ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು

ದಾವಣಗೆರೆ, ಜ.13- ನಗರದ ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು ಯುವ ರೆಡ್ ಕ್ರಾಸ್ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ದೇಶಭಕ್ತಿ ಹಾಗೂ ಸಾಂಸ್ಕೃತಿಕ ಸಂಪನ್ನತೆಯಿಂದ ಆಚರಿಸಲಾಯಿತು. 

ಕಾರ್ಯಕ್ರಮವನ್ನು ಉದ್ಘಾಟಿಸಿದ ನಗರದ ರಾಮಕೃಷ್ಣ ಮಠದ ಶ್ರೀ ತ್ಯಾಗೀಶ್ವರಾನಂದಜೀ ವಿಶೇಷ ಉಪನ್ಯಾಸ ನೀಡಿದರು. ಭಾರತ ಮಾತೆಯ ವಿದ್ಯಾರ್ಥಿಗಳು ದೇಶದ ಸದೃಢತೆ ಹಾಗೂ ಆಧುನಿಕ ಅಭಿವೃದ್ಧಿಗಾಗಿ ಸ್ವಾಮಿ ವಿವೇಕಾನಂದರವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ಕೊಟ್ಟರು. 

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಹಾಗೂ ದೇಶದ ಅಭಿವೃದ್ಧಿಗಾಗಿ ವೈಯಕ್ತಿಕ ಆರೋಗ್ಯ, ಪರಿಸರ ಕಾಳಜಿ, ರಾಷ್ಟ್ರೀಯ ಸಾಮಾಜಿಕ ಮತ್ತು ಆರ್ಥಿಕ ಸ್ವಚ್ಛತೆ, ಅಧ್ಯಾತ್ಮಿಕ ಮನೋಭಾವನೆ, ಪ್ರಾಚೀನ ಮಾನವೀಯ ಮೌಲ್ಯಗಳು ಹಾಗೂ ಶೈಕ್ಷಣಿಕ ಸಕಾರಾತ್ಮಕ ಚಿಂತನೆ ಅಳವಡಿಸಿಕೊಂಡು ಭಾರತವನ್ನು ವಿಶ್ವ ಗುರುವಾಗಿಸುವಲ್ಲಿ ಶ್ರಮಿಸಬೇಕೆಂದರು. 

ದೇಶದ ದಾರಿದ್ರ್ಯ ನಿರ್ಮೂಲನೆಗೆ ಭ್ರಷ್ಟಾಚಾರ ಮುಕ್ತ ಹಾಗೂ ಶ್ರಮ ಸಂಸ್ಕೃತಿಯ ಜೀವನ ಇಂದು ಅಗತ್ಯವಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ ಕೆ.ಎಸ್.ಬಸವರಾಜಪ್ಪ ವಹಿಸಿದ್ದರು. ಪ್ರೊ. ಮಲ್ಲಿಕಾರ್ಜುನ್ ಆರ್.ಹಲಸಂಗಿ ಪ್ರಾಸ್ತಾವಿಕ ನುಡಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. 

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಬೊಮ್ಮಣ್ಣ, ಆಂತರಿಕ ಭರವಸೆ ಕೋಶದ ಪ್ರೊ. ಜೆ. ಅನಿತಾ ಕುಮಾರಿ, ಸ್ನಾತಕೋತ್ತರ ವಿಭಾಗದ ಪ್ರೊ. ಲೋಕೇಶ್ ರೆಡ್ಡಿ ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ಜೆ.ಕೆ.ಮಲ್ಲಿಕಾರ್ಜುನಪ್ಪ ಕಾಯಕವನ್ನು ಆಯೋಜಿಸಿದ್ದರು. 

error: Content is protected !!