ಅತಿ ಕಷ್ಟದ ದಿನಗಳಲ್ಲಿ ಮಾಧ್ಯಮ ಕ್ಷೇತ್ರ

ಪತ್ರಕರ್ತರೊಂದಿಗೆ ಸಂವಾದ ನಡೆಸಿದ ದಿನೇಶ್ ಅಮಿನ್ ಮಟ್ಟು

ದಾವಣಗೆರೆ, ಜ. 12- ಮಾಧ್ಯಮ ವೃತ್ತಿ ಉದ್ಯಮವಾಗಿ ಪರಿವರ್ತನೆಯಾದಾಗ ಬಂಡವಾಳ ಬರುತ್ತದೆ. ಪತ್ರಕರ್ತರಿಗೆ ವೇತನ ಸಿಗುತ್ತದೆ ಎಂಬ ಸಮಾಧಾನವಿತ್ತು. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಆ ಭರವಸೆಯೂ ಕಾಣುತ್ತಿಲ್ಲ ಎಂದು ಪ್ರಗತಿಪರ ಚಿಂತಕ ದಿನೇಶ್ ಅಮಿನ್ ಮಟ್ಟು ಕಳವಳ ವ್ಯಕ್ತಪಡಿಸಿದರು.

ಇಂದಿಲ್ಲಿ ಜಿಲ್ಲಾ ವರದಿಗಾರರ ಕೂಟದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ಪತ್ರಿಕೋದ್ಯಮ ಲಾಭವಿಲ್ಲದ ಉದ್ಯಮವಾಗಿದೆ. ಮಾಧ್ಯಮದ ಪಾಲಿಗೆ ಅತಿ ಕಷ್ಟದ ದಿನಗಳು ಎದು ರಾಗಿವೆ. ಪತ್ರಕರ್ತರ ಸಂಘಗಳೂ ಸಹ ಪತ್ರಕ ರ್ತರ ರಕ್ಷಣೆ ಬಗ್ಗೆ ಚಿಂತಿಸುತ್ತಿಲ್ಲ ಎಂದು ಹೇಳಿದರು.

ಇಂದು ಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತನಿಗೆ ನಾಳೆ ಆ ಸಂಸ್ಥೆಯಲ್ಲಿ ತನ್ನ ಕೆಲಸ ಮುಂದುವರೆಯುತ್ತದೆ ಎಂಬ ಭರವಸೆ ಇಲ್ಲವಾಗಿದೆ. ಯಾವುದೋ ಕಂಪನಿ ತನ್ನ ಕೆಲಸಗಾರರನ್ನು ತೆಗೆದು ಹಾಕಿದಾಗ ಸುದ್ದಿ ಮಾಡುವ ಪತ್ರಕರ್ತರು ತಮ್ಮದೇ ಸಹೋದ್ಯೋಗಿಗಳು ಕೆಲಸ ಕಳೆದುಕೊಂಡಾಗ ಬರೆಯಲಾಗುತ್ತಿಲ್ಲ ಎಂದರು.

ಬದುಕು ಸದೃಢವಾದಾಗಿದ್ದಾಗ ಪತ್ರಕರ್ತರು ಆದರ್ಶದ ಬಗ್ಗೆ ಮಾತನಾಡಬಹುದು. ಆದರೆ ಈಗ ಬದುಕುಳಿಯವುದು ಹೇಗೆ? ಎಂಬ ಪ್ರಶ್ನೆ ಪತ್ರಕರ್ತರಿಗೆ ಎದುರಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರಕ್ಕೆ ರಾಜಕಾರಣಿಗಳ ಪ್ರವೇಶವಾಗುತ್ತಿರುವುದು ಅತಿ ಅಪಾಯಕಾರಿ ಬೆಳವಣಿಗೆ. ಸಾರ್ವಜನಿಕರ ಅಭಿಪ್ರಾಯಗಳನ್ನೇ ತಿರುಚುವ ಪ್ರಯತ್ನಗಳನ್ನು ರಾಜಕಾರಣಿಗಳ ಒಡೆತನದಲ್ಲಿರುವ ಸಂಸ್ಥೆಗಳು ನಡೆಸುತ್ತಿದ್ದು, ಅದು ಅತಿ ಅಪಾಯಕಾರಿ ಎಂದರು.

ಬೇರೆ ಉದ್ಯಮಗಳ ಬಗ್ಗೆ ಆಸಕ್ತಿ ಇರುವವರು ಮಾಧ್ಯಮ ಕ್ಷೇತ್ರಕ್ಕೆ ಬರುವುದನ್ನು ತಡೆಯಬೇಕು. ಆದರೆ ಪ್ರಸ್ತುತ ದಿನಗಳಲ್ಲಿ ಅದು ಸಾಧ್ಯವಾಗದು ಎಂದು ಅಮಿನ್ ಮಟ್ಟು ಅಭಿಪ್ರಾಯಿಸಿದರು.

ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ ಇತರರು ಉಪಸ್ಥಿತರಿದ್ದರು.

error: Content is protected !!