ಸಮಾಜದಲ್ಲಿ ಪ್ರಗತಿ ಕಾಣಲು ಆಶೀರ್ವಾದ ಮುಖ್ಯ

ಯುವ ಸಮಾವೇಶದಲ್ಲಿ ನಟ ಪುನೀತ್ ರಾಜ್‌ಕುಮಾರ್

ಹರಿಹರ, ಜ.15- ಧಾರ್ಮಿಕ ವಾಗಿ, ಸಾಮಾಜಿಕವಾಗಿ ಸಮಾಜದಲ್ಲಿ ಪ್ರಗತಿ ಕಾಣಲು ತಂದೆ-ತಾಯಿ ಮತ್ತು ಶ್ರೀಗಳ ಆಶೀರ್ವಾದ ಬಹು ಮುಖ್ಯವಾಗಿರುತ್ತದೆ ಎಂದು ಖ್ಯಾತ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಹೇಳಿದರು.

ನಗರದ ಹೊರವಲಯದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ನಡೆಯುತ್ತಿರುವ ಹರ ಜಾತ್ರಾ ಮಹೋತ್ಸವ ಸಮಾರಂಭದ ಯುವ ಸಮಾವೇಶದಲ್ಲಿ ಪುನೀತ್ ಯುವ ರತ್ನ ಸಂದೇಶವನ್ನು ನೀಡಿದರು. 

ಸಮಾಜದಲ್ಲಿ ಬಹು ಮುಖ್ಯವಾಗಿ ನಂಬಿಕೆ ಇರಬೇಕು. ನಮ್ಮ ಮನೆ, ಸಮಾಜದಲ್ಲಿ ಮತ್ತು ನೆರೆಹೊರೆಯಲ್ಲಿ ನಮ್ಮ ಮೇಲೆ ನಂಬಿಕೆ ಚೆನ್ನಾಗಿದ್ದರೆ ನಾವುಗಳು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ. ಪುಟ್ಟ ಸಸಿಯನ್ನು ರಕ್ಷಿಸಿ, ಪೋಷಿಸಿದರೆ ಅದು ದೊಡ್ಡ ಮರವಾಗಿ ಬೆಳೆಯುತ್ತದೆ. ಹಾಗೆ ಯುವಕರು ಸಣ್ಣದಾಗಿ ಮಾಡಿದ ಕೆಲಸ ಮುಂದೆ ದೊಡ್ಡದಾಗಿ ಅಭಿವೃದ್ಧಿ ಹೊಂದಲಿದೆ ಎಂಬ ಆಶಯವನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ಹೆಜ್ಜೆಗಳನ್ನು ಹಾಕಿದಾಗ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಹೇಳಿದರು.

 ದಿಕ್ಸೂಚಿ ಭಾಷಣ ಮಾಡಿದ ಅವಧೂತ ವಿನಯ್ ಗುರೂಜೀ ಮಾತನಾಡಿ ಯಾವ ವ್ಯಕ್ತಿ ಲಿಂಗವನ್ನು ಧರಿಸುತ್ತಾರೆಯೋ  ಆ ವ್ಯಕ್ತಿ ದೇವಸ್ಥಾನದಂತೆ. ಲಿಂಗವಂತರಿಗೆ ಸೂತಕ ಎಂಬುದು ಇಲ್ಲ. ಅಲ್ಲಮಪ್ರಭು ಸಮಾಜಕ್ಕೆ ಬೆಳಕನ್ನು ತೋರಿಸಿದರು. ಅಕ್ಕಮಹಾದೇವಿ ಊಟವನ್ನು ಬಡಿಸಿದರು. ಬಸವಣ್ಣನವರು ಜಾತಿಯ ಬೇರನ್ನು ಕಿತ್ತು, ಬಡವ ಬಲ್ಲಿದನೆಂಬ ನೀತಿಯನ್ನು ಬಿಟ್ಟು ಶ್ರೀಮಂತಿಕೆಯ ಅಹಂಕಾರ ಕಿತ್ತು ನಾವೆಲ್ಲ ಶಿವನ ಮಕ್ಕಳು ಎಂದು ಜಗತ್ತಿಗೆ ಒಳಿತನ್ನು ಮಾಡಿದರು.

