ಶಾಲಾ-ಕಾಲೇಜುಗಳ ಸಹಪಾಠಿಗಳಾಗಿದ್ದ 15 ಜನರು ಗೋವಾ ಪ್ರವಾಸಕ್ಕೆ ಹೊರಟಾಗ ಧಾರವಾಡದ ಬಳಿ ಸಂಭವಿಸಿದ ಅಪಘಾತ
ಧಾರವಾಡ,ಜ.15- ಇಲ್ಲಿನ ಬೈಪಾಸ್ ರಸ್ತೆಯ ಇಟ್ಟಿಗಟ್ಟಿ ಗ್ರಾಮದ ಸಮೀಪದ ಸ್ವರ್ಗ ಫಾರ್ಮ್ ಹೌಸ್ ಹತ್ತಿರ ಇಂದು ಮುಂಜಾನೆ 7ರ ಸಮಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆಯ 9 ಜನ ಮಹಿಳೆಯರು ಸೇರಿದಂತೆ ಒಟ್ಟು 11 ಜನರು ಸಾವಿಗೀಡಾಗಿದ್ದು, 6 ಜನರು ಗಾಯಗೊಂಡಿದ್ದಾರೆ.
ದಾವಣಗೆರೆಯಿಂದ ಗೋವಾಕ್ಕೆ ಚಲಿಸುತ್ತಿದ್ದ ಕೆಎ 64 – 1316 ಸಂಖ್ಯೆಯ ಮಿನಿ ಬಸ್ ಮತ್ತು ಕೆಎ 22-ಸಿ 1649 ಸಂಖ್ಯೆಯ ಟಿಪ್ಪರ್ ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಮಿನಿ ಬಸ್ ಮತ್ತು ಲಾರಿ ಎರಡೂ ನಜ್ಜುಗುಜ್ಜಾಗಿವೆ.
ಶ್ರೀಮತಿ ಪ್ರೀತಿ ರವಿಕುಮಾರ್ (46), ಶ್ರೀಮತಿ ಪರಂಜ್ಯೋತಿ ಶಶಿಧರ (47), ಶ್ರೀಮತಿ ವರ್ಷಿತಾ ವೀರೇಶ್ (46), ಶ್ರೀಮತಿ ಮಂಜುಳಾ ನಟೇಶ್ ಜಿ.ಬಿ. (47), ಶ್ರೀಮತಿ ರಾಜೇಶ್ವರಿ ಶಿವಕುಮಾರ್ ಬಂದಮ್ಮನವರ್ (46), ಡಾ. ವೀಣಾ ಮತ್ತಿಹಳ್ಳಿ ಪ್ರಕಾಶ್ (47), ಶ್ರೀಮತಿ ಮಾನಸಿ (ಹೇಮಲತಾ) (48), ಕು. ಯಶ್ಮತಾ (18) ಮತ್ತು ಕ್ಷರಾ ತಂದೆ ಸುರೇಶ್ ಬಾಬು ಪೊರಾಳ್ (21) ರಸ್ತೆ ಅಪಘಾತದಲ್ಲಿ ಮಡಿದ ದುರ್ದೈವಿಗಳು.
ಮಿನಿ ಬಸ್ ಚಾಲಕ ರಾಣೇಬೆನ್ನೂರಿನ ರಾಜು ಸೋಮಪ್ಪ ಗೊರಬಣ್ಣನವರ್ (38) ಮತ್ತು ಮಿನಿ ಬಸ್ ನಿರ್ವಾಹಕ ರಾಣೇಬೆನ್ನೂರಿನ ಮಲ್ಲಿಕಾರ್ಜುನ ಉಡಗಟ್ಟಿ (27) ಅಪಘಾತದಲ್ಲಿ ಸತ್ತಿರುವ ಇತರರು.
ನಿರ್ಮಲಾ ಚಂದ್ರಶೇಖರ್ (46), ಆಶಾ ಜಗದೀಶ್ ಬೇತೂರು (47), ವೇದ ಮಂಜುನಾಥ (46), ಉಷಾರಾಣಿ ರಮೇಶ್ (46), ಪೂರ್ಣಿಮಾ ಸುರೇಶ್ ಬಾಬು (46), ಪ್ರವೀಣಾ ಪ್ರಕಾಶ್ (46) ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೊಂದಿಗೆ ಲಾರಿ ಚಾಲಕ ಬಸವರಾಜ ಈರಪ್ಪ ಖಾದರೊಳ್ಳಿ (25) ಕೂಡಾ ಗಾಯಗೊಂಡಿದ್ದಾನೆ.
