ಕಳೆದ ಬಾರಿಗಿಂತ ಕಡಿಮೆ ಮೊತ್ತಕ್ಕೆ ಬಿಡ್ ಕರೆದ ವರ್ತಕರು
ಮಲೇಬೆನ್ನೂರು, ಮಾ.29- ಇಲ್ಲಿನ ಪುರ ಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಾರದ ಸಂತೆ ಹಾಗೂ ದಿನವಹಿ ಸಂತೆಯ ಬಹಿರಂಗ ಹರಾಜು ಮತ್ತು ಕುರಿ, ಕೋಳಿ ಮಟನ್ ಮಾರುಕಟ್ಟೆಗಳ ಬಹಿರಂಗ ಹರಾಜು ವಾಗ್ವಾದ, ಗದ್ದಲ – ಗೊಂದಲಗಳ ಗೂಡಾಗಿತ್ತು.
ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ ಅವರ ನೇತೃತ್ವದಲ್ಲಿ ನಡೆದ ಬಹಿರಂಗ ಹರಾಜು ಸಭೆಯ ಆರಂಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ರವಿ ಪ್ರಕಾಶ್ ಅವರು ಹರಾಜಿನ ಷರತ್ತುಗಳನ್ನು ಓದಿ ತಿಳಿಸಿದರು.
ಷರತ್ತುಗಳನ್ನು ಓದುತ್ತಿರುವಾಗಲೇ ವರ್ತಕರು ಈ ಹಿಂದೆ ಹರಾಜಿನಲ್ಲಿ ಮಳಿಗೆ ಹಾಗೂ ಸಂತೆ ಹರಾಜು ಪಡೆದು, ಕೋವಿಡ್ ಲಾಕ್‌ಡೌನ್‌ನಿಂದ ಬಹಳ ನಷ್ಟವಾಗಿದೆ. ಬಂದ್ ಮಾಡಲಾಗಿದ್ದ ದಿನಗಳನ್ನು ಮುಂದುವರೆಸಿ ಕೊಟ್ಟಿಲ್ಲ ಎಂದು ಗದ್ದಲ ಮಾಡಿದರು.
ಇದರ ನಡುವೆಯೂ 2022-23 ನೇ ಸಾಲಿನ ಕುರಿ-ಕೋಳಿ ಮಟನ್ ಮಾರುಕಟ್ಟೆಯ 16 ಮಳಿಗೆಗಳು 8,36,700 ರೂ.ಗಳಿಗೆ ಬಿಡ್ ಆದವು. ಆದರೆ 2021-22ನೇ ಸಾಲಿನ ಬಿಡ್ ಮೊತ್ತಕ್ಕೆ 2 ಲಕ್ಷ ರೂ. ಕಡಿಮೆ ಬಿಡ್ ಆಗಿದ್ದರಿಂದ ಈ ಬಗ್ಗೆ ಆಡಳಿತಾಧಿಕಾರಿಗಳಾದ ಉಪವಿಭಾ ಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಅವರು ಅನುಮೋದಿಸಿದ ನಂತರ ಬಿಡ್‌ದಾರರ ಹೆಸರು ಪ್ರಕಟಿಸುವುದಾಗಿ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ ತಿಳಿಸಿದರು. ವಾರದ ಸಂತೆ ಮತ್ತು ದಿನವಹಿ ಸಂತೆಯ ಬಹಿರಂಗ ಹರಾಜಿನಲ್ಲೂ ಕೂಡಾ ಭಾರೀ ವ್ಯತ್ಯಾಸ ಆಗಿದೆ.
2022-23 ನೇ ಸಾಲಿನ ವಾರದ ಸಂತೆ ಬಿಡ್ ಮೊತ್ತ 2 ಲಕ್ಷ ರೂ. ಮಾತ್ರ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 1.55 ಲಕ್ಷ ರೂ. ಕಡಿಮೆ ಆಗಿದೆ. ದಿನವಹಿ ಸಂತೆ ಬಿಡ್ ಮೊತ್ತ 1.50 ಲಕ್ಷ ರೂ. ಆಗಿದ್ದು, ಕಳೆದ ವರ್ಷಕ್ಕಿಂತ 91 ಸಾವಿರ ರೂ. ಕಡಿಮೆ ಬಿಡ್ ಆಗಿದೆ.
ಸಭೆಯಲ್ಲಿ ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಸಿ. ಅಬ್ದುಲ್ ಮಜೀದ್, ಬಿ. ಮಂಜುನಾಥ್, ಖಲೀಲ್, ಭೋವಿ ಶಿವು, ಬೆಣ್ಣೆಹಳ್ಳಿ ಸಿದ್ದೇಶ್, ನಯಾಜ್, ದಾದಾಪೀರ್, ಟಿ. ಹನುಮಂತಪ್ಪ, ಟಿ. ವಾಸಣ್ಣ, ಎ.ಕೆ. ಲೋಕೇಶ್ ಮತ್ತು ಕೆ.ಪಿ. ಗಂಗಾಧರ್, ಜಿಗಳೇರ ಹಾಲೇಶಪ್ಪ, ಓ.ಜಿ. ಕುಮಾರ್, ಯುಸೂಫ್, ಬಿ. ಸುರೇಶ್, ಬರ್ಕತ್ ಅಲಿ, ಚಮನ್ ಷಾ, ಎಂ.ಬಿ. ರುಸ್ತುಂ. ಮುನೀರ್ ಸಾಬ್, ಪುರಸಭೆ ಅಧಿಕಾರಿಗಳಾದ ದಿನಕರ್, ಗಣೇಶ್, ಪ್ರಭು, ಉಮೇಶ್, ಪ್ರವೀಣ್ ಹಾಜರಿದ್ದರು.