ಮೂಲ ಬಿಜೆಪಿ ಶಾಸಕರ ಆಕ್ರೋಶದ ನಡುವೆ ಮಂತ್ರಿಮಂಡಲ ವಿಸ್ತರಣೆ
ಬೆಂಗಳೂರು, ಜ. 13- ಮೂಲ ಬಿಜೆಪಿ ಶಾಸಕರ ಆಕ್ರೋಶದ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿ, ಹೊಸದಾಗಿ ಏಳು ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ.
ಸರ್ಕಾರ ರಚನೆಗೆ ಪ್ರಮುಖ ಕಾರಣ ರಾದ ಮೂವರು ಸೇರಿದಂತೆ ಪಕ್ಷದ ನಾಲ್ವರು ಹಿರಿಯ ಶಾಸಕರಿಗೆ ಮಂತ್ರಿಮಂಡಲದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಸಂಪುಟ ಗಾತ್ರವನ್ನು 27 ರಿಂದ 33ಕ್ಕೆ ಹೆಚ್ಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಅವರನ್ನು ಸಂಪುಟದಿಂದ ಕೈಬಿಟ್ಟು, ಅವರಿಂದ ತೆರವಾದ ಸ್ಥಾನವನ್ನು ಹಾಗೆಯೇ ಖಾಲಿ ಉಳಿಸಿಕೊಂಡಿದ್ದಾರೆ.
ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾ ದವರಿಗೆ ಅಧಿಕಾರ ಕಲ್ಪಿಸುವ ಉದ್ದೇಶದಿಂದಲೇ ಇಂದು ಮಂತ್ರಿ ಮಂಡಲ ವಿಸ್ತರಿಸಿದರೂ, ಮುಖ್ಯಮಂತ್ರಿಯವರ ಅಪೇಕ್ಷೆಯಂತೆ ಎಲ್ಲ ರಿಗೂ ಅಧಿಕಾರ ಕೊಡಿಸಲು ಸಾಧ್ಯವಾಗಿಲ್ಲ.
ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಗೊಂಡ ಮುನಿರತ್ನ ನಾಯ್ಡು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿಯವರು 16 ತಾಸುಗಳ ಕಾಲ ಕಸರತ್ತು ನಡೆಸಿದರೂ, ವರಿಷ್ಠರು ಇದಕ್ಕೆ ಮಣೆ ಹಾಕಲಿಲ್ಲ.
ಎಂಟನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಉಮೇಶ್ ಕತ್ತಿ (ಹುಕ್ಕೇರಿ-ಬೆಳಗಾವಿ) ಅರವಿಂದ ಲಿಂಬಾವಳಿ (ಬೆಂಗಳೂರು ನಗರ) ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ (ಬಾಗಲಕೋಟೆ) ಆರ್. ಶಂಕರ್, ಸಿ.ಪಿ. ಯೋಗೇಶ್ವರ್, ಎಸ್. ಅಂಗಾರ (ಸೂಳ್ಯ-ದಕ್ಷಿಣ ಕನ್ನಡ) ಹಾಗೂ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ಸಚಿವರಿಗೆ ತಡರಾತ್ರಿ ನಂತರ ಮುಖ್ಯಮಂತ್ರಿಯವರು ಖಾತೆಗಳನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ.
ಅವಕಾಶ ವಂಚಿತರಿಂದ ಸಿಎಂ ಮೇಲೆ ಆಕ್ರೋಶ :
ಬೆಂಗಳೂರು, ಜ. 13- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ ಬೆನ್ನಲ್ಲೇ ಪಕ್ಷದ ಶಾಸಕರು ನಾಯಕತ್ವದ ವಿರುದ್ಧವೇ ಅಪಸ್ವರ ಎತ್ತಿದ್ದಾರೆ.