ಪ್ರವಾಸ ಕೈಗೊಂಡಿದ್ದ ಎಲ್ಲಾ ಮಹಿಳೆಯರು ದಾವಣಗೆರೆಯ ಹೆಸರಾಂತ ಮನೆತನದವರಾಗಿದ್ದು, ಶಾಲಾ – ಕಾಲೇಜುಗಳ ಆತ್ಮೀಯ ಸಹಪಾಠಿಗಳಾಗಿದ್ದರು. ಪ್ರತಿ ವರ್ಷಕ್ಕೊಮ್ಮೆ ಪ್ರವಾಸ ಕೈಗೊಳ್ಳುತ್ತಿದ್ದ ಇವರು ಈ ಬಾರಿಯೂ ಮೂರು ದಿನಗಳ ಗೋವಾ ಪ್ರವಾಸವನ್ನು ಹಮ್ಮಿಕೊಂಡಿದ್ದರು. ಕೈಗೊಂಡಿರುವ ಸಿದ್ಧತೆಯಂತೆ ಇಂದು ಮುಂಜಾನೆ 3.45ರ ವೇಳೆಗೆ ದಾವಣಗೆರೆಯಿಂದ ಮಿನಿ ಬಸ್ ಹೊರಡುವ ಸಂದರ್ಭದಲ್ಲಿ ಎಲ್ಲರೂ ಸೇರಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದರು. ಬಸ್ ಧಾರವಾಡ ಸಮೀಪ ಹೋಗುತ್ತಿದ್ದಾಗ ಯಮನಂತೆ ಬಂದ ಟಿಪ್ಪರ್ ಲಾರಿ ಅಪ್ಪಳಿಸಿದ ಪರಿಣಾಮ ಮಿನಿ ಬಸ್ ಗುರುತು ಸಿಗದಷ್ಟು ಅಪ್ಪಚ್ಚಿಯಾಗಿದೆ.
ದುರಂತಕ್ಕೊಳಗಾದವರ ಇನ್ನಿಬ್ಬರು ಗೆಳತಿಯರು ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರು ನಿನ್ನೆಯೇ ವಿಮಾನದ ಮೂಲಕ ಗೋವಾಕ್ಕೆ ತೆರಳಿ ಹೋಟೆಲ್ ನಲ್ಲಿ ರೂಂ ಮಾಡಿಕೊಂಡು, ದಾವಣಗೆರೆಯ ಗೆಳತಿಯರ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿದಾಗ ವಿಷಯ ತಿಳಿದು ಆತಂಕಗೊಂಡರು.
ಮೃತರಿಗೆ ಪ್ರಧಾನಿ ಮೋದಿ ಸಂತಾಪ
ಧಾರವಾಡ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಗರದ ಮಹಿಳೆಯರು ಮೃತಪಟ್ಟಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ದುಃಖತಪ್ತ ಕುಟುಂಬಗಳ ನೋವಿನಲ್ಲಿ ನಾನೂ ಭಾಗಿಯಾಗುವುದಾಗಿ ಟ್ವೀಟ್ ಮೂಲಕ ಹೇಳಿರುವ ಪ್ರಧಾನಿ, ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಇಟ್ಟಿಗಟ್ಟಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿರುವ ಭೀಕರ ಅಪಘಾತದಲ್ಲಿ ಸಾವುಗಳು ಸಂಭವಿಸಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅಪಘಾತದಲ್ಲಿ ಗಾಯಗೊಂಡವರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಭೀಕರ ಅಪಘಾತದಲ್ಲಿ ಶಾಲಾ ಗೆಳತಿಯರ ನಿಧನ : ಗಣ್ಯರ ಸಂತಾಪ
ದಾವಣಗೆರೆ, ಜ.15- ಧಾರವಾಡ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಗರದ ಶಾಲಾ ಗೆಳತಿಯರು ದುರ್ಮರಣಕ್ಕಿಡಾಗಿದ್ದು, ಎಲ್ಲರ ನಿಧನಕ್ಕೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಗರ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ವೀರಶೈವ ಸಮಾಜದ ಮುಖಂಡ ಜೆ. ಸೋಮನಾಥ್ ಅವರುಗಳು ಮೃತರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಸಂಸದರು : ರಸ್ತೆ ಅಪಘಾತದಿಂದಾಗಿ ಉಂಟಾಗಿರುವ ಪ್ರಾಣಹಾನಿ ಅತ್ಯಂತ ನೋವಿನ ಸಂಗತಿ. ಈ ದುಃಖದ ಸಮಯದಲ್ಲಿ ಕುಟುಂಬಗಳೊಂದಿಗೆ ತಾವು ಸದಾ ಇದ್ದೇವೆ ಎಂದು ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಉಸ್ತುವಾರಿ ಸಚಿವರು : ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಎಲ್ಲರಿಗೂ ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತಪಟ್ಟಿರುವವರ ವಿವರ :
ಶ್ರೀಮತಿ ಪ್ರೀತಿ ಅವರು ದಾವಣಗೆರೆಯ ಆರೈಕೆ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಸ್ಪತ್ರೆಯ ವೈದ್ಯ ಡಾ.ರವಿಕುಮಾರ್ ಅವರ ಧರ್ಮಪತ್ನಿ. ಅಲ್ಲದೇ, ಜಗಳೂರು ಕ್ಷೇತ್ರದ ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಅವರ ಸೊಸೆ ಮತ್ತು ದಾವಣಗೆರೆಯ ಹೆಸರಾಂತ ಮನೆತನದ ದಿ. ಶಾಮನೂರು ಕಲ್ಲೇಶಪ್ಪ ಅವರ ಪುತ್ರಿ.
