300 ವಿದ್ಯುತ್ ಚಾಲಿತ ಬಸ್‌ಗಳಿಗೆ ಶೀಘ್ರದಲ್ಲೇ ಚಾಲನೆ

ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ

ದಾವಣಗೆರೆ, ಜ. 18 – ಈ ತಿಂಗಳಲ್ಲೇ 300 ವಿದ್ಯುತ್ ಚಾಲಿತ ಬಸ್‌ಗಳಿಗೆ ಚಾಲನೆ ನೀಡಲಾಗುವುದು ಎಂದು ಉಪ ಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

120 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಾರಿಗೆ ನಿಗಮದ ಬಸ್ ನಿಲ್ದಾಣದ ಪುನರ್ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿದ್ಯುತ್ ಚಾಲಿತ ಬಸ್‌ಗೆ 2 ಕೋಟಿ ರೂ. ಬೆಲೆ ಇದೆ. ಕೇಂದ್ರ ಸರ್ಕಾರ ಪ್ರತಿ ಬಸ್‌ಗೆ 55 ಲಕ್ಷ ರೂ. ಸಬ್ಸಿಡಿ ನೀಡುತ್ತಿದೆ. ಈ ಬಸ್‌ಗಳನ್ನು ಖಾಸಗಿಯವರು ಸಬ್ಸಿಡಿ ಯೊಂದಿಗೆ ಖರೀದಿಸಲಿದ್ದಾರೆ. ಆ ಬಸ್‌ಗಳನ್ನು ಸಾರಿಗೆ ನಿಗಮ ಕಿಲೋಮೀಟರ್ ಗುತ್ತಿಗೆ ದರ ದಲ್ಲಿ ಪಡೆಯಲಿದೆ ಎಂದವರು ವಿವರಿಸಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ಪ್ರಾಯೋಗಿಕವಾಗಿ ಬಸ್‌ನಲ್ಲಿ ಪ್ರಯಾಣಿಸಲಾಗುವುದು. ಇದೇ ತಿಂಗಳು 300 ಬಸ್‌ಗಳ ಗುತ್ತಿಗೆ ಪಡೆಯಲಾಗು ವುದು ಎಂದವರು ಹೇಳಿದ್ದಾರೆ.

ಕಂಪನಿಯವರು ಸಬ್ಸಿಡಿ ಮೂಲಕ ಬಸ್ ಖರೀದಿ ಮಾಡಲಿದ್ದಾರೆ. ನಾವು ನಮ್ಮ ಚಾಲಕ ರನ್ನು ಬಳಸಿಕೊಂಡು ಬಸ್ ನಿರ್ವಹಿಸಲಿದ್ದೇವೆ. ಇದರಿಂದ ವಾಯುಮಾಲಿನ್ಯ ನಿಯಂತ್ರಣಕ್ಕೆ ನೆರವಾಗಲಿದೆ ಎಂದು ಸವದಿ ತಿಳಿಸಿದ್ದಾರೆ.

5 ಕಡೆ ತರಬೇತಿ : ಹೊಸ ವಿನ್ಯಾಸದ ಅಂತರರಾಷ್ಟ್ರೀಯ ಬಸ್‌ಗಳ ಚಾಲನೆ ತರಬೇತಿಗೆ ಹೊಳಲ್ಕೆರೆಯಲ್ಲಿ ಈಗಾಗಲೇ ಒಂದು ಸಂಸ್ಥೆ ಸ್ಥಾಪಿಸಲಾಗಿದೆ. ಇದೇ ರೀತಿಯ ಸಂಸ್ಥೆಗಳನ್ನು 4-5 ಕಡೆ ಸ್ಥಾಪಿಸಲಾಗುವುದು. ಇಲ್ಲಿ ವಿದ್ಯುತ್ ಚಾಲಿತ ಬಸ್‌ಗಳ  ಚಾಲನೆಯ ತರಬೇತಿಯೂ ಸಿಗಲಿದೆ ಎಂದು ಹೇಳಿದರು.