ಅದರಲ್ಲೂ ಕೆಲವರು ನಿಷ್ಟಾವಂತರನ್ನು ದೂರವಿಟ್ಟು, ಬ್ಲ್ಯಾಕ್ಮೇಲ್ಗಳಿಗೆ ಸಂಪುಟ ದಲ್ಲಿ ಮುಖ್ಯಮಂತ್ರಿಯವರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ. ವಿಧಾನಸಭೆ ಚುನಾವಣೆಗಳಲ್ಲಿ ಸೋತವರಿಗೆ ಮಂತ್ರಿಮಂಡಲದಲ್ಲಿ ಅವಕಾಶ ನೀಡಿ, ಪಕ್ಷದಲ್ಲಿ ನಾಲ್ಕು, ಐದು, ಆರು ಬಾರಿ ವಿಧಾನ ಸಭೆ ಪ್ರವೇಶಿಸಿದವರನ್ನು ದೂರವಿಟ್ಟಿರು ವುದು ಯಾತಕ್ಕೆ? ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು ಬ್ಲ್ಯಾಕ್ಮೇಲರ್ಗಳಿಗೆ ಅವಕಾಶ ನೀಡಿ, ನಿಷ್ಠಾವಂತರನ್ನು ಕಡೆಗಣಿಸಿದ್ದೀರಿ ಎಂದಿರುವುದಲ್ಲದೆ, ತಿಪ್ಪಾರೆಡ್ಡಿ ಅವರಂತಹ ಹಿರಿಯ ಶಾಸಕರಿದ್ದರೂ, ಸಿ.ಪಿ. ಯೋಗೇಶ್ವರ್ ಮಂತ್ರಿಯಾಗಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರು ಜಾತಿ ರಾಜಕಾರಣವನ್ನು ವೈಭವೀಕರಿಸಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ವಲಸಿಗರಿಗೆ ಹೆಚ್ಚು ಸ್ಥಾನಮಾನ ನೀಡಿದ್ದಾರೆ ಎಂದು ಸರ್ಕಾರಿ ಮುಖ್ಯಸಚೇತಕ ಸುನೀಲ್ಕುಮಾರ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಎರಡು ಬಾರಿ ಸಂಪುಟ ವಿಸ್ತರಣೆಯಾದ ಸಂದರ್ಭದಲ್ಲೂ ಮೂಲ ಬಿಜೆಪಿ ಶಾಸಕರು ಅದರಲ್ಲೂ ನಿಷ್ಠಾವಂತರು ಅಪಸ್ವರ ಎತ್ತಿರಲಿಲ್ಲ. ಆದರೆ ಇಂದು ಮುಖ್ಯಮಂತ್ರಿ ವಿರುದ್ಧ ಸರಣಿ ಟ್ವೀಟ್ ಮಾಡಿ, ತಮ್ಮ ಕೋಪವನ್ನು ಕಾರಿಕೊಂಡಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸತೀಶ್ ರೆಡ್ಡಿ, ದಿವಂಗತ ಅನಂತಕುಮಾರ್ ಅವರು ಬದುಕಿದ್ದರೆ, ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
ಒಂದು ಹೆಜ್ಜೆ ಮುಂದು ಹೋಗಿರುವ ಅವರು, ರೀ ಯಡಿಯೂರಪ್ಪನವರೇ, ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು ಎಂದು ಟ್ವೀಟ್ನಲ್ಲೇ ಪ್ರಶ್ನಿಸಿದ್ದಾರೆ.
ನಿಮಗೆ ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಠಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೇ. ನಮ್ಮ ಕಷ್ಟ, ನಷ್ಟಗಳನ್ನು ಅರಿಯಲು ಅನಂತಕುಮಾರ್ ಇಲ್ಲದಿರುವುದು ಎದ್ದು ಕಾಣುತ್ತಿದೆ.
ಎಸ್.ಎ. ರಾಮದಾಸ್ ಪ್ರತ್ಯೇಕ ಟ್ವೀಟ್ ಮಾಡಿ, ಅನ್ಯ ಮಾರ್ಗದಲ್ಲಿ ಸಚಿವನಾಗುವುದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾದುದು. ನಾನು ಪಕ್ಷದ ಶಾಸಕನಾಗಿದ್ದು, ಪಕ್ಷ ನನ್ನ ತಾಯಿ ಮತ್ತು ಅದರ ಘನತೆ ಎಂದು ಅರಿತವನು. ನಾನೊಬ್ಬ ನಿಜವಾದ ಸ್ವಯಂ ಸೇವಕ.
ಹಳೆ ಮೈಸೂರು ಪ್ರಾಂತ್ಯಕ್ಕೆ ಆದ ಅನ್ಯಾಯ, ಮೈಸೂರು ಜಿಲ್ಲೆಯಲ್ಲಿ ಬೇರೆ ಯಾರನ್ನಾದರೂ ಮಂತ್ರಿ ಮಾಡಬಹುದಿತ್ತು ಎಂದಿದ್ದಾರೆ.
ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಆಕ್ರೋಶಗೊಂಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್, ರಾಜುಗೌಡ ನಾಯಕ್, ಸುನೀಲ್ಕುಮಾರ್ ಸೇರಿದಂತೆ ಮತ್ತಿತರೆ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.
