ನೀವುಂಟು, ಹೈಕಮಾಂಡ್ ಉಂಟು

ಸಂಪುಟ ವಿಸ್ತರಣೆ ಬಗ್ಗೆ ಕಿಡಿ ಕಾರುತ್ತಿರುವವರಿಂದ ಕೈ ಕೊಡವಿಕೊಂಡ ಸಿಎಂ ಯಡಿಯೂರಪ್ಪ

ದಾವಣಗೆರೆ, ಜ. 14 – ನನ್ನ ಇತಿ ಮಿತಿಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, 10-12 ಜನ ಇಲ್ಲಿ ಆರೋಪ ಮಾಡುವ ಬದಲು ಕೇಂದ್ರದ ನಾಯಕರ ಬಳಿಗೆ ಹೋಗಿ ಮಾತನಾಡಲಿ ಎಂದು ಹೇಳುವ ಮೂಲಕ ಸಂಪುಟ ವಿಸ್ತರಣೆ ಅಸಮಾಧಾನ ವನ್ನು ಹೈಕಮಾಂಡ್ ಹೆಗಲಿಗೆ ಹಾಕಿದ್ದಾರೆ.

ಹರಿಹರದಲ್ಲಿ ಆರಂಭವಾದ ಹರ ಜಾತ್ರೆ ಸಮಾ ರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಪತ್ರಕರ್ತ ರೊಂದಿಗೆ ಮಾತನಾಡುತ್ತಿದ್ದ ಅವರು, ಇಲ್ಲಿ ಹೇಳಿಕೆ ಕೊಡುವುದರ ಮೂಲಕ ಗೊಂದಲ ಉಂಟು ಮಾಡಿ, ವಾತಾವರಣ ಕೆಡಿಸುವ ಕೆಲಸ ಮಾಡುವುದು ಪಕ್ಷದ ಶಿಸ್ತಿಗೆ ಧಕ್ಕೆ ತಂದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನನ್ನ ಇತಿಮಿತಿ ಒಳಗೆ ಏನು ಮಾಡೋಕೆ ಸಾಧ್ಯವೋ ಅದನ್ನು ಮಾಡಿದ್ದೇನೆ. 10-12 ಜನ ಮಂತ್ರಿ ಮಾಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ಅವರು ಏನೇ ಆರೋಪ ಇದ್ದರೂ ಕೇಂದ್ರದ ನಾಯಕರಿಗೆ ದೂರು ನೀಡಲು ಯಾರೂ ಅಡ್ಡಿ ಮಾಡಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸಚಿವ ಸ್ಥಾನ ಖಾಲಿ ಇಟ್ಟುಕೊಂಡಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕೇಂದ್ರದ ನಾಯಕರ ಆಶೀರ್ವಾದ ತಮಗೆ ಇರುವುದರಿಂದ ಮುಂದಿನ ಎರಡು ವರ್ಷ ಉತ್ತಮ ಆಡಳಿತ ನಡೆಯಲಿದೆ ಎಂದೂ ಯಡಿಯೂರಪ್ಪ ಹೇಳಿದ್ದಾರೆ. 

ರಾಜ್ಯದ ಅಭಿವೃದ್ಧಿಗೆ ವಿಶೇಷ ಗಮನ ಕೊಡುತ್ತೇನೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕೇಂದ್ರದ ನಾಯಕರ ಆಶೀರ್ವಾದ ನನ್ನ ಮೇಲಿದೆ. ಹಣಕಾಸಿನ ಇತಿಮಿತಿಯಲ್ಲಿ ಮಾರ್ಚ್‌ನಲ್ಲಿ ಒಳ್ಳೆಯ ರೈತಪರ ಬಜೆಟ್‌ ನೀಡಲು ಪ್ರಯತ್ನಿಸುತ್ತೇನೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಆ ಮೂಲಕ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಪರೋಕ್ಷ ಸಂದೇಶ ನೀಡಿದ್ದಾರೆ.

ಮುಖ್ಯಮಂತ್ರಿಯವರನ್ನು ಸಿ.ಡಿ. ಮೂಲಕ ಬ್ಲಾಕ್‌ಮೇಲ್‌ ಮಾಡಲಾಗಿದೆ ಎಂಬ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಏನೇ ಆರೋಪ ಮಾಡುವುದಿದ್ದರೂ ಕೇಂದ್ರದ ನಾಯಕರಿಗೆ ದೂರು ಕೊಡಲಿ ಎಂದಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ ಮತ್ತಿತರರು ಉಪಸ್ಥಿತರಿದ್ದರು.

error: Content is protected !!