ಶ್ರೀಮತಿ ಪರಂಜ್ಯೋತಿ ಅವರು ತ್ಯಾವಣಗಿಯ ಜ್ಯೋತಿ ಪೆಟ್ರೋಲ್ ಬಂಕ್ ಮಾಲೀಕರಾಗಿದ್ದು, ದಾವಣಗೆರೆಯ ವರ್ತಕ ಶಶಿಧರ್ ಅವರ ಧರ್ಮಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಜೆ.ಹೆಚ್. ಪಟೇಲ್ ಮನೆತನದ ಮತ್ತು ದಿ. ವಾಣಿ ಮುರಿಗೆಪ್ಪ ಅವರ ಪುತ್ರಿ.
ಡಾ. ವೀಣಾ ಪ್ರಕಾಶ್ ಅವರು ದಾವಣಗೆರೆಯ ಜಜಮು ವೈದ್ಯಕೀಯ ಮಹಾವಿದ್ಯಾಲಯದ ಸ್ತ್ರೀ ರೋಗ ಮತ್ತು ಪ್ರಸೂತಿ ವಿಭಾಗದ ಪ್ರಾಧ್ಯಾಪಕರಾಗಿದ್ದು, ಅದೇ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಪ್ರಕಾಶ್ ಮತ್ತಿಹಳ್ಳಿ ಅವರ ಧರ್ಮಪತ್ನಿ ಮತ್ತು ಕೈಗಾರಿಕೋದ್ಯಮಿ ಮತ್ತಿಹಳ್ಳಿ ವೀರಣ್ಣ ಅವರ ಸೊಸೆ.
ಶ್ರೀಮತಿ ರಾಜೇಶ್ವರಿ ಅವರು ದಾವಣಗೆರೆಯ ವರ್ತಕ ಶಿವಕುಮಾರ್ ಬಂದಮ್ಮನವರ್ ಅವರ ಧರ್ಮ ಪತ್ನಿಯಾಗಿದ್ದು, ಹಿರಿಯ ಸಹಕಾರಿ ಧುರೀಣರಾಗಿದ್ದ ದಿ. ಅಂದನೂರು ಕೊಟ್ರಬಸಪ್ಪ (ಎಸಿಕೆ) ಅವರ ಸಹೋದರ ಅಂದನೂರು ಬಸವರಾಜಪ್ಪ ಅವರ ಪುತ್ರಿ.
ಶ್ರೀಮತಿ ವರ್ಷಿತಾ ಅವರು ದಾವಣಗೆರೆಯ ಶ್ರೀ ಸಂಗಮೇಶ್ವರ ಹಾರ್ಡ್ ವೇರ್ ಮಾಲೀಕ ವೀರೇಶ್ ಬಿರಾದಾರ್ ಅವರ ಧರ್ಮಪತ್ನಿಯಾಗಿದ್ದು, ಹೆಸರಾಂತ ಖಾಲಿ ಚೀಲ ವ್ಯಾಪಾರಿ ಮತ್ತು ಶ್ರೀ ಮಾತಾ ಮಾಣಿಕೇಶ್ವರಿ ಆಶ್ರಮದ ಅಮರಪ್ಪ ಅವರ ಪುತ್ರಿ.
ಶ್ರೀಮತಿ ಮಂಜುಳಾ ಅವರು ಜಿ.ಬಿ. ನಟೇಶ್ ಅವರ ಧರ್ಮಪತ್ನಿ.
ಡಾ. ಕಾಳಪ್ಪನವರ ಪುತ್ರಿ ಶ್ರೀಮತಿ ಮಾನಸಿ (ಹೇಮಲತಾ) ಮತ್ತು ಮಾನಸಿ ಅವರ ಪುತ್ರಿ ಕು. ಯಶ್ಮಿತಾ ಕ್ಷರಾ ಅವರು ಸುರೇಶ್ ಬಾಬು ಪೊರಾಳ್ ಅವರ ಪುತ್ರಿ.
ಗಾಯಗೊಂಡಿರುವವರ ಪೈಕಿ ತೀವ್ರ ಚಿಂತಾಜನಕ ಸ್ಥಿತಿಯಲ್ಲಿರುವ ವೇದಾ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿರ್ಮಲಾ ಚಂದ್ರಶೇಖರ್ ಅವರು ದೊಗ್ಗಳ್ಳಿ ಜಯಣ್ಣ ಅವರ ಪುತ್ರಿಯಾಗಿದ್ದು, ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.