ಅದರಲ್ಲು ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದು, ಸೋತವರನ್ನೆಲ್ಲ ಮಂತ್ರಿ ಮಾಡುವುದಾದರೆ ಜನರಿಂದ ಗೆದ್ದ ನಾವು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಕೂಡ ಸಂಪುಟಕ್ಕೆ ತಮ್ಮನ್ನು ಪರಿಗಣಿಸದಿರುವುದಕ್ಕೆ ಬೇಸರ ಹೊರಹಾಕಿದ್ದಾರೆ. ಸೋತ ಸಿ.ಪಿ.ಯೋಗೇಶ್ವರ್ ಅವರನ್ನು ಯಾವ ಕಾರಣಕ್ಕಾಗಿ ಮಂತ್ರಿ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಸರ್ಕಾರ ರಚನೆ ಮಾಡಲು ಸಹಕಾರ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಯಾವ ರೀತಿ ಸಹಾಯ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಸಂಪುಟದಲ್ಲಿ ಸಮಾನತೆ ಕಾಣುತ್ತಿಲ್ಲ. 50 ವರ್ಷಗಳ ರಾಜಕೀಯ ಮಾಡಿದ್ದೇ ವ್ಯರ್ಥವಾಯಿತು ಎಂಬ ನೋವು ಕಾಡುತ್ತಿದೆ. ನಾನು 6 ಬಾರಿ ಶಾಸಕನಾಗಿದ್ದೇನೆ. ನನ್ನಂತವರನ್ನೇ ಕಡೆಗಣಿಸುತ್ತಾರೆಂದರೆ, ನಮ್ಮ ನೋವು ಯಾರಿಗೆ ಹೇಳಿಕೊಳ್ಳಬೇಕು ಎಂದು ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಹಾವೇರಿ ಶಾಸಕ ನೆಹರು ಓಲೇಕಾರ್ ಕೂಡ ಸಂಪುಟದಲ್ಲಿ ಸ್ಥಾನಮಾನ ಸಿಗದಿರುವುದಕ್ಕೆ ಕಿಡಿಕಾರಿದ್ದಾರೆ. ನನಗೆ ಈ ಬಾರಿಯಾದರೂ ಮಂತ್ರಿಸ್ಥಾನ ಸಿಗಬಹುದೆಂಬ ನಿರೀಕ್ಷೆಯಿತ್ತು.
ಪರಿಶಿಷ್ಟ ಜಾತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ನನಗೆ ಈವರೆಗೂ ಯಾವುದೇ ದೂರವಾಣಿ ಕರೆ ಬಂದಿಲ್ಲ. ಬರುವ ಲಕ್ಷಣಗಳೂ ಇಲ್ಲ. ಸಚಿವನಾಗಬೇಕೆಂಬ ಆಸೆ ಬಿಟ್ಟು ಬಿಟ್ಟಿದ್ದೇನೆ ಎಂದು ಆಕ್ರೋಶದಿಂದ ನುಡಿದರು.
ಇದೇ ರೀತಿ ಕೆಲವು ಶಾಸಕರು ಬಹಿರಂಗವಾಗಿ ಮಾತನಾಡದಿದ್ದರೂ ಒಳಗೊಳಗೆ ವರಿಷ್ಠರ ತೀರ್ಮಾನಕ್ಕೆ ಆಕ್ರೋಶಗೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಿಂದ ಕೇವಲ ಮುರುಗೇಶ್ ನಿರಾಣಿಗೆ ಸ್ಥಾನ ನೀಡಲಾಗಿದೆ. ಈ ಭಾಗದಿಂದ ವಿಜಾಪುರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಪ್ಪುಗೌಡ ಪಾಟೀಲ್, ಸುರಪುರದ ರಾಜುಗೌಡ ನಾಯಕ್, ರಾಯಚೂರಿನ ಶಿವರಾಜ್ ಪಾಟೀಲ್, ಯಲಬುರ್ಗದ ಆಚಾರ್ ಹಾಲಪ್ಪ , ಶಿವನಗೌಡ ನಾಯಕ್, ಆರಗ ಜ್ಞಾನೇಂದ್ರ, ಪೂರ್ಣಿಮಾ ಶ್ರೀನಿವಾಸ್ ಮತ್ತಿತರರು ಅಸಮಾಧಾನಗೊಂಡಿದ್ದಾರೆ.
ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳಿಕೆ ನೀಡಿದರೆ ಪಕ್ಷದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕೆಲವರು ಹೇಳಲೂ ಆಗದೆ ಒಳಗೊಳಗೆ ಕುದಿಯುತ್ತಿದ್ದಾರೆ.
ವಲಸೆ ಬಂದವರಿಗೆ ಮಣೆ ಹಾಕುವುದಾದರೆ, ಪಕ್ಷಕ್ಕೆ ದುಡಿದ ನಾವೇನು ರಾಜಕೀಯ ಸನ್ಯಾಸಿಗಳೇ ಎಂದು ಅನೇಕ ಶಾಸಕರು ತಮ್ಮ ಆಪ್ತರ ಬಳಿ ಮಾತನಾಡಿಕೊಂಡಿದ್ದಾರೆ.
ಯಡಿಯೂರಪ್ಪನವರ ಸಂಪುಟದಲ್ಲಿ 15ಕ್ಕೂ ಹೆಚ್ಚಿನ ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಸಾಮಾಜಿಕ ನ್ಯಾಯ ಕೂಡ ಯಡಿಯೂರಪ್ಪ ಅವರ ಸಂಪುಟದಲ್ಲಿ ಕಾಣುತ್ತಿಲ್ಲ ಎಂಬ ಆರೋಪಗಳಿವೆ. ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಬಳಿಕ ಬಿಜೆಪಿಯಲ್ಲಿ ಮತ್ತೊಂದು ಹಂತದ ರಾಜಕೀಯ ವಿಪ್ಲವ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಲಬುರಗಿ, ಯಾದಗಿರಿ, ವಿಜಯಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ದಾವಣಗೆರೆ, ಕೊಡಗು, ಚಾಮರಾಜನಗರ, ಉಡುಪಿ, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಶಾಸಕರಿಗೆ ಮಂತ್ರಿಗಳಾಗುವ ಅದೃಷ್ಟ ಸಿಕ್ಕಿಲ್ಲ. ಹೀಗಾಗಿ ಈ ಜಿಲ್ಲೆಗಳ ಶಾಸಕರಲ್ಲಿ ಅಸಮಾಧಾನವಿದೆ.
ಸರ್ಕಾರ ರಚನೆಗೆ ಕಾರಣರಾದ ಹಾಗೂ ವಿಧಾನಪರಿಷತ್ನ ಸದಸ್ಯರಾದ ಎಂಟಿಬಿ ನಾಗರಾಜ್, ಸಿ.ಪಿ. ಯೋಗೇಶ್ವರ್, ಆರ್. ಶಂಕರ್ಗೆ ಅವಕಾಶ ನೀಡಿದರಾದರೂ, ಮುನಿರತ್ನ ಹಾಗೂ ಹೆಚ್.ವಿಶ್ವನಾಥ್ ಅವರಿಗೆ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಮುಖ್ಯಮಂತ್ರಿಯವರು ಮಾಡಿದ ಶಿಫಾರಸ್ಸಿಗೆ ಮೂರು ಮಂದಿಗೆ ಮಾತ್ರ ಅವಕಾಶ ನೀಡಿ, ಉಳಿದ ಹೆಸರುಗಳನ್ನು ವರಿಷ್ಠರೇ ಕಳುಹಿಸಿಕೊಟ್ಟಿದ್ದಾರೆ.
ವರಿಷ್ಠರು ಕಳುಹಿಸಿದ ಪಟ್ಟಿಯಲ್ಲಿ ಕೆಲ ಬದಲಾವಣೆ ಮಾಡಿ, ಮುನಿರತ್ನ ನಾಯ್ಡು ಸೇರಿದಂತೆ ತಮಗೆ ಬೇಕಾದ ಇಬ್ಬರನ್ನು ತೆಗೆದುಕೊಳ್ಳಲು ಇಂದು ಬೆಳಿಗ್ಗೆ 11 ಗಂಟೆಯವರೆಗೂ ಹರಸಾಹಸ ನಡೆಸಿದರು.