ಶಿವತತ್ವದ ಮೂಲಕ ಮೂಢನಂಬಿಕೆ ಕಿತ್ತು ಹಾಕಿ, ಪ್ರಪಂಚದಲ್ಲಿನ ಅಂಧಕಾರವನ್ನು ತೊಳೆದು ಜ್ಞಾನದ ಜ್ಯೋತಿಯನ್ನು ಬೆಳಗಿಸಿದ್ದು ಬಸವಣ್ಣನವರು. ಸ್ವಾಭಿಮಾನದ ಕರ್ಮ ಯೋಗವನ್ನು ಮತ್ತು ಕಾಯಕದ ಪಾಠವನ್ನು ಹಾಗೂ ಅಧ್ಯಾತ್ಮಿಕ ಇಷ್ಟಲಿಂಗ ಪೂಜೆಯ ಪಾಠ ವನ್ನು ಮಾಡುವ ಮೂಲಕ ಸಮಾಜದಲ್ಲಿ ಸುಧಾ ರಣೆ ತರುವ ಕೆಲಸವನ್ನು ಬಸವಣ್ಣ ಮಾಡಿದರು.

ಚಲನಚಿತ್ರ ನಟ ಪುನೀತ್ ರಾಜಕುಮಾರ್ ಹರ ಜಾತ್ರಾ ಮಹೋತ್ಸವ ವೇದಿಕೆಗೆ ಆಗಮಿಸುತ್ತಿದ್ದಂತೆ, ಸಾರ್ವಜನಿಕರು ಶಿಳ್ಳೆ, ಕೇಕೆ ಹಾಕಿ ಜೈಕಾರದೊಂದಿಗೆ ಸ್ವಾಗತಿಸಿದರು. ಸಮಾರಂಭದಲ್ಲಿ ಯಾವುದೇ ರೀತಿಯ ಅವಘಡ ನಡೆಯದಂತೆ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಪುಟ್ಟ ಬಾಲಕ ಅರ್ಜುನ ಇಟ್ಟಿಗೆ ಪುನೀತ್ ರಾಜ್‍ಕುಮಾರ್  ಅವರ ಹಾಡು ಗಳನ್ನು ಹಾಡಿ ರಂಜಿಸಿದರು.

ಶಾಸ್ತ್ರ ಅಂದರೆ ಹತ್ತು ಕುರುಡು ವ್ಯಕ್ತಿಗಳು ಅವರ ವಿವೇಚನೆಗೆ ತಕ್ಕಂತೆ ಬರೆದಾಗ ಅದು ಒಂದು ಪುಸ್ತಕವಾಗುತ್ತದೆ. ಜೀವಂತ ಅನುಭವ ವನ್ನು ಕಲಿಯಬೇಕಾದರೆ ಬಸವಣ್ಣ, ಅಕ್ಕಮಹಾ ದೇವಿ, ಅಲ್ಲಮಪ್ರಭುಗಳಿಂದ ಮಾತ್ರ ಸಾಧ್ಯ. ಹಿಂದಿನ ಕಾಲದಲ್ಲಿ ಎಡಗೈ ಬಹು ಕೆಟ್ಟದಾದ ಕೈ ಎಂಬ ಪದ್ಧತಿ ಇತ್ತು. ಆದರೆ ಇದು ಶಿವನ ವಾಯುಭಾಗ. ಅದರಲ್ಲಿ ಇಷ್ಟಲಿಂಗ ಇಟ್ಟು ಅದು ಶಿವ ಶಕ್ತಿ ಸಂಯೋಗವಾಗಬೇಕು. ಅದನ್ನು ತೋರಿಸಿದ ಬಸವಣ್ಣ ಅದರಿಂದ ನಿನ್ನ ಆತ್ಮಲಿಂಗ ವನ್ನು ನೋಡಿಕೊಳ್ಳಿ ಎಂದು ತಿಳಿಸಿದರು.

