ವಾಗತಗೀತೆ ಹಾಡಿದರು. ಅಣಬೇರು ಶಿವಮೂರ್ತಿ ನಿರೂಪಿಸಿದರು.