ದಾವಣಗೆರೆ, ಜ. 18 – ನಗರದ ಕುಂದುವಾಡ ಕೆರೆಯನ್ನು 15 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ವೇಳೆ ಕೆರೆಯನ್ನು ಗಟ್ಟಿ ಮಾಡಲಾಗುವುದೇ ಹೊರತು, ಕಾಂಕ್ರೀಟೀಕರಣ ಮಾಡುತ್ತಿಲ್ಲ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಸ್ಪಷ್ಟಪಡಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿರುವ ಅವರು, ಕೆಲವರು ಮಾತನಾಡುತ್ತಿರುವ ಹಾಗೆ ಕುಂದುವಾಡ ಕೆರೆಯ ತಳಕ್ಕೆ ಇಲ್ಲವೇ ಕೆರೆಯ ದಂಡೆಗೆ ಕಾಂಕ್ರೀಟ್ ಹಾಕುವ ಕೆಲಸ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೆರೆಯ ದಂಡೆಯನ್ನು ಸೀಳುತ್ತಿಲ್ಲ. ದಂಡೆಯ ಒಳಭಾಗದಲ್ಲಿ ದುರ್ಬಲ ಆಗಿರುವ ಕಡೆ ಸರಿ ಪಡಿಸಲಾಗುತ್ತಿದೆ. ಈ ಭಾಗದಲ್ಲಿ ಕಲ್ಲು ಚಪ್ಪಡಿ ತೆಗೆದು ಮರು ಹೊಂದಿಕೆ ಮಾಡುತ್ತೇವೆ. ಇದೇ ಕಾಮಗಾರಿಯ ಮೂಲ ಉದ್ದೇಶ ಎಂದವರು ವಿವರಿಸಿದ್ದಾರೆ.
ಮುಳ್ಳು ಕಂಟಿಗಳನ್ನು ತೆಗೆಸುತ್ತೇವೆ. ಇರುವ ಕಲ್ಲು ಚಪ್ಪಡಿಗಳನ್ನು ಮರು ಹೊಂದಿಕೆ ಮಾಡುತ್ತೇವೆ. ಇನ್ನು 5 – 10 ವರ್ಷ ಮತ್ತೆ ಅಲ್ಲಿ ಗಿಡ ಗಂಟಿ ಬರದ ರೀತಿಯಲ್ಲಿ ಸಿಮೆಂಟ್ ಹೊದಿಕೆ ಹಾಕುತ್ತೇವೆ ಎಂದವರು ಹೇಳಿದ್ದಾರೆ.
ಕೆರೆಯ ಕುಂದುವಾಡದ ಕಡೆಯ ಏರಿಯ ಕಡೆ ನೀರು ಸೋರುತ್ತಿದೆ. ಆ ಭಾಗವನ್ನು ಬಲಗೊಳಿಸಲಾಗುವುದು ಎಂದು ಮಲ್ಲಾಪುರ ಹೇಳಿದ್ದಾರೆ.
ನಗರದ ಜನತೆಗೆ ನೀರು ಪೂರೈಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆರೆಯಲ್ಲಿ ಬೇಸಿಗೆಗೆ ನೀರು ಖಾಲಿ ಆಗಿದೆ. ಆನಂತರ ನಗರ ಪಾಲಿಕೆಯವರು ಕೆರೆಯನ್ನು ಕೊಟ್ಟಿದ್ದಾರೆ.
ಮಳೆಗಾಲದ ಒಳಗೆ ಕೆರೆಯ ಏರಿ ಅಭಿವೃದ್ಧಿ ಪಡಿಸುತ್ತೇವೆ. ನಂತರ ಕೆರೆಯನ್ನು ನೀರು ತುಂಬಿಕೊಳ್ಳಲು ಪಾಲಿಕೆಗೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಆನಂತರದಲ್ಲಿ ಕೆರೆಗೆ ಸಂಬಂಧಿಸಿದ ಉಳಿದ ಕಾಮಗಾರಿಗಳನ್ನು ನಿರ್ವಹಿಸಲಾ ಗುವುದು ಎಂದವರು ಹೇಳಿದ್ದಾರೆ.
ಕೆರೆಯ ಕಾಮಗಾರಿಯಿಂದ ಅಲ್ಲಿರುವ ಪ್ರಾಣಿ – ಪಕ್ಷಿಗಳಿಗೆ ತೊಂದರೆಯಾಗಲಿದೆ ಎಂಬ ವಾದವನ್ನು ಇದೇ ವೇಳೆ ತಳ್ಳಿ ಹಾಕಿರುವ ಅವರು, ಒಂದು ಬಾರಿ ಕೆರೆ ಒಣಗಿದರೂ ಸಹ ಪ್ರಾಣಿ – ಪಕ್ಷಿಗಳು ಅದರದ್ದೇ ಆದ ದಾರಿ ಮಾಡಿಕೊಂಡಿರುತ್ತವೆ ಎಂದು ತಿಳಿಸಿದರು.