ಈ ಸಮುದಾಯದ ಹೆಣ್ಣು ಮಕ್ಕಳು ಸಹ ಅಷ್ಟೇ ಪ್ರಭಾವಿಗಳು. ಖಡ್ಗವನ್ನು ಹಿಡಿದರೆ ಪ್ರಪಂಚವನ್ನು ಬದಲಾವಣೆ ಮಾಡುತ್ತಾಳೆ, ಲೇಖನಿ ಹಿಡಿದರೆ ಮನುಷ್ಯನ  ಅಜ್ಞಾನವನ್ನು ಹೋಗಲಾಡಿಸುತ್ತಾರೆ. ಗೃಹಿಣಿ ಅಂದರೆ ಗೃಹ ಲಕ್ಷ್ಮಿ ಆಗುತ್ತಾರೆ ಎಂದರು. 

ಹರ ಜಾತ್ರೆಯು ಜಾತ್ರೆ ಆಚರಣೆಗೆ ಮಾತ್ರ ಸೀಮಿತವಾಗದೆ ಎಲ್ಲರೂ ಪ್ರತಿದಿನ ಇಷ್ಟಲಿಂಗ ಪೂಜೆ ಮಾಡಬೇಕು. ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ. ಜಾತಿ ಎಂಬ ಬೇಲಿಯನ್ನು ಕಿತ್ತು ಹಾಕಿ ಜಗತ್ತನ್ನು ಶಿವಮಯ ಮಾಡುತ್ತೇನೆ ಎಂದು ಅಂದುಕೊಂಡು ಮಾತ್ರ ಸಮಾರಂಭದಲ್ಲಿ  ಭಾಗವಹಿಸಿದ್ದು ಸಾರ್ಥಕವಾಗುತ್ತದೆ ಎಂದರು.

ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಶ್ರೀಗಳು ಯುವ ಸಮಾವೇಶಕ್ಕೆ ಆಗಮಿಸಿದ ಪುನೀತ್ ರಾಜ್‍ಕುಮಾರ್, ಅವಧೂತ ವಿನಯ್ ಗುರೂಜೀ, ಸೇರಿದಂತೆ ಸಮಾವೇಶ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ತಮ್ಮ ಭಾಷಣದ ಮೂಲಕ ಆಶೀರ್ವಾದ ಮಾಡಿದರು.  

ಸಮಾರಂಭದ ಅಧ್ಯಕ್ಷತೆಯನ್ನು ಹರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ. ಲೋಕೇಶ್ ವಹಿಸಿದ್ದರು.

ಆಧುನಿಕ ಕೃಷಿ ಯುವ ನಾಯಕ ಶಶಿ ಕುಮಾರ್, ರಾಣೇಬೆನ್ನೂರು ಶಾಸಕ ಅರುಣ್ ಕುಮಾರ್, ಮುನಿರತ್ನ, ದಾವಣಗೆರೆ ಮಹಾ ಪೌರ ಬಿ.ಜಿ. ಅಜಯಕುಮಾರ್,   ನಿಷಾ ಯೋಗೀಶ್ವರ್, ಸಂಯುಕ್ತ ಪಾಟೀಲ್, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ರುದ್ರೇಶ್,  ಬಸವರಾಜ್ ದಿಂಡೂರು, ಪಂಚಮಸಾಲಿ ರಾಜ್ಯ. ಮಹಿಳಾ ಘಟಕದ ಅಧ್ಯಕೆ ನಾಗರತ್ನ, ಬಾವಿಕಟ್ಟಿ, ಬಿ.ಸಿ. ಉಮಾಪತಿ, ಬಾವಿ ಬೆಟ್ಟಪ್ಪ, ಯುವ ನಾಯಕ ಹೆಚ್.ಎಸ್. ನಾಗರಾಜ್, ಜಿಪಂ ಸದಸ್ಯ ತೇಜಸ್ವಿ ಪಟೇಲ್, ಸಂತೋಷ ಪಟೇಲ್,  ಶ್ರೀಕಾಂತ ದುಂಡಿಗೌಡ್ರು, ಮಲ್ಲಿಕಾರ್ಜುನ ಹಾವೇರಿ, ಗೀತಾ ರವಿಂದ್ರ, ಮಂಜುನಾಥ ನವಲಗುಂದ ಇತರರು ಹಾಜರಿದ್ದರು.


ಎಂ. ಚಿದಾನಂದ ಕಂಚಿಕೇರಿ,
[email protected]

error: Content is protected !!