ಇಂಧನಕ್ಕೆ ಬಂಗಾರ : ಅಪಘಾತ ರಹಿತ ವಾಗಿ ಕಾರ್ಯ ನಿರ್ವಹಿಸುವ ಚಾಲಕರಿಗೆ ಬೆಳ್ಳಿ ಪದಕ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂಧನ ಉಳಿಕೆ ಮಾಡುವ ಚಾಲಕರಿಗೆ 11 ಗ್ರಾಂ ತೂಕದ ಬಂಗಾರದ ಪದಕ ನೀಡಲಾಗುವುದು ಎಂದು ಸವದಿ ಹೇಳಿದ್ದಾರೆ.

ಇಚ್ಛಾಶಕ್ತಿ ಇಲ್ಲದೇ ನಷ್ಟ : 2014ರ ನಂತರ ಡೀಸೆಲ್‌ನಿಂದ ಹಿಡಿದು ನೌಕರರ ವೇತನದವರೆಗೆ ಎಲ್ಲ ದರಗಳು ಹೆಚ್ಚಾಗಿವೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಬಸ್ ಪ್ರಯಾಣ ದರ ಹೆಚ್ಚಾಗಿಲ್ಲ. ಇದರಿಂದಾಗಿ ಸಾರಿಗೆ ನಿಗಮಗಳು ನಷ್ಟಕ್ಕೆ ಗುರಿಯಾಗಿವೆ. ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಂಡು ನಿಗಮಗಳನ್ನು ಲಾಭಕ್ಕೆ ತರಲಾಗುವುದು ಎಂದು ಸವದಿ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಪುನರ್ ನಿರ್ಮಾಣವಾಗಲಿರುವ ನಿಲ್ದಾಣ ರಾಜ್ಯಕ್ಕೇ ಮಾದರಿ ಆಗಬೇಕು. ಎರಡು ವರ್ಷಗಳಲ್ಲೇ ನಿರ್ಮಾಣ ಪೂರ್ಣವಾಗಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ವಾಹನ ಚಾಲಕರು ಮಾನಸಿಕ ಒತ್ತಡದಿಂದ ಮುಕ್ತವಾಗಿ ಬಸ್ ಚಲಾಯಿಸಬೇಕು. ಜನರು ನಿಮ್ಮನ್ನು ನಂಬಿ ವಾಹನವನ್ನು ಏರುತ್ತಾರೆ. ಇತ್ತೀಚೆಗೆ ಚಾಲಕನೊಬ್ಬನ ಅಜಾಗರೂಕತೆಯಿಂದ ನಗರದ 11 ಮಹಿಳೆಯರು ಸಾವನ್ನಪ್ಪಿದ್ದರು. ಇದು ಚಾಲಕರು ಜಾಗೃತಿ ವಹಿಸಬೇಕಾಗಿರುವುದು ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಮಾತನಾಡಿ, ಸಾರಿಗೆ ನಿಗಮ ಈಗ ಶಕ್ತಿ ಇಲ್ಲದ ಸ್ಥಿತಿಯಲ್ಲಿದೆ. ಸ್ಮಾರ್ಟ್ ಸಿಟಿ ಮೂಲಕ ಸಾರಿಗೆ ಸೌಲಭ್ಯ ಕಲ್ಪಿಸಲು ಸಂಸದ ಸಿದ್ದೇಶ್ವರ ಇನ್ನಷ್ಟು ಶ್ರಮಿಸಬೇಕು ಎಂದು ಕೇಳಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಲಿಡ್ಕರ್ ಅಧ್ಯಕ್ಷ ಹಾಗೂ ಶಾಸಕ ಪ್ರೊ.ಎನ್. ಲಿಂಗಣ್ಣ, ಜಿ.ಪಂ. ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸಾರಿಗೆ ನಿಗಮದ ಉಪಾಧ್ಯಕ್ಷ ಎಸ್.ಎನ್. ಈಶ್ವರಪ್ಪ, ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ, ಪಾಲಿಕೆ ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಎಎಸ್‌ಪಿ ಎಂ.ರಾಜೀವ್, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!