ಹರಪನಹಳ್ಳಿ ತಾಲ್ಲೂಕು ಗ್ರಾಮಗಳ ರಸ್ತೆಯಲ್ಲಿ ಒಕ್ಕಲು ಮಾಡುತ್ತಿದ್ದ ರೈತರಿಗೆ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಅವರಿಂದ ಅರಿವು, ಎಚ್ಚರಿಕೆ.
ಹರಪನಹಳ್ಳಿ, ಜ.13- ರಸ್ತೆಯನ್ನು ಕಣ ಮಾಡಿಕೊಂಡು ಒಕ್ಕುತ್ತಿರುವ ರೈತರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಧಾನ್ಯಗಳೊಂದಿಗೆ ವಿಷ ಪೂರಿತ ರಾಸಾಯನಿಕ ಮಿಶ್ರಣವಾಗಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸಲು ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ರಸ್ತೆಗಿಳಿದು ಎಚ್ಚರಿಕೆ ನೀಡಿದ ಘಟನೆ ಜರುಗಿದೆ.
ನ್ಯಾಯಾಧೀಶರು ತಾಲ್ಲೂಕಿನ ಯಲ್ಲಾಪುರ, ನಾರಾಯಣಪುರ, ತೊಗರಿಕಟ್ಟಿ, ಹುಲಿಕಟ್ಟಿ, ಹಾರಕನಾಳ್ ಸಣ್ಣತಾಂಡ ಹಾಗೂ ಇತರೆ ಗ್ರಾಮಗಳ ರಸ್ತೆಯಲ್ಲಿ ಎಸಿ ಪ್ರಸನ್ನಕುಮಾರ, ತಹಶೀಲ್ದಾರ್ ನಂದೀಶ ಹಾಗೂ ಪೊಲೀಸರೊಂದಿಗೆ ಸಂಚರಿಸಿ ರಸ್ತೆಯಲ್ಲಿ ಕಣ ಮಾಡಿಕೊಂಡು ತೊಗರಿ, ರಾಗಿ ಮುಂತಾದ ಆಹಾರ ಧಾನ್ಯಗಳನ್ನು ಒಕ್ಕುತ್ತಿರುವ ರೈತರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಇದೇ ರೀತಿ ಮುಂದುವರೆದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ನ್ಯಾಯಾಧೀಶರು, ರಸ್ತೆಯಲ್ಲಿ ತೊಗರಿ, ರಾಗಿ ಕಾಳು ಕಡಿಗಳನ್ನು ಒಕ್ಕುವುದರಿಂದ ವಾಹನ ಸವಾರರು ಅಪಘಾತ ಮಾಡಿಕೊಂಡು ಮೃತಪಟ್ಟಿದ್ದಾರೆ. ಹಲವರು ಅಂಗವಿಕಲರಾಗಿದ್ದಾರೆ. ರಸ್ತೆಯಲ್ಲಿ ಸಾಗುವ ವಾಹನಗಳಿಂದ ಡೀಸೇಲ್, ಪೆಟ್ರೋಲ್ ಆಯಿಲ್‍ಗಳು ಪ್ರೋಕ್ಷಣೆಯಾಗುತ್ತದೆ. ಟೈರ್‍ಗಳಿಗೆ ಹತ್ತಿದ ಮಲಿನ, ವಿಷಕಾರಕ ಪದಾರ್ಥಗಳು ಆಹಾರ ಧಾನ್ಯ ಸೇರುತ್ತದೆ. ಇದರಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.
ರೈತರಿಗೆ ಸರ್ಕಾರವು ಕಣಗಳನ್ನು ಮಾಡಿಕೊಡುವುದಕ್ಕೆ ಸರ್ಕಾರದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ರೈತರು ಅನಿವಾರ್ಯವಾಗಿ ರಸ್ತೆಗೆ ಬರಬೇಕಾಗುತ್ತದೆ ಎಂದು ಅಭಿಪ್ರಾಯಿಸಿದರು.
ತಾಲ್ಲೂಕಿನ ಆಯಾಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ರಸ್ತೆ ಮಧ್ಯೆ ಒಕ್ಕಲು ಮಾಡುತ್ತೀರುವ ರೈತರಿಗೆ ಬುದ್ದಿ ಹೇಳಿ ಅವರಿಗೆ ಕಣಗಳಲ್ಲಿ ಒಕ್ಕಲು ಮಾಡಿಕೊಳ್ಳುವುದಕ್ಕೆ ಸಲಹೆ ನೀಡಬೇಕು. ಮಾತು ಕೇಳದೆ ಇರುವವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಸರ್ಕಾರದಿಂದ ಪಡೆಯುತ್ತಿರುವ ಎಲ್ಲಾ ಸೌಲಭ್ಯಗಳನ್ನು ಹಿಂಪಡೆಯಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ ಕುಮಾರ್, ತಹಶೀಲ್ದಾರ್ ನಂದೀಶ್, ಪಿ.ಎಸ್.ಐ. ಸಿ. ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರೇಗೌಡ್ರು, ಇಂಜಿನಿಯರ್ ನಿಂಗಪ್ಪ, ಕುಬೇಂದ್ರನಾಯ್ಕ್, ಪಿಡಿಓ ಚಂದ್ರನಾಯ್ಕ್, ಗ್ರಾಮಲೆಕ್ಕಾಧಿಕಾರಿ ನನ್ಯಾಸಾಬ್ ಮತ್ತು ಇತರರು ಇದ್ದರು.