ಮುಖ್ಯಮಂತ್ರಿಯವರ ಮನವಿಗೆ ವರಿಷ್ಠರು ಸ್ಪಂದಿಸದ ಕಾರಣ 11.30ಕ್ಕೆ ಮಂತ್ರಿಮಂಡಲಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ಹಾಗೂ ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡುವ ಪ್ರಸ್ತಾವವನ್ನು ರಾಜಭವನಕ್ಕೆ ಕಳುಹಿಸಿ, ನಂತರ ಮಾಧ್ಯಮಗಳಿಗೆ ಅಧಿಕೃತವಾಗಿ ಸಂಪುಟಕ್ಕೆ ಸೇರ್ಪಡೆಗೊಳ್ಳುವವರ ಪಟ್ಟಿ ಬಿಡುಗಡೆ ಮಾಡಿದರು.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ವಾಜುಭಾಯ್ ರೂಢಾಬಾಯ್ ವಾಲಾ, ನೂತನ ಸದಸ್ಯರಿಗೆ ಗೌಪ್ಯತಾ ವಿಧಿ ಬೋಧಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ರಾಜಭವನದ ಪ್ರವೇಶಕ್ಕೆ ರಾಜ್ಯಪಾಲರು ಭಾರೀ ನಿರ್ಬಂಧ ಹೇರಿದ್ದರಿಂದ ಸಾರ್ವಜನಿಕರು ಹಾಗೂ ಸಂಪುಟಕ್ಕೆ ಸೇರ್ಪಡೆಗೊಂಡ ಸದಸ್ಯರ ಕುಟುಂಬದ ಸದಸ್ಯರಿಗೂ ಒಳಪ್ರವೇಶವಿರಲಿಲ್ಲ.
ಸಚಿವರು, ಶಾಸಕರು, ಸಂಸದರು ಹಾಗೂ ಕೆಲ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲೇ ಏಳು ಮಂದಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಹೊರತುಪಡಿಸಿದರೆ, ಉಳಿದ ಯಾವುದೇ ರಾಜಕೀಯ ಪಕ್ಷಗಳ ನಾಯಕರು ಹಾಗೂ ಜನಪ್ರತಿನಿಧಿಗಳು ಸಮಾರಂಭದಿಂದ ದೂರ ಉಳಿದಿದ್ದರು.
ನಿಗದಿತ ಸಮಯಕ್ಕಿಂತ 12 ನಿಮಿಷ ತಡವಾಗಿ ಕಾರ್ಯಕ್ರಮ ಆರಂಭಗೊಂಡರೂ, 23 ನಿಮಿಷಗಳಲ್ಲೇ ಮುಕ್ತಾಯಗೊಂಡಿತು.
ಇಂದು ಸೇರ್ಪಡೆಗೊಂಡ ನೂತನ ಸಚಿವರಲ್ಲಿ ತಲಾ ಇಬ್ಬರು ವೀರಶೈವ ಹಾಗೂ ಕುರುಬ ಸಮುದಾಯ ಉಳಿದಂತೆ ಪರಿಶಿಷ್ಠಜಾತಿ ಹಾಗೂ ವರ್ಗಕ್ಕೆ ತಲಾ ಒಂದು ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ವಿಧಾನಸಭೆಗೆ ಎಂಟು ಬಾರಿ ಆಯ್ಕೆಗೊಂಡಿದ್ದರೂ, ಉಮೇಶ್ ಕತ್ತಿ ಅವರನ್ನು ಇಷ್ಟು ದಿನಗಳ ಕಾಲ ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ವರಿಷ್ಠರು ಅವಕಾಶ ಮಾಡಿಕೊಟ್ಟಿರಲಿಲ್ಲ. ಮೊದಲ ಎರಡು ವಿಸ್ತರಣೆಗಳಲ್ಲೂ ಸರ್ಕಾರ ರಚನೆಗೆ ಕಾರಣಕರ್ತರಾದವರಿಗೆ ಹೆಚ್ಚು ಅವಕಾಶ ನೀಡಲಾಗಿತ್ತು.
ವರಿಷ್ಠರು ಮಧ್ಯೆ ಪ್ರವೇಶ ಮಾಡಿದ್ದರಿಂದ ಪಕ್ಷದ ಹಿರಿಯ ಸದಸ್ಯರಾದ ಅರವಿಂದ ಲಿಂಬಾವಳಿ, ಎಸ್. ಅಂಗಾರ ಅವರಿಗೆ ಮಂತ್ರಿಯಾಗುವ ಅವಕಾಶ ದೊರೆಯಿತು. ಲಿಂಬಾವಳಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರೆ, ಮೀಸಲು ಕ್ಷೇತ್ರದಿಂದ ಸತತವಾಗಿ ಆರನೇ ಬಾರಿ ವಿಧಾನಸಭಾ ಪ್ರವೇಶ ಮಾಡಿದ್ದಾರೆ.